ಜನಮುಖಿ ಸೇವೆಯಿಂದ ವ್ಯಕ್ತಿ ಅಜರಾಮರ

| Published : Mar 27 2025, 01:06 AM IST

ಸಾರಾಂಶ

ಮಾಳ್ವ ಪ್ರಾಂತ್ಯದ ರಾಣಿಯಾಗಿದ್ದ ಅಹಲ್ಯಾಬಾಯಿ ಹೋಳ್ಕರ್ ಅಧಿಕಾರ ಮತ್ತು ಹಣವನ್ನು ಸಮಾಜೋಪಯೋಗಿ ಕಾರ್ಯಗಳಿಗೆ ವಿನಿಯೋಗಿಸುವ ಮೂಲಕ ಭಾರತೀಯರ ಹೃದಯದಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ

ಗದಗ: ಅಧಿಕಾರ, ಅಂತಸ್ತು ಶಾಶ್ವತವಾದುದಲ್ಲ. ಇವುಗಳು ದೊರೆತ ಸಂದರ್ಭದಲ್ಲಿ ಜನಮಾನಸದಲ್ಲಿ ನೆಲೆ ನಿಲ್ಲುವ ಕಾರ್ಯ ಮಾಡಬೇಕು. ಜನರಿಂದಲೇ ದೊರೆಕಿರುವದರಿಂದ ಅವರಿಗೆ ಸಮರ್ಪಿಸುವ ಕೆಲಸ ಮಾಡುವವರು ಆದರ್ಶಪ್ರಾಯರಾಗುತ್ತಾರೆ. ಈ ನಿಟ್ಟಿನಲ್ಲಿ ರಾಣಿ ಅಹಲ್ಯಾಬಾಯಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದರು. ಸಾಮಾಜಿಕ ಕಾರ್ಯಗಳ ಜತೆಗೆ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದರು ಎಂದು ಓಂಕಾರೇಶ್ವರ ಮಠದ ಫಕೀರೇಶ್ವರ ಶಿವಾಚಾರ್ಯಸ್ವಾಮಿಗಳು ತಿಳಿಸಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗದುಗಿನ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನದಲ್ಲಿ ಜರುಗಿದ ಕಾಯಕರತ್ನ ಮೈಲಾರೆಪ್ಪ ಮೆಣಸಗಿ ಸ್ಮರಣಾರ್ಥ ಜರುಗಿದ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಹಾಯಕ ಪ್ರಾಧ್ಯಾಪಕಿ ಶೋಭಾ ಯಕ್ಕೇಲಿ ಉಪನ್ಯಾಸ ನೀಡಿ, ಮಾಳ್ವ ಪ್ರಾಂತ್ಯದ ರಾಣಿಯಾಗಿದ್ದ ಅಹಲ್ಯಾಬಾಯಿ ಹೋಳ್ಕರ್ ಅಧಿಕಾರ ಮತ್ತು ಹಣವನ್ನು ಸಮಾಜೋಪಯೋಗಿ ಕಾರ್ಯಗಳಿಗೆ ವಿನಿಯೋಗಿಸುವ ಮೂಲಕ ಭಾರತೀಯರ ಹೃದಯದಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾರೆ. ಉತ್ತಮ ಆಡಳಿತ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳು ಹಾಗೂ ಆಕೆ ಮಾಡಿದ ದಾನ, ದತ್ತಿಗಳು ಭಾರತೀಯ ಪರಂಪರೆ ಉಜ್ವಲಗೊಳಿಸಿದರು. ಯುದ್ಧದಾಹಿಯಾಗದೇ ಚಾಕಚಕ್ಯತೆಯಿಂದ ಸಮಸ್ಯೆಗಳನ್ನು ನಿವಾರಿಸಿ ಜನೋಪಯೋಗಿ ಕಾರ್ಯ ಮಾಡಿ ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ನಿಂತಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಅನೇಕ ರಾಜಮನೆತನಗಳು ಜನಕಲ್ಯಾಣವನ್ನೇ ಮುಖ್ಯ ಗುರಿಯಾಗಿಸಿಕೊಂಡು ಕಾರ್ಯ ಮಾಡಿರುವ ಹಿನ್ನೆಲೆಯಲ್ಲಿ ಕೆರೆಕಟ್ಟೆ, ವಾಸ್ತುಶಿಲ್ಪ ಕಾಣಬಹುದಾಗಿದೆ ಎಂದು ತಿಳಿಸಿದರು.

ಡಾ.ದತ್ತಪ್ರಸನ್ನ ಪಾಟೀಲ, ಜಯದೇವ ಮೆಣಸಗಿ ಮುಂತಾದವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೆ.ಎಚ್.ಬೇಲೂರ, ಅ.ದ. ಕಟ್ಟಿಮನಿ, ಡಾ.ಅನಂತ ಶಿವಪೂರ, ಡಾ. ರಾಜಶೇಖರ ದಾನರಡ್ಡಿ, ಬಸವರಾಜ ವಾರಿ, ರಾಚಪ್ಪ ಕುಪ್ಪಸದ, ಚನ್ನವೀರಪ್ಪ ದುಂದೂರ, ಸುಧಾ ಮೆಣಸಗಿ, ಎಂ.ಜೆ.ಮಮತಾ, ಉಮಾ ಪಾರ್ವತಿಮಠ, ಅರವಿಂದ ಹುಯಿಲಗೋಳಕರ, ಎಸ್.ಕೆ. ತೆಂಬದಮನಿ, ವಿ.ಬಿ. ದೇಶಪಾಂಡೆ, ಶ್ರೀಕಾಂತ ಹೂಲಿ, ಡಾ. ಬಿ.ಬಿ. ಹೊಳಗುಂದಿ, ಎಚ್.ಟಿ. ಸಂಜೀವಸ್ವಾಮಿ, ಬಿ.ಎಸ್. ಹಿಂಡಿ ಕೆ.ಜಿ.ವ್ಯಾಪಾರಿ, ಪ್ರ.ತೋ.ನಾರಾಯಣಪೂರ, ದಿಲೀಪಕುಮಾರ ಮುಗಳಿ ಮೊದಲಾದವರು ಉಪಸ್ಥಿತರಿದ್ದರು. ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.