ಕಾಂಗ್ರೆಸ್‌ ಅಭ್ಯರ್ಥಿ ಸಂದರ್ಶನ

| Published : Apr 21 2024, 02:19 AM IST

ಸಾರಾಂಶ

ಕಾಂಗ್ರೆಸ್‌ ನ ಹಲವು ಗ್ಯಾರಂಟಿ ಯೋಜನೆಗಳು ತಾಯಂದಿರಿಗೆ ಸಾಕಷ್ಟು ಅನುಕೂಲ ಕಲ್ಪಿಸಿವೆ. ಬಡವರಿಗೆ ಆರ್ಥಿಕ ಸಬಲತೆ ತಂದುಕೊಟ್ಟಿವೆ. ಒಂದಂತೂ ಸತ್ಯ ಕಾಂಗ್ರೆಸ್ ಗ್ಯಾರಂಟಿ ಪಕ್ಕಾ ಎಂದು ಜನ ನಂಬಿದ್ದಾರೆ ಎಂದು ಬೀದರ್‌ನ ಕಾಂಗ್ರೆಸ್ ಅಭ್ಯರ್ಥಿ ಸಾಗರ್‌ ಖಂಡ್ರೆ ಹೇಳಿದ್ದಾರೆ.

ಕಾಂಗ್ರೆಸ್ ಗ್ಯಾರಂಟಿ ಪಕ್ಕಾ ಎಂಬುದು ಜನರ ಬಲವಾದ ನಂಬಿಕೆ: ಖಂಡ್ರೆ

- ನನಗೆ ಯುವ ಜನಾಂಗದ ಒಲವಿದೆ, ಯುವ ಪೀಳಿಗೆ ನನ್ನಂಥ ಯುವಕರನ್ನೇ ಮೆಚ್ಚುತ್ತೆ- ಮೋದಿ ಅಲೆಗಿಂತ ಖೂಬಾ ದರ್ಪದ ವಿರುದ್ಧ, ನಮ್ಮ ಅಭಿವೃದ್ಧಿ ಪರ ಮತಗಳು ಬರಲಿವೆಅಪ್ಪಾರಾವ್ ಸೌದಿ

ಕನ್ನಡಪ್ರಭ ವಾರ್ತೆ ಬೀದರ್‌

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಅತ್ಯಂತ ಕಿರಿಯ ಸಾಗರ ಈಶ್ವರ ಖಂಡ್ರೆ. ಬೀದರ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಾಗರ ಖಂಡ್ರೆ 26ರ ಯುವಕ. ತಂದೆ ಈಶ್ವರ್‌ ಖಂಡ್ರೆ ಹಾಲಿ ಅರಣ್ಯ ಸಚಿವ, ತಾತ ಭೀಮಣ್ಣ ಖಂಡ್ರೆ ಉ.ಕ. ಪ್ರಭಾವಿ ನಾಯಕ. ಹೀಗೆ ರಾಜಕೀಯ ಕುಟುಂಬ ಹಿನ್ನೆಲೆ ಸಾಗರ್‌ ಯುವ ಜನಾಂಗದ, ಕ್ಷೇತ್ರದ ಅಭಿವೃದ್ದಿ ಯೋಜನೆಗಳ ಕನಸನ್ನು ಅವರು ಹೊತ್ತಿದ್ದಾರೆ. ಬಿಜೆಪಿಯಿಂದ 2 ಬಾರಿ ಸಂಸದರಾಗಿ ಆಯ್ಕೆಯಾಗಿ, ಕೇಂದ್ರದಲ್ಲಿ ಸಚಿವರಾಗಿರುವ ಭಗವಂತ ಖೂಬಾ ಇವರ ಎದುರಾಳಿ. ಚಿಕ್ಕ ವಯಸ್ಸಿನಲ್ಲೇ ಲೋಕಸಭಾ ಚುನಾವಣೆಗೆ ಧುಮುಕಿರುವ ಸಾಗರ ಈಶ್ವರ ಖಂಡ್ರೆ ‘ಕನ್ನಡಪ್ರಭ’ದೊಂದಿಗೆ ಬೀದರ್‌ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಬಗ್ಗೆ ತಮ್ಮ ಕನಸುಗಳನ್ನು ಹಂಚಿಕೊಂಡಿದ್ದು ಹೀಗೆ...

ಈ ವಯಸ್ಸಿಗೆ ರಾಜಕೀಯ ಎಂಟ್ರಿ ಬೇಕಿತ್ತಾ?.

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗುತ್ತಿದ್ದ ಬಡತನ ನನ್ನನ್ನು ಸಮಾಜ ಸೇವೆಯಲ್ಲಿ ಧುಮುಕುವಂತೆ ಮಾಡಿತು. ಹಳ್ಳಿಗಳಿಗೆ ಕಾರ್ಯಕ್ರಮಗಳಿಗೆ ತೆರಳುತ್ತಿದ್ದಾಗ ತಗಡಿನ ಶೆಡ್‌ನಲ್ಲಿ ವಾಸಿಸುತ್ತಿರುವ ಜನ, ಕುಡಿಯುವ ಗುಟುಕು ನೀರಿಗಾಗಿ ಅವರ ಅಲೆದಾಟ, ಸಾಲು, ಸಾಲು ಕೊಡಗಳನ್ನಿಟ್ಟುಕೊಂಡು ನಿಂತಿರುವ ಮಹಿಳೆಯರು, ಮಕ್ಕಳ ಸಂಕಷ್ಟ ನನ್ನ ಮನಸ್ಸನ್ನು ಘಾಸಿಗೊಳಿಸಿತು. ಜನರ ಸಮಸ್ಯೆಗಳಿಗ ಸ್ಪಂದಿಸುವ ಜವಾಬ್ದಾರಿ ನನ್ನದೂ ಕೂಡ ಎಂಬ ಭಾವನೆ ಬಂದು ರಾಜಕೀಯ ಕ್ಷೇತ್ರಕ್ಕೆ ಧುಮುಕುವಂತೆ ಮಾಡಿತು. ದೇವರ ದಯೆಯಿಂದ ಚಿಕ್ಕಂದಿನಿಂದಲೂ ನನಗೆ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಕಾಡಿಲ್ಲ. ನಾನು ಜೀವನಪೂರ್ತಿ ಆರಾಮವಾಗಿ ಕಾಲ ಕಳೆಯುತ್ತ ಜೀವನ ಸಾಗಿಸಬಹುದಾಗಿತ್ತು. ಆದರೆ, ನಾನು ಜನರ ಸಮಸ್ಯೆಗಳನ್ನು ಹತ್ತಿರದಿಂದ ಕಂಡವನು. ಅವುಗಳ ಪರಿಹಾರಕ್ಕಾಗಿ ಲೋಕಸಭಾ ಚುನಾವಣೆಗೆ ಧುಮುಕುವುದು ನನಗೆ ಒಂದು ಅವಕಾಶ ಎಂದರಿತೆ.

2019ರ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ತಂದೆಯನ್ನೇ ಸೋಲಿಸಿರುವ ನಿಮ್ಮನ್ನು ಗೆಲ್ಲಿಸ್ತಾರಾ?.

ಅದನ್ನು ಜನರೇ ತೀರ್ಮಾನ ಮಾಡಬೇಕು. ನಮ್ಮ ಸೇವೆ ಇಷ್ಟವಾಯಿತಾ ಅಥವಾ ಇಲ್ಲವಾ ಎಂಬುದನ್ನು ಜನ ತೀರ್ಮಾನ ಮಾಡ್ತಾರೆ. ಏನೇ ಆದರೂ ನಮ್ಮ ಕೈಲಾದಷ್ಟು ಸೇವೆ ಮಾಡುತ್ತಿದ್ದೇವೆ.* ಕಾಂಗ್ರೆಸ್‌ ಗ್ಯಾರಂಟಿಗಳು ಎಷ್ಟರ ಮಟ್ಟಿಗೆ ಪೂರಕ?.ಕಾಂಗ್ರೆಸ್‌ ನ ಹಲವಾರು ಗ್ಯಾರಂಟಿ ಯೋಜನೆಗಳು ತಾಯಂದಿರಿಗೆ ಸಾಕಷ್ಟು ಅನುಕೂಲ ಕಲ್ಪಿಸಿವೆ. ಪದವೀಧರರ ಜನಮನ ಗೆದ್ದಿವೆ. ಬಡವರಿಗೆ ಆರ್ಥಿಕ ಸಬಲತೆ ತಂದುಕೊಟ್ಟಿವೆ. ಒಂದಂತೂ ಸತ್ಯ ಕಾಂಗ್ರೆಸ್ ಗ್ಯಾರಂಟಿ ಪಕ್ಕಾ ಎಂದು ಜನ ನಂಬಿದ್ದಾರೆ.* ಯುವ ಸಂಸದನಾದಲ್ಲಿ ಯೋಜನೆಗಳೇನಿವೆ?.

ರೈತರ ಸಮಸ್ಯೆಗಳ ಪರಿಹಾರ, ಯುವ ಜನತೆಗೆ ಉದ್ಯೋಗದ ಕೊರತೆ ನೀಗಿಸುವುದು, ಶೈಕ್ಷಣಿಕ ಪ್ರಗತಿ ಹಾಗೂ ಕ್ಷೇತ್ರದ ಅಭಿವೃದ್ಧಿ ಆದ್ಯತೆಯ ವಿಚಾರ. ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ತಂತ್ರಜ್ಞಾನ ಆಧರಿತ ಅಭಿವೃದ್ಧಿ ಕಾರ್ಯಗಳನ್ನು ನಮ್ಮ ಕ್ಷೇತ್ರಕ್ಕೂ ತರುವುದಕ್ಕಾಗಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿದರೆ, ಯಶ ಸಿಕ್ಕು ಜನರಿಗೆ ಒಳ್ಳೇಯದಾದೀತು ಎಂಬ ಕನಸಿನ ಬೆನ್ನು ಹತ್ತುತ್ತೇನೆ.

* ಇದು ಈಶ್ವರ ಖಂಡ್ರೆ ಹಾಗೂ ಖೂಬಾ ನಡುವಿನ ಚುನಾವಣೆ ಅಂತಾರಲ್ಲ?.

ಇದು ಬರೀ ವೈಯಕ್ತಿಕ ಚುನಾವಣೆ ಅಲ್ಲ. ಸಾಗರ ಅಥವಾ ಈಶ್ವರ ಖಂಡ್ರೆ ವರ್ಸಸ್‌ ಭಗವಂತ ಖೂಬಾ ಚುನಾವಣೆ ಅಲ್ಲ. ಇದು ಅಭಿವೃದ್ಧಿಗಾಗಿನ ಚುನಾವಣೆ. ಅಭಿವೃದ್ಧಿ ಹಾಗೂ ಅಭಿವೃದ್ಧಿಹೀನತೆಯ ಮಧ್ಯದ ಪೈಪೋಟಿ. ಬಿಜೆಪಿಯ ಭಗವಂತ ಖೂಬಾ ಅವರು ಕಳೆದ 10 ವರ್ಷಗಳಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ. ಆದರೆ, ನಮ್ಮ ಭಾಲ್ಕಿ ಕ್ಷೇತ್ರದಲ್ಲಾಗಲಿ, ಜಿಲ್ಲೆಯಲ್ಲಾಗಲಿ, ರಾಜ್ಯದಲ್ಲಾಗಲಿ, ಈ ಹಿಂದೆ ದೇಶದಲ್ಲಾಗಲಿ ಕಾಂಗ್ರೆಸ್ ಮಾಡಿರುವ ಮತ್ತು ಮಾಡುತ್ತಿರುವ ಅಭಿವೃದ್ಧಿಯನ್ನು ಕಂಡು ಲೋಕಸಭಾ ಕ್ಷೇತ್ರದ ಜನ ನಮಗೇ ಮತ ನೀಡ್ತಾರೆ ಎಂಬ ಭರವಸೆ ಇದೆ.

* ಕ್ಷೇತ್ರದ ಜನರ ನಾಡಿಮಿಡಿತ ಏನಂತಿದೆ?.

ಬೀದರ್ ಲೋಕಸಭಾ ಕ್ಷೇತ್ರದ ಸಂಸದರಾಗಿ ಭಗವಂತ ಖೂಬಾ ಅವರು ಒಂದು ದಶಕವಾಯ್ತು. ಕೇಂದ್ರ ಸಚಿವರಾಗಿರುವ ಭಗವಂತ ಖೂಬಾ ಅವರನ್ನು ಕ್ಷೇತ್ರದ ಶೇ.90ರಷ್ಟು ಜನ ಮುಖಾಮುಖಿ ಭೇಟಿಯೇ ಆಗಿಲ್ಲವಂತೆ. ಅಷ್ಟಕ್ಕೂ ಭೇಟಿಯಾದ ಕೆಲವೇ ಕೆಲ ಜನರಿಗೂ ಖೂಬಾ ಅವರ ಬಗ್ಗೆ ಅಸಮಾಧಾನವಿದೆ. ಭೇಟಿಗೆ ಹೋದಾಗ ಬೈದು ಕಳಿಸುವುದು, ರಸ್ತೆ, ನೀರು, ಚರಂಡಿ ಅವ್ಯವಸ್ಥೆ ಬಗ್ಗೆ ಜನ ಅಹವಾಲು ತೆಗೆದುಕೊಂಡು ಹೋದಾಗ ಅದು ಶಾಸಕರ ಕೆಲಸ, ನನ್ನದಲ್ಲ ಎಂದು ಹೇಳಿ, ಜನರನ್ನು ಸಾಗ ಹಾಕಿರುವ ಸನ್ನಿವೇಶಗಳು, ಜನರ ಕಷ್ಟ-ಸುಖ, ದೂರು-ದುಮ್ಮಾನಗಳಿಗೆ ಕಿವಿಗೊಡದ ಖೂಬಾ ವರ್ತನೆ ಜನರನ್ನು ಬೇಸರಕ್ಕೆ ತಳ್ಳಿವೆ.

*ಬಿಜೆಪಿಯಲ್ಲಿನ ಅಸಮಾಧಾನ ನಿಮಗೆ ವರದಾನವಾಗುತ್ತಾ?.

ಬಿಜೆಪಿಯಲ್ಲಿನ ಶಾಸಕರಷ್ಟೇ ಏಕೆ, ಯುವ ಕಾರ್ಯಕರ್ತರು ಸಹ ಭಗವಂತ ಖೂಬಾ ಬಗ್ಗೆ ಅಸಮಾಧಾನಗೊಂಡಿದ್ದಾರೆ. ನಾನು ಹೋದಲ್ಲೆಲ್ಲಾ ಬಿಜೆಪಿ ಕಾರ್ಯಕರ್ತರು ನನ್ನ ಬಳಿ ಬಂದು ನೀವು ಅವರ ತರಹ ಮಾಡಬೇಡಿ, ಮೊಬೈಲ್‌ ಕರೆ ಸ್ವೀಕರಿಸಿ, ಗ್ರಾಮಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗಳಿಗೆ ಕಿವಿಗೊಡಿ ಎಂದು ಹೇಳುತ್ತಿದ್ದಾರೆ. ಹೀಗಾಗಿ, ಇಲ್ಲಿ ಬಿಜೆಪಿ-ಕಾಂಗ್ರೆಸ್‌ ಎನ್ನುವುದಕ್ಕಿಂತ ಖೂಬಾ ಅವರ ದರ್ಪದ ವರ್ತನೆಯ ವಿರುದ್ಧ ಮತಗಳು ಬರಲಿವೆ.

* ಯುವ ಜನಾಂಗ ಮೋದಿ ಫ್ಯಾನ್‌ ಅಂತಾರಲ್ಲ, ಅದನ್ನು ನಿಮ್ಮತ್ತ ಸೆಳೆಯಲು ಏನ್‌ ಮಾಡ್ತೀರಾ?.

ಯುವ ಜನರಿಗೆ ಅವರದೆ ಆದ ಯೋಚನೆಗಳಿರಲಿ, ಯೋಜನೆಗಳಿರಲಿ, ಸಮಸ್ಯೆಗಳಿರಲಿ, ಹಿರಿಯರನ್ನು ಭೇಟಿಯಾಗಿ ಅವುಗಳನ್ನು ತೋಡಿಕೊಳ್ಳುವುದು, ಪರಿಹರಿಸಿಕೊಳ್ಳುವುದು ಕಷ್ಟ. ತಡರಾತ್ರಿ ಕರೆ ಮಾಡಿ ಹಿರಿಯರಿಗೆ ಮಾತನಾಡುವುದು ಹಿಂಜರಿಕೆಗೆ ಕಾರಣವಾಗುತ್ತದೆ. ಹೀಗಾಗಿ ನಾನು ಯುವಕ, ಯುವ ಜನಾಂಗದ ಪ್ರತಿನಿಧಿಯಾಗಿದ್ದರಿಂದ ನನ್ನನ್ನು ಸಹೋದರನಂತೆ ಕಾಣ್ತಿದ್ದಾರೆ, ನನ್ನೊಂದಿಗೆ ಬೆರೆಯುತ್ತಿದ್ದಾರೆ, ಸರಳವಾಗಿ ಭೇಟಿ ಆಗ್ತಾರೆ, ಸ್ನೇಹಿತನಂತೆ ಮಾತನಾಡಿಸ್ತಿದ್ದಾರೆ. ಹೀಗಾಗಿ ಇಂದಿನ ಯುವ ಜನಾಂಗದ ಪೀಳಿಗೆ ನನ್ನಂಥ ಯುವಕರನ್ನೇ ಮೆಚ್ಚುತ್ತೆ ಎಂಬ ನಂಬಿಕೆ ಇದೆ.ಜಿಲ್ಲೆಯಲ್ಲಂತೂ ಮೋದಿ ಅಲೆ ಕುರಿತಾಗಿನ ಚರ್ಚೆಗಿಂತ ಭಗವಂತ ಖೂಬಾ ಅವರ ವರ್ತನೆ ಬಗ್ಗೆ ಹೆಚ್ಚಿನ ಚರ್ಚೆಯಾಗುತ್ತಿದೆ. ಹೀಗಾಗಿ, ಈ ಬಾರಿ ಪಕ್ಷಕ್ಕಿಂತ ವ್ಯಕ್ತಿ, ವ್ಯಕ್ತಿತ್ವ, ಅಭ್ಯರ್ಥಿಯನ್ನು ನೋಡುತ್ತಿದ್ದಾರೆ. ಪಕ್ಷ ಬೇಡ, ಅಭ್ಯರ್ಥಿ ನೋಡಿ ಮತ ಹಾಕೋಣ ಎಂದು ನಿರ್ಧಾರ ಮಾಡಿದ್ದಾರೆ.