ಚುಂಚನಗಿರಿಯಿಂದ ಕೆಬಿ ಕ್ರಾಸ್ ನಡುವೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 150 ಎ ಕಾಮಗಾರಿ ಅವೈಜ್ಞಾನಿಕವಾಗಿ ಮಾಡಲಾಗುತ್ತಿದೆ. ಇದರಿಂದ ಮೃತ್ಯುವಿಗೆ ಆಹ್ವಾನ ನೀಡಿದಂತಾಗಿದೆ ಎಂದು ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ಮತ್ತು ತಾಲೂಕು ಸಂಚಾಲಕ ಮಲ್ಲೂರು ತಿಮ್ಮೇಶ ದೂರಿದ್ದಾರೆ.

ಕನ್ನಡಪ್ರಭವಾರ್ತೆ, ತುರುವೇಕೆರೆ

ಚುಂಚನಗಿರಿಯಿಂದ ಕೆಬಿ ಕ್ರಾಸ್ ನಡುವೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 150 ಎ ಕಾಮಗಾರಿ ಅವೈಜ್ಞಾನಿಕವಾಗಿ ಮಾಡಲಾಗುತ್ತಿದೆ. ಇದರಿಂದ ಮೃತ್ಯುವಿಗೆ ಆಹ್ವಾನ ನೀಡಿದಂತಾಗಿದೆ ಎಂದು ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ಮತ್ತು ತಾಲೂಕು ಸಂಚಾಲಕ ಮಲ್ಲೂರು ತಿಮ್ಮೇಶ ದೂರಿದ್ದಾರೆ.

ಪಟ್ಟಣದ ಡಿಎಸ್‌ಎಸ್ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಸೂಚನಾ ಫಲಕಗಳ ಅಳವಡಿಕೆ ಮಾಡುತ್ತಿಲ್ಲ. ರಸ್ತೆಯುದ್ದಕ್ಕೂ ಆಳವಾದ ಗುಂಡಿಗಳನ್ನು ತೆಗೆಯಲಾಗುತ್ತಿದೆ. ಇದರ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ಫಲಕ ಹಾಕಿಲ್ಲ. ಆಳವಾದ ಗುಂಡಿಯ ಉದ್ದಕ್ಕೂ ರಕ್ಷಣಾ ಗೋಡೆ ನಿರ್ಮಿಸಿಲ್ಲ. ಇವರ ಬೇಜವಾಬ್ದಾರಿತನಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ. ಈಗಾಗಲೇ ಹಲವಾರು ಅಪಘಾತಗಳು ನಡೆದು ಸಾರ್ವಜನಿಕರು ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ ಎಂದು ಅವರು ದೂರಿದರು. ಕಾಮಗಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯುದ್ದಕ್ಕೂ ಧೂಳು ತುಂಬಿದೆ. ಸುಗಮ ಓಡಾಟಕ್ಕೆ ತೊಂದರೆಯಾಗಿದೆ. ವಾಹನ ಸವಾರರ ಕಣ್ಣುಗಳಿಗೆ ಧೂಳು ತುಂಬಿಕೊಂಡು ವಾಹನ ಚಲಾವಣೆ ಮಾಡುವುದು ಅಸಾಧ್ಯವಾಗಿದೆ. ರಾತ್ರಿ ವೇಳೆಯಂತೂ ವಾಹನ ಸಂಚಾರ ಮಾಡುವುದು ಬಹಳ ಕಷ್ಟವಾಗಿದೆ. ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಮಾಡದೇ ಕಾಮಗಾರಿಗಳನ್ನು ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೂಕ್ತ ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಳಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುವುದು ಎಂದು ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ಮತ್ತು ತಾಲೂಕು ಸಂಚಾಲಕ ಮಲ್ಲೂರು ತಿಮ್ಮೆಶ್ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ತಾಲೂಕು ಸಂಘಟನಾ ಕಾರ್ಯದರ್ಶಿ ಬೋರಪ್ಪ, ಪಟ್ಟಣ ಸಂಚಾಲಕ ಶೇಖರ್, ತೊರೆಮಾವಿನಹಳ್ಳಿ ರವಿ ಉಪಸ್ಥಿತರಿದ್ದರು.