ಕನ್ನಡಪ್ರಭ ವಾರ್ತೆ ಬೇಲೂರುಪಟ್ಟಣದ ಏಳನೇ ವಾರ್ಡ್‌ ಹಾಗು ವೈಕುಂಠ ಬೀದಿಯಲ್ಲಿ ನಡೆಯುತ್ತಿರುವ ರಸ್ತೆ ಹಾಗೂ ಚರಂಡಿ ಕಾಮಗಾರಿಗಳು ಅವೈಜ್ಞಾನಿಕವಾಗಿದ್ದು ಇದರಿಂದ ನಿವಾಸಿಗಳಿಗೆ ತೊಂದರೆ ಉಂಟಾಗಿದೆ ಎಂದು ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಹಾಗೂ ಮಾಜಿ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಆರೋಪಿಸಿದರು. ಈ ಕುರಿತು ಮಾತನಾಡಿದ ಅವರು, ಪಟ್ಟಣದಲ್ಲಿ ಕೆಲವು ಪ್ರಮುಖ ವಾರ್ಡ್‌ಗಳಲ್ಲಿ ಪೈಪ್‌ಲೈನ್ ಒಡೆದು ಹೋಗುವುದು ಹಾಗೂ ಯುಜಿಡಿ ಸಮಸ್ಯೆಗಳ ಕುರಿತು ಪುರಸಭೆಗೆ ಹೆಚ್ಚಾಗಿ ದೂರುಗಳು ಬರುತ್ತಿವೆ. ಇದರಿಂದ ತಕ್ಷಣ ಸಮಸ್ಯೆ ಪರಿಹರಿಸಲು ಕಂಟ್ರ್ಯಾಕ್ಟರ್‌ಗಳಿಗೆ ಸೂಚನೆ ನೀಡಿ, ವರ್ಕರ್‌ಗಳನ್ನು ಸ್ಥಳದಲ್ಲೇ ಇಟ್ಟು ಪೈಪ್‌ಲೈನ್ ಒಡೆದು ಹೋದಾಗ ತಕ್ಷಣ ದುರಸ್ತಿ ಮಾಡುವಂತೆ ಆದೇಶಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಗೆ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಈಗ ನಡೆಯುತ್ತಿರುವ ಕಾಮಗಾರಿಗಳು ಸರಿಯಾದ ಯೋಜನೆಯಿಲ್ಲದೆ ನಡೆಯುತ್ತಿವೆ. ರಸ್ತೆಪಕ್ಕದಲ್ಲಿ ಮಣ್ಣು ಹಾಕಿರುವುದರಿಂದ ಮಳೆ ಬಂದರೆ ಅದು ಕೆಸರಾಗಿ ಜನರಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ವಿಶೇಷವಾಗಿ ಈ ಪ್ರದೇಶದಲ್ಲಿ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಯಾರಾದರೂ ಜಾರಿ ಬಿದ್ದು ಗಾಯಗೊಂಡರೆ ಅದರ ಹೊಣೆ ಯಾರು ಹೊರುತ್ತಾರೆ ಎಂದು ಪ್ರಶ್ನಿಸಿದರು.

ಈ ಬಗ್ಗೆ ಪಿಡಬ್ಲ್ಯುಡಿ ಎಂಜಿನಿಯರ್‌ಗಳಿಗೆ ಹಲವು ಬಾರಿ ದೂರವಾಣಿ ಮೂಲಕ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಈಗಾಗಲೇ ಆರು ತಿಂಗಳಿನಿಂದ ಇದೇ ಪರಿಸ್ಥಿತಿ ಮುಂದುವರಿದಿದೆ. ರಸ್ತೆ ಕೆದಕಿರುವುದರಿಂದ ಆಟೋ, ಆ್ಯಂಬುಲೆನ್ಸ್ ಸಂಚಾರಕ್ಕೂ ತೊಂದರೆ ಆಗುತ್ತಿದೆ. ಮಕ್ಕಳು ಶಾಲೆಗೆ ಹೋಗುವುದಕ್ಕೂ, ಜನರು ದೇವಸ್ಥಾನ ಅಥವಾ ಮುಖ್ಯ ರಸ್ತೆಗೆ ತೆರಳುವುದಕ್ಕೂ ಕಷ್ಟವಾಗುತ್ತಿದೆ ಎಂದು ಅವರು ಹೇಳಿದರು. ಈ ವಿಷಯವನ್ನು ಶಾಸಕರ ಗಮನಕ್ಕೂ ತರಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ. ಕೆಲವೊಮ್ಮೆ ಪತ್ರಿಕೆಯಲ್ಲಿ ಹೇಳಿಕೆ ನೀಡಿದ ನಂತರ ಮಾತ್ರ ಸ್ವಲ್ಪ ಕೆಲಸ ಮಾಡಿ ಮತ್ತೆ ನಿಲ್ಲಿಸುತ್ತಾರೆ. ಚರಂಡಿ ಕಾಮಗಾರಿಯೂ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂದರು. ಇನ್ನೂ ಒಂದು ವಾರ ಸಮಯ ನೀಡಲಾಗುತ್ತದೆ. ಅದರೊಳಗೆ ಸಮಸ್ಯೆ ಪರಿಹಾರವಾಗದಿದ್ದರೆ 7ನೆಯ ವಾರ್ಡ್‌ ನಿವಾಸಿಗಳೊಂದಿಗೆ ಸೇರಿ ಚರಂಡಿ ತೆರವು ಮಾಡುವಂತಹ ಕ್ರಮ ಕೈಗೊಳ್ಳಬೇಕಾದ ಪರಿಸ್ಥಿತಿ ಉಂಟಾಗಬಹುದು ಎಂದು ತೀರ್ಥಕುಮಾರಿ ವೆಂಕಟೇಶ್ ಎಚ್ಚರಿಕೆ ನೀಡಿದರು.ಇದೇ ವೇಳೆ ವೈಕುಂಠ ಬೀದಿ ವಾರ್ಡ್‌ ನಿವಾಸಿಗಳಾದ ವಿಜಯಕೇಶವ ಹಾಗೂ ಕಿರಣ್ ಮಾತನಾಡಿ, ಇಲ್ಲಿ ನಿರ್ಮಿಸುತ್ತಿರುವ ಡ್ರೈನ್ ವ್ಯವಸ್ಥೆಯಲ್ಲಿ ನೀರಿನ ಹರಿವು ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಹೇಳಿದರು. ಮಳೆ ಬಂದಾಗ ಮಾತ್ರ ನೀರು ಯಾವ ದಿಕ್ಕಿಗೆ ಹರಿಯುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ರಸ್ತೆ ಎತ್ತರ ಹೆಚ್ಚಿಸಿರುವುದರಿಂದ ನೀರು ಸರಿಯಾಗಿ ಡ್ರೈನ್‌ಗೆ ಸೇರುತ್ತದೆಯೇ ಎಂಬುದು ಅನುಮಾನವಾಗಿದೆ ಎಂದು ಅವರು ತಿಳಿಸಿದರು.ಈ ಕಾಮಗಾರಿ ಯುಗಾದಿ ಹಬ್ಬದೊಳಗೆ ಮುಗಿಸಲು ಅಧಿಕಾರಿಗಳು ತಿಳಿಸಿದ್ದಾರೆ. ಯುಗಾದಿ ಉತ್ಸವ ಮಾರ್ಚ್ 19ರಂದು ನಡೆಯಲಿರುವುದರಿಂದ ಅದರೊಳಗೆ ರಸ್ತೆ ಡಾಂಬರೀಕರಣ ಸೇರಿದಂತೆ ಉಳಿದ ಕೆಲಸಗಳನ್ನು ಪೂರ್ಣಗೊಳಿಸುವ ಸಾಧ್ಯತೆ ಇದೆ ಎಂದಿದ್ದಾರೆ. ಜೊತೆಗೆ ಬೀದಿ ದೀಪಗಳಿಗಾಗಿ ಎಲ್‌ಇಡಿ ಸ್ಟ್ರೀಟ್ ಲೈಟ್ ವ್ಯವಸ್ಥೆಗೆ ಯುಜಿ ಕೇಬಲ್ ಅಳವಡಿಕೆ ಕಾರ್ಯ ಬಹುತೇಕ ಮುಗಿದಿದ್ದು, ಪಿಲ್ಲರ್ ಮೌಂಟ್ ಹಾಗೂ ಕನೆಕ್ಷನ್ ಮಾತ್ರ ಬಾಕಿ ಇದೆ. ಆ ಕೆಲಸವೂ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಅವರು ಮಾಹಿತಿ ನಮಗೆ ನೀಡಿದ್ದಾರೆ ಆದರೆ ಎಲ್ಲಾ ಹೇಳಿಕೆಗಳು ಜಾತ್ರೆ ಶುರುವಾಗುವುದರೊಳಗೆ ಮುಗಿಯಬೇಕು ಇಲ್ಲದಿದ್ದರೆ ಮುಂದೆ ಜನರು ಸಂಕಷ್ಟ ಎದುರಿಸುವ ಸಂದರ್ಭ ಒದಗಿ ಬರಬಹುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಯುಡಿಸಿ ಎಇಇ ಎಂಜಿನಿಯರ್‌ ಆನಂದ್ ಕಾಂಬ್ಲೆ ಮಾತನಾಡಿ ನಮಗೆ ಮಾಧ್ಯಮದ ಮೂಲಕ ಕೆಲವು ಅನಾನುಕೂಲತೆಗಳ ಬಗ್ಗೆ ಮಾಹಿತಿ ಬಂದಿದ್ದು ಗಮನ ಹರಿಸಿ ನೂನ್ಯತೆಗಳನ್ನು ಸರಿಪಡಿಸಿ ಉತ್ತಮ ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಕೆಲವು ಲೋಪ ದೋಷಗಳಿದ್ದರೂ ಅದನ್ನು ಸರಿಪಡಿಸಲಾಗುವುದು ಎಂದರು.