ಬಿಸಿಲು ಬವಣೆಯಿಂದ ಜೋಯಿಡಾದಲ್ಲಿ ಜನ, ಜಾನುವಾರುಗಳು ಹೈರಾಣು

| Published : Mar 20 2025, 01:19 AM IST

ಸಾರಾಂಶ

ಜೋಯಿಡಾ ತಾಲೂಕಿನಲ್ಲಿ ಕಳೆದ 15 ದಿನಗಳಿಂದ ಬಿಸಿಲ ಬವಣೆಯಿಂದ ಜನ, ಜಾನುವಾರುಗಳು ಹೈರಾಣಾಗಿವೆ. ತಡೆಯಲು ಸಾಧ್ಯವಿಲ್ಲದ ಬಿಸಿಲು, 25 ಡಿಗ್ರಿಯಿಂದ 28 ಡಿಗ್ರಿ ವರೆಗೆ ಇರುವ ತಾಪಮಾನ 38ರಿಂದ 40 ಡಿಗ್ರಿಗೆ ಏರಿಕೆ ಕಂಡಿದೆ. ಇದು ತಾಲೂಕಿನ ಇತಿಹಾಸದಲ್ಲಿಯೇ ಹೆಚ್ಚು ಎಂದು ಹೇಳಲಾಗುತ್ತಿದೆ.

ಜೋಯಿಡಾ: ತಾಳಲಾರೆನು ದೇವಾ ಸುಡುಬಿಸಿಲ ಪರಿತಾಪ... ಬರಿದಾಗಿದೆ ಜಲವೆಲ್ಲ, ಏಕೆ ಈ ಕೋಪ? ಜೀವ ಜಗದ ಮೇಲೇಕೆ ಈ ಮುನಿಸು ತಂದೆ, ಪರಿಸರ ನಾಶದ ಮನುಜಗೆ ಬುದ್ಧಿ ಕಲಿಸು ಇಂದೆ... ಇದು ಕವಿವಾಣಿ. ಈ ಕವಿವಾಣಿ ನಿಜವಾಗಿದೆ.

ತಾಲೂಕಿನಲ್ಲಿ ಕಳೆದ 15 ದಿನಗಳಿಂದ ಬಿಸಿಲ ಬವಣೆಯಿಂದ ಜನ, ಜಾನುವಾರುಗಳು ಹೈರಾಣಾಗಿವೆ. ತಡೆಯಲು ಸಾಧ್ಯವಿಲ್ಲದ ಬಿಸಿಲು, 25 ಡಿಗ್ರಿಯಿಂದ 28 ಡಿಗ್ರಿ ವರೆಗೆ ಇರುವ ತಾಪಮಾನ 38ರಿಂದ 40 ಡಿಗ್ರಿಗೆ ಏರಿಕೆ ಕಂಡಿದೆ. ಇದು ತಾಲೂಕಿನ ಇತಿಹಾಸದಲ್ಲಿಯೇ ಹೆಚ್ಚು ಎಂದು ಹೇಳಲಾಗುತ್ತಿದೆ.

ರೈತರು ಕಂಗಾಲು: ಅತಿಯಾದ ಸೆಕೆಯಿಂದ ರೈತರ ಕೆಲಸ ಕಾರ್ಯ ನಿರ್ವಹಣೆಗೆ ಆಳುಗಳ, ಕೆಲಸಗಾರರ ಕೊರತೆಯಾಗಿವೆ. ಕೆಲಸಕ್ಕೆ ಯಾರೂ ಸರಿಯಾಗಿ ಬರಲು ಸಿದ್ಧರಿಲ್ಲ, ಸೆಖೆಯಿಂದ ಕೆಲಸಗಾರರೂ ಹೈರಾಣಾಗಿ ಹೋಗಿದ್ದಾರೆ. ಮಾರ್ಚ್ ತಿಂಗಳ ಕೊನೆಯಲ್ಲಿ ರೈತರ ತಿರುವಳಿಗಳು, ಅಡಕೆ ಬೆಳೆಗಾರರ ಸಂಘದ ಸಾಲದ ತಿರುವಳಿ ಸಮಯಕ್ಕೆ ಕೆಲಸಗಾರರು ಸಿಗದೆ ರೈತರು ಪರದಾಡುತ್ತಿದ್ದಾರೆ. ಬಿಸಿಲ ತಾಪಕ್ಕೆ ಪರಿಹಾರ ನೀಡುವ ಲಿಂಬೆ ಹಣ್ಣು ಕೂಡಾ ಒಂದಕ್ಕೆ ಐದು ರುಪಾಯಿಯಿಂದ ಎಂಟು ರುಪಾಯಿಗೆ ಜಿಗಿದಿದೆ ಎಂದು ಕೃಷಿಕರು ಹೇಳುತ್ತಾರೆ.

ಜಾನುವಾರುಗಳು ನೀರಿಲ್ಲದೆ ಸೊರಗಿವೆ. ಕಾಡುಪ್ರಾಣಿಗಳು, ಪಕ್ಷಿಗಳು ರೈತರ ತೋಟದ ನೆರಳಿಗೆ ಬಂದು ನೀರು ಹುಡುಕುತ್ತಿವೆ. ಎಷ್ಟೇ ನೀರು ಕೊಟ್ಟರೂ ಬಿಸಿಲ ತಾಪಕ್ಕೆ ಅಡಕೆ ಸಿಂಗಾರಗಳು ಹಾಳೆಯಿಂದ ಹೊರಬರಲಾರದೆ ಅಲ್ಲೇ ಕೆಂಪಾಗಿವೆ. ಇನ್ನೂ 3 ತಿಂಗಳು ಹೀಗೆ ಬಿಸಿಲ ತಾಪ ಇದ್ದರೆ ಬದುಕು ಇನ್ನಷ್ಟು ಕಠಿಣವಾಗಬಹುದು ಎಂದು ರೈತರು ಅಲವತ್ತುಕೊಳ್ಳುತ್ತಿದ್ದಾರೆ.

ತಾಲೂಕಿನ ಬಿಸಿಲ ತಾಪಕ್ಕೆ ಯಾರೂ ಮನೆಯಿಂದ ಹೊರಗೆ ಬರಲಾರದೆ ಚಡಪಡಿಸುತ್ತಿದ್ದಾರೆ. ಮುಂದೇನು ಕಾದಿದೆಯೋ ಎಂದು ಚಿಂತಿಸುವ ಕಾಲ ಬಂದೊದಗಿದೆ. ತಾಲೂಕಿನಲ್ಲಿ ಜನತೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿಗಳು ಸಮರ್ಪಕವಾಗಿಯೇ ಮಾಡುತ್ತಿದ್ದು, ಅಲ್ಲಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೂ ಕಾಡುಪ್ರಾಣಿಗಳು, ಪಕ್ಷಿಗಳಿಗೆ ಅರಣ್ಯ ಇಲಾಖೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿತ್ತು ಎಂಬ ಮಾತು ಸಾರ್ವಜನಿಕರಿಂದ ಕೇಳಿಬರುತ್ತಿವೆ.