ಚಿಕ್ಕಮಗಳೂರು: ಬೋಗಸ್ ಗ್ಯಾರಂಟಿಯಿಂದ ಜನರು ಬೀದಿಗೆ ಬರುವ ಸ್ಥಿತಿ

| Published : Feb 01 2024, 02:00 AM IST

ಚಿಕ್ಕಮಗಳೂರು: ಬೋಗಸ್ ಗ್ಯಾರಂಟಿಯಿಂದ ಜನರು ಬೀದಿಗೆ ಬರುವ ಸ್ಥಿತಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಪ್ರವಾಸದಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಬಾಲಕೃಷ್ಣರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವೋಟ್ ಕೊಡದೆ ಹೋದ್ರೆ ಗ್ಯಾರಂಟಿ ರದ್ದಾಗಬಹುದು ಎಂದು ಮಾಗಡಿ ಶಾಸಕ ಬಾಲಕೃಷ್ಣ ಅವರು ಹೇಳಿರುವುದು ಪ್ರತಿಪಕ್ಷ ಬಿಜೆಪಿಗೆ ಆಹಾರವಾಗಿದೆ.

ಬುಧವಾರ ಜಿಲ್ಲಾ ಪ್ರವಾಸದಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಬಾಲಕೃಷ್ಣರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಮಾಗಡಿ ಶಾಸಕರು ಮಾಡಿರುವುದು ಬ್ಲಾಕ್ ಮೇಲ್, ಕಾಂಗ್ರೆಸ್ಸಿಗರಿಗೆ ನಾಚಿಕೆ ಆಗಬೇಕು, ಸರ್ಕಾರ ಬಂದು 8 ತಿಂಗಳಾದರೂ ಒಂದೂ ಹೊಸ ಯೋಜನೆ ಜಾರಿಗೆ ತಂದಿಲ್ಲ, ಬೋಗಸ್ ಗ್ಯಾರಂಟಿಯಿಂದಾಗಿ ಜನರು ಬೀದಿಗೆ ಬರುವ ಸ್ಥಿತಿ ಬಂದಿದೆ. ಶಾಲೆಗೆ ಹೋಗುವ ಮಕ್ಕಳಿಗೆ ಬಸ್ ಇಲ್ಲ, ರೈತರ ಪಂಪ್ ಸೆಟ್‌ಗೆ ಕರೆಂಟ್ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.

ಇವರುಗಳು ಯಾವ ಗ್ಯಾರಂಟಿ ಬಗ್ಗೆ ಮಾತನಾಡುತ್ತಾರೆ. ಅವುಗಳ ಬಗ್ಗೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಸೋಲು ಒಪ್ಪಿಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಪಕ್ಷ ಇದೆ ಎಂದರು.

3ರಾಜ್ಯದಲ್ಲಿ ಬಿಜೆಪಿ ಗೆಲುವು, ರಾಮಮಂದಿರ ಪುನರ್ ಪ್ರತಿಷ್ಠಾಪನೆ ಬಳಿಕ ದೇಶದ ವಾತಾವರಣ ಬದಲಾಗಿದೆ. ಈ ವಾತಾವರಣದಿಂದಾಗಿ ಕಾಂಗ್ರೆಸ್ ಭಯಭೀತವಾಗಿದೆ. ಹಾಗಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದ ಅವರು, ಜನರು ಬೋಗಸ್ ಗ್ಯಾರಂಟಿಗಳಿಗೆ ಮರುಳಾಗಬಾರದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಅಶೋಕ್ ಲೇವಡಿ:

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲ್ಲ ರಾಜ್ಯದಲ್ಲಿ ಗ್ಯಾರಂಟಿಗಳು ನಿಲ್ಲಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ದೃಷ್ಟಿ ಬೊಟ್ಟಿನ ಹಾಗೆ ರಾಜ್ಯದ ಒಂದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿತ್ತು. ಈ ಬಾರಿ ಅದೂ ಕೂಡ ಗೆಲ್ಲೋದಿಲ್ಲ ಎಂದರು.

ಶಾಸಕ ಬಾಲಕೃಷ್ಣರ ಹೇಳಿಕೆಯನ್ನು ಸ್ವಾಗತಿಸುತ್ತೇನೆ ಎಂದ ಅವರು, ಕಾಂಗ್ರೆಸ್ ಲೋಕಸಭಾ ಚುನಾವಣೆ ಸೋಲುವ ಮುಂದಾಲೋಚನೆಯಿಂದ ಆ ಪಕ್ಷದ ಮುಖಂಡರು ಗ್ಯಾರಂಟಿ ರದ್ದು ಎನ್ನುತ್ತಿದ್ದಾರೆ ಎಂದು ಲೇವಡಿ ಮಾಡಿದರು.