ದೀಪಾವಳಿ ಬಳಿಕ ಜನರು ವಾಪಸ್‌: ಮೆಟ್ರೋ ರಶ್‌, ಟ್ರಾಫಿಕ್‌ ಜಾಂ

| Published : Nov 05 2024, 01:32 AM IST / Updated: Nov 05 2024, 01:33 AM IST

ದೀಪಾವಳಿ ಬಳಿಕ ಜನರು ವಾಪಸ್‌: ಮೆಟ್ರೋ ರಶ್‌, ಟ್ರಾಫಿಕ್‌ ಜಾಂ
Share this Article
  • FB
  • TW
  • Linkdin
  • Email

ಸಾರಾಂಶ

ದೀಪಾವಳಿ ಹಬ್ಬ ಆಚರಿಸಿದ ಜನರು ದೊಡ್ಡ ಸಂಖ್ಯೆಯಲ್ಲಿ ಬಸ್‌ ಸೇರಿದಂತೆ ಸ್ವಂತ ವಾಹನಗಳಲ್ಲಿ ಸೋಮವಾರ ನಗರಕ್ಕೆ ಬೆಳಗ್ಗೆಯೇ ವಾಪಸ್ಸಾಗಿದ್ದರಿಂದ ತುಮಕೂರು ರಸ್ತೆ ಸೇರಿದಂತೆ ನಗರ ಪ್ರವೇಶಿಸುವ ಮಾರ್ಗದಲ್ಲಿ ಜನರ ಸರದಿ ಸಾಲು ಏರ್ಪಟ್ಟಿತ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೀಪಾವಳಿ ಹಬ್ಬ ಆಚರಿಸಿದ ಜನರು ದೊಡ್ಡ ಸಂಖ್ಯೆಯಲ್ಲಿ ಬಸ್‌ ಸೇರಿದಂತೆ ಸ್ವಂತ ವಾಹನಗಳಲ್ಲಿ ಸೋಮವಾರ ನಗರಕ್ಕೆ ಬೆಳಗ್ಗೆಯೇ ವಾಪಸ್ಸಾಗಿದ್ದರಿಂದ ತುಮಕೂರು ರಸ್ತೆ ಸೇರಿದಂತೆ ನಗರ ಪ್ರವೇಶಿಸುವ ಮಾರ್ಗದಲ್ಲಿ ವಾಹನಗಳ ಸಂಚಾರ ದಟ್ಟಣೆ ಉಂಟಾದ ಪರಿಣಾಮ ನಮ್ಮ ಮೆಟ್ರೋ ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕಿದವು. ನಾಗಸಂದ್ರ ಸೇರಿ ಹಲವು ಮೆಟ್ರೋ ನಿಲ್ದಾಣಗಳು ಭರ್ತಿಯಾಗಿ ಪ್ರಯಾಣಕ್ಕಾಗಿ ಜನರ ಸರದಿ ಸಾಲು ಏರ್ಪಟ್ಟಿತ್ತು.

ಸೋಮವಾರ ಬೆಳಗ್ಗೆಯಿಂದ ರಾತ್ರಿ 9ರವರೆಗೆ ನಮ್ಮ ಮೆಟ್ರೋದಲ್ಲಿ ಬರೋಬ್ಬರಿ 7.88 ಲಕ್ಷ ಜನ ಪ್ರಯಾಣಿಸಿದ್ದಾರೆ. ಕಳೆದ ಮೂರು ದಿನ ಪ್ರಯಾಣಿಕರ ಸಂಖ್ಯೆ ಸರಾಸರಿ 5.20 ಲಕ್ಷದಷ್ಟಿತ್ತು. ಭಾನುವಾರ 5,36,524 ಜನ ಮೆಟ್ರೋದಲ್ಲಿ ಪ್ರಯಾಣಿಸಿದ್ದರು. ಹಬ್ಬಕ್ಕಾಗಿ ಜನ ಊರಿಗೆ ತೆರಳಿದ್ದರಿಂದ ಮೆಟ್ರೋ ರೈಲುಗಳಲ್ಲಿ ಕಡಿಮೆ ಜನಸಂದಣಿಯಿತ್ತು.

ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ತುಮಕೂರು ರಸ್ತೆಯಲ್ಲಿರುವ ನಾಗಸಂದ್ರ ಹಸಿರು ಮಾರ್ಗದ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿತ್ತು. ಇಲ್ಲಿ ಸಾಮಾನ್ಯ ದಿನಗಳಲ್ಲಿ ಬೆಳಗ್ಗೆ 6-11 ಗಂಟೆಯವರೆಗೆ ಸುಮಾರು 11,000 ಜನರು ದಿನನಿತ್ಯ ಪ್ರಯಾಣಿಸುತ್ತಾರೆ. ಆದರೆ, ಸೋಮವಾರ ಇದೇ ಸಮಯದಲ್ಲಿ ಬರೋಬ್ಬರಿ 15,800 ಜನ ಪ್ರಯಾಣಿಸಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.

ಇತರೆ ಜಿಲ್ಲೆಗಳಿಗೆ ಹಾಗೂ ಹೊರ ರಾಜ್ಯಗಳಿಂದ ಕಾರು, ಬಸ್‌ಗಳಲ್ಲಿ ವಾಪಸ್ಸಾಗಿದ್ದ ಜನರು ಈ ಮಾರ್ಗದಲ್ಲಿ ಉಂಟಾಗಿದ್ದ ಟ್ರಾಫಿಕ್‌ ಜಾಮ್‌ಗೆ ಹೆದರಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲು ಮುಂದಾದರು. ಬೆಂಗಳೂರು ನಗರ ಪ್ರವೇಶ ಆಗುತ್ತಿದ್ದಂತೆ ನಾಗಸಂದ್ರ, ಪೀಣ್ಯ 2ನೇ ಹಂತ, ಗೊರಗುಂಟೆಪಾಳ್ಯ, ಯಶವಂತಪುರ ಸೇರಿದಂತೆ ವಿವಿಧೆಡೆ ವಿಪರೀತ ಟ್ರಾಫಿಕ್ ಜಾಮ್‌ ಆಗಿತ್ತು. ರಸ್ತೆ ಮಾರ್ಗದಲ್ಲಿ ವಾಹನಗಳಲ್ಲಿ ಹೋದರೆ ಹೆಚ್ಚು ಸಮಯ ಆಗಲಿದೆ ಎಂದು ಮೆಟ್ರೋ ಆಶ್ರಯಿಸಿದರು. ಈ ಕಾರಣದಿಂದಲೇ ಇಲ್ಲಿ ಸುಮಾರು 1 ಕಿ.ಮೀ.ವರೆಗೆ ಸರದಿ ಸಾಲು ಉಂಟಾಗಿತ್ತು.

ಇದಲ್ಲದೆ, ಇಂಟರ್‌ಚೇಂಜ್‌ ನಿಲ್ದಾಣ ಮೆಜೆಸ್ಟಿಕ್‌ ಸೇರಿದಂತೆ ಅತ್ತ ನೇರಳೆ ಮಾರ್ಗದ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ ಹಾಗೂ ಹಸಿರು ಮಾರ್ಗದ ಕೊನೆ ನಿಲ್ದಾಣ ಸಿಲ್ಕ್‌ ಬೋರ್ಡ್‌ವರೆಗೂ ಹೆಚ್ಚಿನ ಪ್ರಯಾಣಿಕರಿದ್ದರು.

ಎಚ್ಚೆತ್ತುಕೊಳ್ಳದ ಮೆಟ್ರೋ: ಹಬ್ಬದ ಬಳಿಕ ನಗರಕ್ಕೆ ಜನ ವಾಪಸ್ಸಾದಾಗ ಹೆಚ್ಚಿನ ಜನಸಂದಣಿ ಉಂಟಾಗುವುದು ಸಹಜವಾದರೂ ಕೂಡ ಮೆಟ್ರೋ ನಿಗಮವು ಟೋಕನ್‌ ನೀಡಲು ಯಾವುದೇ ನಿಲ್ದಾಣದಲ್ಲಿ ಹೆಚ್ಚುವರಿ ಕೌಂಟರ್‌ಗಳ ವ್ಯವಸ್ಥೆಯನ್ನು ಮಾಡಿಕೊಂಡಿರಲಿಲ್ಲ. ಇದರಿಂದಾಗಿ ಜನತೆಗೆ ತೊಂದರೆಯಾಗಿದೆ ಎಂದು ಜನತೆ ಅಸಮಾಧಾನ ವ್ಯಕ್ತಪಡಿಸಿದರು.

ಹಬ್ಬ, ವಾರಾಂತ್ಯ ಸೇರಿ ದೀರ್ಘ ರಜೆಯ ನಂತರ ಜನ ವಾಪಸ್ಸಾಗಿದ್ದರು. ಜನದಟ್ಟಣೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಸರಂಜಾಮುಗಳನ್ನು ತ್ವರಿತವಾಗಿ ಪರಿಶೀಲಿಸಿ ಜನದಟ್ಟಣೆಯನ್ನು ಕಡಿಮೆ ಮಾಡಿ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗಿದೆ.

-ನಮ್ಮ ಮೆಟ್ರೋ