ನೆತ್ತಿ ಸುಡುವ ಕಾಯಕದಲ್ಲಿರುವ ಸೂರ್ಯನ ಪ್ರಖರತೆಗೆ ಸಾರ್ವಜನಿಕರು ಕಂಗಾಲು - ವ್ಯಾಪಾರಿಗಳ ಸಂಕಷ್ಟ

| N/A | Published : Mar 27 2025, 01:08 AM IST / Updated: Mar 27 2025, 12:48 PM IST

ನೆತ್ತಿ ಸುಡುವ ಕಾಯಕದಲ್ಲಿರುವ ಸೂರ್ಯನ ಪ್ರಖರತೆಗೆ ಸಾರ್ವಜನಿಕರು ಕಂಗಾಲು - ವ್ಯಾಪಾರಿಗಳ ಸಂಕಷ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಒಣಗುತ್ತಿರುವ ಗಂಟಲಿನ ದಾಹ ನೀಗಿಸಿಕೊಳ್ಳಲು ಮಜ್ಜಿಗೆ ಸೇರಿದಂತೆ ತಂಪು ಪಾನೀಯಗಳತ್ತ ಜನತೆ ಮುಖ ಮಾಡಿದ್ದಾರೆ.

ಶ್ರೀನಿವಾಸ ಬಬಲಾದಿ

  ಲೋಕಾಪುರ :  ನೆತ್ತಿ ಸುಡುವ ಕಾಯಕದಲ್ಲಿರುವ ಸೂರ್ಯನ ಪ್ರಖರತೆಗೆ ಸಾರ್ವಜನಿಕರು ಕಂಗಾಲಾಗಿದ್ದಾರೆ. ರಣ ಬಿಸಿಲಿನ ಹೊಡೆತಕ್ಕೆ ಜನ ಹೈರಾಣಾಗಿದ್ದಾರೆ. ಪ್ರಸಕ್ತ ಸಾಲಿನ ಬೇಸಿಗೆಯ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬಿರು ಬಿಸಿಲಿನಲ್ಲಿ ಹೊರಗೆ ಬರುವುದೆಂದರೆ ಒಂದು ರೀತಿ ಬಾಣಲೆಯಲ್ಲಿ ಬಿದ್ದು ಬೆಂದಂತಾಗುತ್ತಿದೆ. ಹಗಲು ಬಿಸಿಲಿನ ಹೊಡೆತವಾದರೆ ರಾತ್ರಿ, ವಿಪರೀತ ಸೆಕೆ ಹಿಂಸೆ ಕೂಡ ಜನರನ್ನು ಬಾಧಿಸುತ್ತಿದೆ.

ಒಣಗುತ್ತಿರುವ ಗಂಟಲಿನ ದಾಹ ನೀಗಿಸಿಕೊಳ್ಳಲು ಮಜ್ಜಿಗೆ ಸೇರಿದಂತೆ ತಂಪು ಪಾನೀಯಗಳತ್ತ ಜನತೆ ಮುಖ ಮಾಡಿದ್ದಾರೆ. ಬಿಸಿಲಿನ ತಾಪದ ಕಾರಣದಿಂದಾಗಿ ಪಟ್ಟಣದ ಮುಖ್ಯ ರಸ್ತೆಗಳು ಸಹ ಮಧ್ಯಾಹ್ನ 12 ರಿಂದ ಸಂಜೆ 5 ಗಂಟೆಯವರೆಗೆ ಜನರ ಓಡಾಟ ಕಡಿಮೆಯಾಗಿದೆ. ಎಳನೀರು, ಲಿಂಬೆಹಣ್ಣಿನ ಜ್ಯೂಸ್, ಕಲ್ಲಂಗಡಿ, ಐಸ್‌ಕ್ರೀಂ, ಕಬ್ಬಿನ ಹಾಲು ಮತ್ತಿತರ ಪಾನೀಯಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಸಹಜವಾಗಿ ಅವುಗಳ ದರವೂ ಹೆಚ್ಚಳಗೊಂಡಿದೆ.

₹2 ಗೆ ಒಂದರಂತೆ ಸಿಗುತ್ತಿದ್ದ ಲಿಂಬೆಹಣ್ಣು ₹5 ಗೆ ಏರಿಕೆಯಾಗಿದೆ. ಸೋಡಾ ಶರಬತ್‌ ₹20  ಉಳಿದ ಎಲ್ಲ ಹಣ್ಣುಗಳ ಜ್ಯೂಸ್ ₹25 -  30 ಕ್ಕೆ ಮಾರಾಟ ಮಾಡಲಾಗುತ್ತಿದೆ. ಎಳೆನೀರು ದರ ಸಹ ಗಗನಕ್ಕೆ ತಲುಪಿದ್ದು ₹30 ರಿಂದ ₹40 ತಲುಪಿದೆ. ಬಿಸಿಲಿನಿಂದಾಗಿ ಪಟ್ಟಣದ ತಾಪಮಾನ ಏರಿಕೆಯಾಗುತ್ತಲೇ ಇದೆ, ತಿಂಗಳಿಂದ ಪಟ್ಟಣದ ಉಷ್ಣಾಂಶ ಕನಿಷ್ಠ ೩೦ ಡಿಗ್ರಿಯಿಂದ ಗರಿಷ್ಠ ೩೮ ರವರೆಗೆ ಹೋಗಿದೆ.

ವ್ಯಾಪಾರಿಗಳ ಸಂಕಷ್ಟ:

ಬಿಸಿಲಿನ ಕಾರಣಕ್ಕೆ ಗ್ರಾಹಕರು ಸಹ ಬೆಳಗ್ಗೆ ಅಥವಾ ಸಂಜೆ ಮಾತ್ರ ಖರೀದಿಗೆ ಬರುತ್ತಿದ್ದಾರೆ. ಮಧ್ಯಾಹ್ನ ಯಾರು ಸುಳಿಯುವುದಿಲ್ಲ ತರಕಾರಿ ಮತ್ತು ಹಣ್ಣುಗಳನ್ನು ಬಿಸಿಲಲ್ಲಿ ಇಟ್ಟುಕೊಳ್ಳುವುದರಿಂದ ಅವು ಬೇಗನೆ ಬಾಡಿ ಹೋಗುತ್ತಿವೆ. ಗ್ರಾಹಕರು ಖರೀದಿ ಮಾಡಲು ಹಿಂದೇಟು ಹಾಕುತ್ತಾರೆ. ಅವುಗಳಿಗೆ ಎಷ್ಟೇ ನೀರು ಹಾಕಿದರೂ ಸಾಲದು, ತಕ್ಷಣ ಒಣಗಿ ಹೋಗುತ್ತಿವೆ ಎಂದು ಹೂವಿನ ವ್ಯಾಪಾರಸ್ಥರಾದ ರವಿ ಹೂಗಾರ ಕನ್ನಡಪ್ರಭಾ ಪತ್ರಿಕೆ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬಿಸಿಲು ಅಧಿಕವಾಗಿರುವುದರಿಂದ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬಾಯಾರಿಕೆ ಇಲ್ಲದಿದ್ದರೂ ಕೂಡ ನೀರು ಸೇವಿಸುವುದು ಅವಶ್ಯ. ದ್ರವ ಆಹಾರಕ್ಕೆ ಆದ್ಯತೆ ನೀಡುವುದರ ಜತೆಗೆ ನೀರಿನಾಂಶ ಇರುವಂತಹ ಹಣ್ಣುಗಳನ್ನು ಸೇವಿಸಬೇಕು. ತಿಳಿ ಬಣ್ಣದ ಮತ್ತು ಕಾಟನ್ ಬಟ್ಟೆ ಧರಿಸುವುದು ಒಳ್ಳೆಯದು.

ಡಾ. ಸಚೀನ ಬಾರಡ್ಡಿ, ವೈದ್ಯಾಧಿಕಾರಿ, ಲೋಕಾಪುರ

ಸುಡು ಬಿಸಿಲಿನಿಂದಾಗಿ ನಮ್ಮ ಬದುಕು ಸಹ ಬೆಂದು ಹೋಗಿದೆ. ತುತ್ತು ಅನ್ನಕ್ಕಾಗಿ ದಿನವಿಡೀ ಬಿಸಿಲಲ್ಲೇ ನಿಂತು ವ್ಯಾಪಾರ ಮಾಡಬೇಕಾದ ಅನಿವಾರ್ಯತೆ ನಮ್ಮದು. ಛತ್ರಿ ಅಥವಾ ಪ್ಲಾಸ್ಟಿಕ್ ಮುಚ್ಚಿಕೊಂಡರು ಬಿಸಿಲ ಹೊಡೆತ ತಪ್ಪುತ್ತಿಲ್ಲ. ಇದರಿಂದಾಗಿ ಮಧ್ಯಾಹ್ನ ವ್ಯಾಪಾರ ನಿಲ್ಲಿಸಿ ಬೆಳಗ್ಗೆ ಮತ್ತು ಸಂಜೆ ಮಾತ್ರ ಅಂಗಡಿ ಹಾಕುತ್ತಿದ್ದೇವೆ.

ಅಪ್ಪಣ್ಣ ಚಿಗರಡ್ಡಿ, ವ್ಯಾಪಾರಸ್ಥ ಗೊಬ್ಬರ ಅಂಗಡಿ