ಅನಂತ ನಾಡಿಗ್

ಕನ್ನಡಪ್ರಭ ವಾರ್ತೆ ತರೀಕೆರೆ

ಮಲೆನಾಡು ಹೆಬ್ಬಾಗಿಲು ತರೀಕರೆ ಪಟ್ಟಣ ಮತ್ತು ಸುತ್ತಮುತ್ತ ಬಿಸಿಲಿನ ಧಗೆ, ಬಿಸಿಲಿನ ಝಳ ದಿನದಿಂದ ದಿನಕ್ಕೆ ಏರುಮುಖವಾಗಿಯೇ ಹೆಚ್ಚುತ್ತಿದೆ, ಬಿಸಿಲಿನಿಂದ ನೆರಳಿನ ಆಶ್ರಯಕ್ಕಾಗಿ ಕೊಡೆ ಉಪಯೋಗಿಸಿದರೂ, ತೀವ್ರ ಬಿಸಿಲಿನಿಂದಾಗಿ ಕೊಡೆಯೂ ಕಾದು ಬಿಸಿ ಗಾಳಿಯಿಂದಲೇ ಆವರಿಸಿಕೊಂಡಿರುತ್ತದೆ.

ಬೆಳಿಗ್ಗೆ 7 ಗಂಟೆಯಿಂದಲೇ ಬಿಸಿಲಿನ ಶಾಖ ತೀವ್ರವಾಗುತ್ತಿದೆ, ಹೆಚ್ಚುತ್ತಿರುವ ಉಷ್ಣದಿಂದಾಗಿ ಎಷ್ಟು ನೀರು ಕುಡಿದರೂ ಬಾಯಾರಿಕೆ ತಣಿಯುವುದಿಲ್ಲ. ನೀರು ಹೆಚ್ಚು ಹೆಚ್ಚು ಸೇವಿಸಿದ ಹಾಗೆಲ್ಲಾ ಊಟಕ್ಕಿಂತ ಹೆಚ್ಚಾಗಿ ನೀರು ಕುಡಿಯುವುದೇ ಹೆಚ್ಚು ಅಪ್ಯಾಯಮಾನವಾಗಿದೆ. ಅಷ್ಟರ ಮಟ್ಟಿಗೆ ಬಿಸಿಲಿನ ತೀವ್ರತೆ ಜನರನ್ನು ಬಾಧಿಸುತ್ತಿದೆ.

ಮನೆ, ಹೋಟೆಲ್, ಅಂಗಡಿ, ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳಲ್ಲಿ ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ತಡಯಿಲ್ಲದಂತೆ ಪ್ಯಾನುಗಳು ತಿರುಗುತ್ತಿದ್ದರೂ, ಏರ್ ಕೂಲರ್ ಕಾರ್ಯ ನಿರ್ವಹಿಸುತ್ತಿದ್ದರೂ ಪ್ರಯೋಜನ ಇಲ್ಲದಂತಾಗಿದೆ, ಫ್ಯಾನುಗಳಿಂದ ತಂಪಾದ ಗಾಳಿ ಮತ್ತು ತಂಪಾದ ವಾತಾವರಣ ದೊರೆಯುತ್ತಿಲ್ಲ, ಬಿಸಿ ಗಾಳಿಯ ಪ್ರಭಾವವೇ ಹೆಚ್ಚು, ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು, ಅಂಗಡಿಗಳಿಗೆ ನಿತ್ಯದ ಕಾರ್ಯಗಳಿಗೆ ಅನಿವಾರ್ಯವಾಗಿ ಜನರು ಪೇಟೆಗೆ ಹೋಗಬೇಕಾಗಿದೆ, ಅಗೆಲ್ಲಾ ಮಾರ್ಗ ಮದ್ಯದಲ್ಲಿ ಅಕಸ್ಮಾತ್ ಮರದ ನೆರಳು ಸಿಕ್ಕರೆ ಸಹಜವಾಗಿಯೇ ನೆರಳಿನ ಆಶ್ರಯಕ್ಕಾಗಿ ತಮ್ಮ ಕಾಲ್ನಡಿಗೆಯನ್ನು ತುಸು ನಿಧಾನಗೊಳಿಸಬೇಕಾಗಿದೆ, ಅಷ್ಟು ಬಿಸಿಲು ಆವರಿಸಿರುತ್ತದೆ.


ತೀವ್ರ ಬಿಸಿಲಿನ ಧಘೆ ಮತ್ತು ಬಿಸಿಲಿನ ಝಳದಿಂದಾಗಿ ರಸ್ತೆಗಳೆಲ್ಲಾ ಕಾದು ರಸ್ತೆಯಿಂದ ಬಿಸಿಗಾಳಿ ಬೀಸುತ್ತಿರುತ್ತದೆ, ಸಂಜೆಯಾದರೂ ಬಿಸಿಲಿನ ತಾಪ ಕಡಿಮೆಯಾಗಿರುವುದಿಲ್ಲ. ಎಳೆನೀರು, ನಿಂಬೆ ಹಣ್ಣಿನ ಪಾನಕ, ಮಜ್ಜಿಗೆ, ಕಬ್ಬಿನ ಹಾಲು, ಕಲ್ಲಂಗಡಿ, ಕರ್ಬೂಜ, ಕಿತ್ತಲೆ, ದ್ರಾಕ್ಷಿ, ಬಾಳೆಹಣ್ಣು ಇತ್ಯಾದಿ ವಿವಿಧ ಬಗೆಯ ತಂಪಾದ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ.

ರಸ್ತೆಯಲ್ಲಾ ಖಾಲಿ ಖಾಲಿ:

ಪಟ್ಟಣದಲ್ಲಿ ಹೆಚ್ಚುತ್ತಿರುವ ಬಿಸಿಲ ಧಗೆ, ಬಿಸಿ ಗಾಳಿಯಿಂದ ಬಿಸಿಲಿನ ಝಳಕ್ಕೆ ಜನರು ಮನೆಯಿಂದ ಹೊರಗೆ ಬರುತ್ತಿಲ್ಲ, ರಸ್ತೆಗಳಲ್ಲಿ ಜನಸಂಚಾರ ಮತ್ತು ವಾಹನ ಸಂಚಾರಗಳು ಗಣನೀಯವಾಗಿ ಕಡಿಮೆಯಾಗಿದೆ, ರಸ್ತೆಗಳೆಲ್ಲಾ ಜನ ಸಂಚಾರವಿಲ್ಲದೆ ಖಾಲಿಯಾಗಿವೆ. ಹೀಗಾಗಿ ನಿತ್ಯದ ವಾಣಿಜ್ಯ ವಹಿವಾಟಿನ ಮೇಲೆ ಬಿಸಿಲು ತೀವ್ರ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ.

ಒಂದೆರೆಡು ಬಾರಿ ಬಂದ ಮಳೆ:

ಯುಗಾದಿ ಹಬ್ಬದ ಮುಂಚೆ ಮತ್ತು ನಂತರದ ದಿನಗಳಲ್ಲಿ ಮೋಡ ಕವಿದು ಒಂದೆರಡು ಬಾರಿ ತರೀಕೆರೆ ಮತ್ತು ಸುತ್ತಮುತ್ತ ಮಳೆ ಬಂದರೂ ಅದರಿಂದ ಅಂತಹ ಹೇಳಿಕೊಳ್ಳುವಷ್ಟರ ಮಟ್ಟಿಗೆ ವಾತಾವಾರಣ ತಂಪಾಗಲಿಲ್ಲ, ಬದಲಿಗೆ ಅದರಿಂದ ಮತ್ತಷ್ಟು ದುಪ್ಪಟ್ಟು ಸೆಖೆ ಹೆಚ್ಚಾಗಿದೆ ಅಷ್ಟೆ.

ಅಂತರ್ಜಲ ಕುಸಿತ:

ತೀವ್ರ ಬಿಸಿಲು ಹಾಗೂ ಹೆಚ್ಚಿದ ಉಷ್ಣಾಂಶದಿಂದಾಗಿ ಭೂಮಿಯಲ್ಲಿ ಜಲಕಣ್ಣುಗಳು ಮುಚ್ಚುವಂತಾಗಿದ್ದು ಭೂಮಿಯ ಅಂತರ್ಜಲ ಕಡಿಮೆಯಾಗುತ್ತಿದೆ, ತರೀಕೆರೆ ಕಸಬ ಹೋಬಳಿಯ ಕೆಲವು ಪ್ರದೇಶಗಳಲ್ಲಿ ಅಂತರ್ಜಲ ಕಡಿಮೆಯಾಗಿ, ಬೋರ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು ರೈತರು ಅಂತಕಕೊಳಗಾಗಿದ್ದಾರೆ ಎಂದು ಮ್ಯಾಮ್‌ಕೋಸ್ ನಿರ್ದೇಶಕ ಟಿ.ಎಲ್.ರಮೇಶ್ ತಿಳಿಸಿದ್ದಾರೆ.

ರೈತರಿಗೆ ಉತ್ಕೃಷ್ಠ ಮಟ್ಟದ ವಿದ್ಯುತ್ ಸರಬರಾಜಾಗದೆ, ಸಣ್ಣ ಪುಟ್ಟ ಬೆಳೆಗಳು, ತರಕಾರಿ ಬೆಳೆಗಳಿಗೆ ಸಾಕಷ್ಟು ನೀರಿನ ಸೌಲಭ್ಯ ದೊರಕದೆ ರೈತರು ಕಂಗಾಲಾಗಿದ್ದಾರೆ. 7 ಗಂಟೆ ಸತತವಾಗಿ ತ್ರಿಪೇಸ್ ವಿದ್ಯುತ್ ಸರಬಾರಜು ಮಾಡಬೇಕೆಂಬ ನಿಯಮ ಇದ್ದರೂ ಸಹ ಇಲಾಖೆ ನಿಯಮ ಪಾಲಿಸುತ್ತಿಲ್ಲ ಎಂದು ದೂರಿದ್ದಾರೆ

ಏಪ್ರಿಲ್, ಮೇ ತಿಂಗಳ ಬೇಸಿಗೆ ಮುಗಿದು, ಬೇಗ ಬೇಗನೆ ಮಳೆ ಬೀಳಲು ಪ್ರಾರಂಭವಾಗಿ ಹೊರಗಣ ವಾತಾವರಣ ತಂಪಾದರೆ ಸಾಕು ಎಂದು ಜನರು ಹೇಳುತ್ತಿದ್ದಾರೆ.