ಸಾರಾಂಶ
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯದೇ ಜನರ ವಿಶ್ವಾಸ ಕಳೆದುಕೊಂಡಿದೆ. ಇನ್ನುಮುಂದೆ ಏನೇ ಗ್ಯಾರಂಟಿ ಕೊಟ್ಟರೂ ಜನ ಒಪ್ಪಲ್ಲ. ಮೋದಿಯೇ ಪಕ್ಕಾ ಗ್ಯಾರಂಟಿ ಎನ್ನುವುದು ಮತದಾರರಿಗೆ ಮನವರಿಕೆಯಾಗಿದೆ
ಗದಗ: ಕಾಂಗ್ರೆಸ್ ಆಡಳಿತದಿಂದ ಜನ ಬೇಸತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಒಕ್ಕೂಟ ಒಡೆದು ಚಿಂದಿಯಾಗಿದ್ದು, ಮತದಾರರು ಚುನಾವಣೆ ಪೂರ್ವದಲ್ಲಿಯೇ ಬೇಸರಗೊಂಡಿದ್ದಾರೆ ಎಂದು ಮಾಜಿ ಸಚಿವ, ಬಳ್ಳಾರಿ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಹೇಳಿದರು.
ಶನಿವಾರ ಇಲ್ಲಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ, ಪಂ.ಪುಟ್ಟರಾಜ ಕವಿ ಗವಾಯಿಗಳವರ ಹಾಗೂ ಪಂಚಾಕ್ಷರಿ ಗವಾಯಿಗಳವರ ಗದ್ದುಗೆಯ ದರ್ಶನಾಶೀರ್ವಾದ ಪಡೆದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ಇಂದು ಉಭಯ ಶ್ರೀಗಳ ಗದ್ದುಗೆಯ ಆಶೀರ್ವಾದ ಪಡೆದಿದ್ದೇನೆ. ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ 28 ಸ್ಥಾನ ಗೆಲ್ಲುವ ಗುರಿ ನಮ್ಮದಾಗಿದೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯದೇ ಜನರ ವಿಶ್ವಾಸ ಕಳೆದುಕೊಂಡಿದೆ. ಇನ್ನುಮುಂದೆ ಏನೇ ಗ್ಯಾರಂಟಿ ಕೊಟ್ಟರೂ ಜನ ಒಪ್ಪಲ್ಲ. ಮೋದಿಯೇ ಪಕ್ಕಾ ಗ್ಯಾರಂಟಿ ಎನ್ನುವುದು ಮತದಾರರಿಗೆ ಮನವರಿಕೆಯಾಗಿದೆ. ಸಿದ್ಧರಾಮಯ್ಯ ಏನೇ ರಣತಂತ್ರ ರೂಪಿಸಿದರೂ ನಡೆಯಲಾರದು. ಮೋದಿ ಎಂದರೆ ವಿಶ್ವಾಸ, ಶಕ್ತಿ ಮತ್ತು ದೇಶದ ಸುಭದ್ರತೆ ಎನ್ನುವುದು ಅರಿವಾಗಿದೆ ಎಂದರು.
ಇನ್ನು ದಿಂಗಾಲೇಶ್ವರ ಶ್ರೀಗಳು ಧಾರವಾಡದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶ್ರೀರಾಮುಲು, ದಿಂಗಾಲೇಶ್ವರ ಶ್ರೀಗಳು ನಮಗೆಲ್ಲ ಗುರುಗಳು, ಶ್ರೀಗಳ ಬಗ್ಗೆ ನಮಗೆ ಗೌರವವಿದೆ. ಧರ್ಮಕ್ಕಾಗಿ ನಿಲ್ಲುವ ವ್ಯಕ್ತಿ ದಿಂಗಾಲೇಶ್ವರ ಶ್ರೀಗಳು. ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕೇ-ಬೇಡವೇ ಎಂಬ ವಿಚಾರವನ್ನು ಹಿರಿಯರು ಶ್ರೀಗಳ ಜತೆ ಚರ್ಚೆ ಮಾಡಬೇಕು. ಶ್ರೀಗಳಿಗೆ ಸ್ಪರ್ಧೆ ಮಾಡಬೇಡಿ ಎಂದು ಹೇಳುವಷ್ಟು ದೊಡ್ಡವ ನಾನಲ್ಲ. ಅವರು ಸ್ಪರ್ಧೆಯ ವಿಚಾರಕ್ಕೆ ಸಮುದಾಯದ ಹಿರಿಯರು ಅನೇಕ ಶ್ರೀಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಬಿಎಸ್‌ವೈ, ಪ್ರಹ್ಲಾದ ಜೋಶಿ ಅನೇಕರು ಮಾತುಕತೆ ನಡೆಸಲಿದ್ದಾರೆ ಎಂದರು.