ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ವೀರ ಸೇನಾನಿಗಳಾಗಿರುವ ಕ್ಷತ್ರಿಯ ಸಮಾಜದವರು ತಮ್ಮ ಮಕ್ಕಳನ್ನು ದೇಶಪ್ರೇಮ ಮೆರೆಯುವ ಸೈನಿಕರನ್ನಾಗಿಸುವಂತೆ ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಕರೆ ನೀಡಿದರು.ನಗರದ ಕಲಾ ಮಂದಿರದಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾ ಘಟಕ ಆಯೋಜಿಸಿದ್ದ 398ನೇ ವರ್ಷದ ಛತ್ರಪತಿ ಶ್ರೀಶಿವಾಜಿ ಮಹಾರಾಜರ ಜಯಂತಿ ಉದ್ಘಾಟಿಸಿ ಮಾತನಾಡಿ, ದೇಶಪ್ರೇಮದ ವಿಚಾರದಲ್ಲಿ ಮರಾಠ ಜನಾಂಗ ಹಿಂದೆ ಬಿದ್ದಿಲ್ಲ. ದೇಶ ರಕ್ಷಣೆ ಅವರ ರಕ್ತದಲ್ಲಿಯೇ ಬಂದಿದೆ ಎಂದರು.
ಮಂಡ್ಯ ನೆಲದಲ್ಲಿ ಛತ್ರಪತಿ ಶ್ರೀಶಿವಾಜಿ ಮಹಾರಾಜರ ಜಯಂತಿ ಆಚರಣೆ ಸ್ವಾಗತಾರ್ಹವಾಗಿದೆ. ಛತ್ರಪತಿ ಶಿವಾಜಿ ಮಹಾರಾಜು ದೊಡ್ಡ ಸೇನಾನಿಯಾಗಿದ್ದು ದೇಶಪ್ರೇಮಿಯಾಗಿದ್ದರು. ಹಿಂದೂ ಧರ್ಮ ರಕ್ಷಕರಾಗಿದ್ದರು ಎಂದರು.ಮರಾಠ ಜನಾಂಗವು ಮುಕ್ತವಾಗಿ ದೇಶ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಇರುತ್ತಾರೆ. ಯಾವುದೇ ಊರಿಗೋದರೂ ಒಬ್ಬ ಮಾಜಿ ಸೈನಿಕರು, ಕರ್ನಲ್‌ಗಳನ್ನು ನೋಡಬಹುದಿತ್ತು. ಮರಾಠ ಸಮುದಾಯದ ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿದ್ದಾರೆ. ಮನೆಗೊಬ್ಬ ಸೈನಿಕನಾಗಲಿ, ತಾಯಂದಿರು ಇದರಿಂದ ತಮ್ಮ ಮಕ್ಕಳನ್ನು ಹಿಂದೆ ಸರಿಯುವಂತೆ ಮಾಡಬೇಡಿ. ಎದೆಗುಂದದೆ ಸೈನಿಕ ವೃತ್ತಿಗೆ ಮಕ್ಕಳನ್ನು ಸೇರಿಸುವಂತೆ ಕರೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ದೇಶದ ಆಯಾ ರಾಜ್ಯಗಳ ಸೈನಿಕ ಕೋಟದ ಅಂಕಿ-ಅಂಶದಲ್ಲಿ ಕರ್ನಾಟಕದಿಂದ ಕೋಟಾ ಸಂಪೂರ್ಣ ಭರ್ತಿಯಾಗಿಲ್ಲ. 19 ಲಕ್ಷ ಮಂದಿ ಭಾರತದಲ್ಲಿ ಸೈನಿಕರಿದ್ದಾರೆ. ಭಾರತದ ಸೈನಿಕರು ಬಲಶಾಲಿಗಳು, ನಾಲ್ಕು ಮಂದಿ ಪಾಕಿಸ್ಥಾನ-ಚೀನಾ ದೇಶದ ಸೈನಿಕರನ್ನು ಒಬ್ಬ ಭಾರತೀಯ ಸೈನಿಕ ಎದುರಿಸುತ್ತಾನೆ ಎಂದರು.ಸೈನಿಕ ವೃತ್ತಿಗೆ ಹೋದವರೆಲ್ಲ ಸಾಯುವುದಿಲ್ಲ. ಸೈನಿಕ ವೃತ್ತಿಗಿಂತ ರಸ್ತೆ ಅಪಘಾತದಲ್ಲಿ ಸಾಯುವವರ ಸಂಖ್ಯೆ ಹೆಚ್ಚಳವಾಗಿದೆ. ಒಂದು ವರ್ಷಕ್ಕೆ 1.60 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದಾರೆ. ಆದ್ದರಿಂದ ಸಾವು ತಪ್ಪದು ಸೈನಿಕರಾಗಿ ಸೇವೆ ಸಲ್ಲಿಸಲಿ ಎಂದರು.
ಇದೇ ಸಂದರ್ಭದಲ್ಲಿ ಲೇಖಕಿ ಹಾರಿಕ ಮಂಜುನಾಥ್ ಛತ್ರಪತಿ ಶ್ರೀಶಿವಾಜಿ ಮಹಾರಾಜರ ಚರಿತ್ರೆ ಬಗ್ಗೆ ಉಪನ್ಯಾಸ ನೀಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದರು. ಅಮೇಜಿಂಗ್ ನೃತ್ಯ ಶಾಲೆ ಕಲಾವಿದರು ನೃತ್ಯ ಪ್ರದರ್ಶಿಸಿದರು.ಸಮಾರಂಭದಲ್ಲಿ ಕೆಕೆಎಂಪಿ ರಾಜ್ಯಾಧ್ಯಕ್ಷ ಎಸ್.ಸುರೇಶ್‌ರಾವ್ ಸಾಠೆ, ಪ್ರಧಾನ ಕಾರ್ಯದರ್ಶಿ ಟಿ.ಆರ್.ಸುನೀತ್‌ಚವಾಣ್, ಖಜಾಂಚಿ ಟಿ.ಆರ್.ವೆಂಟಕರಾವ್ ಚವ್ಹಾಣ್, ಉದ್ಯಮಿ ಡಾ.ಕೆ.ಎಸ್.ಶಂಕರ್ ಜಾದವ್, ಭಾವಸಾರ ಕ್ಷತ್ರಿಯ ಸಮಾಜ ಅಧ್ಯಕ್ಷ ಎನ್.ಶಿವರಾವ್ ವೀರಜ್‌ಕರ್, ಉಪಾಧ್ಯಕ್ಷ ಕೆ.ಭಕ್ತವತ್ಸಲ ಜವಳೇಕರ್, ಮಾಜಿ ಶಾಸಕ ಇ.ಮಾರುತಿರಾವ್ ಪವಾರ್, ಉಪ ಸಮಾದೇಷ್ಠ ಎಸ್.ಆರ್.ಗಾಯಕ್ವಾಡ್, ಪರಿಷತ್ ಜಿಲ್ಲಾಧ್ಯಕ್ಷ ಎಚ್.ಸುರೇಶ್‌ರಾವ್, ಸಲಗರ್, ಕಾರ್ಯದರ್ಶಿ ಅಂಜಾಜಿರಾವ್ ಬಾಂಗೆ, ಖಜಾಂಚಿ ಎಸ್.ರಾಜೇಶ್‌ಲೌಟೆ ಪದಾಧಿಕಾರಿಗಳು ಹಾಜರಿದ್ದರು.