ಬೆಣ್ಣಿಹಳ್ಳ, ತುಪ್ಪರಿಹಳ್ಳಗಳು ಭಾರಿ ಪ್ರಮಾಣದಲ್ಲಿ ಉಕ್ಕಿ ಹರಿದು ಅಪಾರ ನಷ್ಟವನ್ನುಂಟು ಮಾಡುತ್ತವೆ. ಕುಂದಗೋಳ ತಾಲೂಕಿನ 17, ಹುಬ್ಬಳ್ಳಿ 7, ಅಣ್ಣಿಗೇರಿ 1, ನವಲಗುಂದ 26, ಧಾರವಾಡ 5 ಸೇರಿದಂತೆ ಒಟ್ಟು 56 ಗ್ರಾಮಗಳ 8000ಕ್ಕೂ ಅಧಿಕ ಜನರು ಹಾಗೂ 3000ಕ್ಕೂ ಹೆಚ್ಚು ಜಾನುವಾರುಗಳು ಪ್ರವಾಹಕ್ಕೆ ಒಳಗಾಗಬಹುದು.
ಹುಬ್ಬಳ್ಳಿ:
ಪ್ರವಾಹದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಅಣುಕು ಪ್ರದರ್ಶನ ಆಯೋಜಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ, ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.ಇಲ್ಲಿನ ಉಣಕಲ್ಲ ಕೆರೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಆಶ್ರಯದಲ್ಲಿ ಜಿಲ್ಲೆಯಲ್ಲಿ ಪ್ರವಾಹದ ಮುನ್ನೆಚ್ಚರಿಕೆ ಕುರಿತು ಗುರುವಾರ ಹಮ್ಮಿಕೊಳ್ಳಲಾಗಿದ್ದ ಅಣಕು ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬೆಣ್ಣಿಹಳ್ಳ, ತುಪ್ಪರಿಹಳ್ಳಗಳು ಭಾರಿ ಪ್ರಮಾಣದಲ್ಲಿ ಉಕ್ಕಿ ಹರಿದು ಅಪಾರ ನಷ್ಟವನ್ನುಂಟು ಮಾಡುತ್ತವೆ. ಕುಂದಗೋಳ ತಾಲೂಕಿನ 17, ಹುಬ್ಬಳ್ಳಿ 7, ಅಣ್ಣಿಗೇರಿ 1, ನವಲಗುಂದ 26, ಧಾರವಾಡ 5 ಸೇರಿದಂತೆ ಒಟ್ಟು 56 ಗ್ರಾಮಗಳ 8000ಕ್ಕೂ ಅಧಿಕ ಜನರು ಹಾಗೂ 3000ಕ್ಕೂ ಹೆಚ್ಚು ಜಾನುವಾರುಗಳು ಪ್ರವಾಹಕ್ಕೆ ಒಳಗಾಗಬಹುದು. ಈಗಾಗಲೇ 71 ಕಾಳಜಿ ಕೇಂದ್ರ ಮತ್ತು 6 ಗೋ ಶಾಲೆ ತೆರೆಯಲು ಸ್ಥಳ ಗುರುತಿಸಲಾಗಿದೆ ಎಂದರು.ಈಗಾಗಲೇ ಜಿಲ್ಲೆಯಲ್ಲಿ 15 ದಿನಗಳಲ್ಲಿ 3 ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಹೀಗಾಗಿ ಮಕ್ಕಳು ನೀರಿಗಿಳಿಯಲು ಹೋಗುವ ಮುನ್ನ ಪಾಲಕರು, ಪೋಷಕರ ಅನುಮತಿ ಪಡೆದುಕೊಳ್ಳಬೇಕು. ಅಲ್ಲದೇ ಮುಂಜಾಗ್ರತಾ ಕ್ರಮ ಅನುಸರಿಸುವಂತೆ ತಿಳಿಸಿದರು.
ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ವೆಂಕಟೇಶ ಬುಳ್ಳ ಮಾತನಾಡಿ, ಪ್ರವಾಹ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ರಕ್ಷಣಾ ತಂಡ ಮತ್ತು 4 ಬೋಟ್, 50 ಲೈಫ್ ಜಾಕೆಟ್, 60 ಲೈಫ್ ಬಾಯ್, 150 ರೇನ್ ಕೋಟ್‌ಗಳ ರಕ್ಷಣಾ ಸಾಮಗ್ರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರವಾಹದ ಸಂದರ್ಭದಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲು ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ ಎಂದರು.ಇದೇ ವೇಳೆ ಧಾರವಾಡ, ಹುಬ್ಬಳ್ಳಿ, ಅಮರಗೋಳ, ಕುಂದಗೋಳ, ಬೇಲೂರು ಕೈಗಾರಿಕಾ ಪ್ರದೇಶದ ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸುವ ಅಣಕು ಪ್ರದರ್ಶನ ಪ್ರದರ್ಶಿಸಿದರು. ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿ ರಕ್ಷಿಸಿದ ವೇಳೆ ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕು ಎಂಬುದರ ಕುರಿತು ಡಾ. ನೀಲಾ ಕಾಸಿನಕುಂಟೆ ಮತ್ತು ಡಾ. ಅನೀಶ್ ಮಾಹಿತಿ ನೀಡಿದರು.
ಎಸ್ಪಿ ಗುಂಜನ್ ಆರ್ಯ, ಡಿಸಿಪಿ ಶ್ರುತಿ ಎನ್.ಎಸ್, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಡಿಎಚ್ಒ ಡಾ. ಪರಶುರಾಮ, ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ಬಸವರಾಜ ಜಿ.ಕೆ, ರಾಜು, ಶಹರ ತಹಸೀಲ್ದಾರ್ ಮಹೇಶ ಭಗವಂತ ಗಸ್ತೆ, ತಾಪಂ ಇಒ ಡಾ. ರಾಮಚಂದ್ರ ಹೊಸಮನಿ, ತಾಲೂಕು ವೈದ್ಯಾಧಿಕಾರಿ ಡಾ. ಹುಲಗೇಶ ಸೇರಿದಂತೆ ಹಲವರಿದ್ದರು.