ಸಾರಾಂಶ
ಬೆಂಗಳೂರು : ರಾಜರಾಜೇಶ್ವರಿನಗರದ ವಲಯ ಕಚೇರಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು ಶುಕ್ರವಾರ ನಡೆಸಿದ ಕುಂದು ಕೊರತೆ ಆಲಿಸುವ ಸಭೆಯಲ್ಲಿ ಸಾರ್ವಜನಿಕರು ದೂರಿನ ಸುರಿಮಳೆಗೈದರು.
ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮವನ್ನು ಪುರ್ನಾರಂಭಿಸಿರುವ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಶುಕ್ರವಾರ ಆರ್.ಆರ್.ನಗರ ವಲಯದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿ ಪರಿಶೀಲಿಸಿ ವಲಯ ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸುವ ಸಭೆ ನಡೆಸಿದರು.
ಈ ವೇಳೆ ರಸ್ತೆ ಗುಂಡಿ, ಮರ ತೆರವು, ಉದ್ಯಾನದ ಕಾಮಗಾರಿ ಸ್ಥಗಿತ, ಅನಧಿಕೃತ ಕಟ್ಟಡ ನಿರ್ಮಾಣ, ಹಕ್ಕು ಪತ್ರ ವಿತರಣೆ ವಿಳಂಬ, ರುದ್ರಭೂಮಿ ಒತ್ತುವರಿ ಸೇರಿದಂತೆ ಸಾರ್ವಜನಿಕರು ಹಲವು ದೂರುಗಳನ್ನು ಆಯುಕ್ತರ ಮುಂದಿಟ್ಟರು. ಪ್ರತಿ ದೂರಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಶೀಲನೆ ನಡೆಸಿ ಸಮಸ್ಯೆ ಪರಿಹಾರ ಮಾಡುವಂತೆ ತುಷಾರ್ ತಾಕೀತು ಮಾಡಿದರು.
ಇದಕ್ಕೂ ಮುನ್ನ ಯಶವಂತಪುರದ ಎಂಇಐ ರಸ್ತೆಯಲ್ಲಿ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಪರಿಶೀಲಿಸಿ ಮಾರ್ಚ್ ಒಳಗೆ ಪೂರ್ಣಗೊಳಿಸುವುದಕ್ಕೆ ನಿರ್ದೇಶಿಸಿದರು. ಬಳಿಕ ಸುಮ್ಮನಹಳ್ಳಿ ಬಳಿ ಬೀದಿ ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸಾ ಕೇಂದ್ರದ ಪುನರ್ ನವೀಕರಣ ಕಾಮಗಾರಿ ಪರಿಶೀಲಿಸಿ ಒಂದು ತಿಂಗಳಲ್ಲಿ ಪೂರ್ಣಗೊಳಿಸುವುದಕ್ಕೆ ಸೂಚಿಸಿದರು.
ಲಗ್ಗೆರೆಯ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಸಾರ್ವಜನಿಕರ ಬಳಿ ಅಹವಾಲು ಆಲಿಸಿ ತ್ವರಿತವಾಗಿ ಆಸ್ತಿ ಮಾರಾಟ ಅಥವಾ ಹಸ್ತಾಂತರ ಮಾಡುವುದಿದ್ದರೆ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಕೂಡಲೇ ಇ-ಖಾತಾ ಪಡೆಯಬಹುದೆಂದು. ಇ-ಖಾತಾ ಕಡ್ಡಾಯಗೊಳಿಸಿಲ್ಲ ಎಂದು ತಿಳಿಸಿದರು.
ನಂತರ ನಾಗರಭಾವಿ ಕೆರೆ ಹಾಗೂ ಮೈಸೂರು ರಸ್ತೆ ವೃಷಭಾವತಿ ಕಾಲುವೆ ಪಕ್ಕದಲ್ಲಿರುವ ಟ್ರಾನ್ಸ್‌ಫರ್ ಸ್ಟೇಷನ್ ಪರಿಶೀಲಿಸಿದರು.
ಈ ವೇಳೆ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ವಲಯ ಆಯುಕ್ತ ಸತೀಶ್, ವಲಯ ಜಂಟಿ ಆಯುಕ್ತ ಅಜಯ್, ಮುಖ್ಯ ಎಂಜಿನಿಯರ್ ಸ್ವಯಂಪ್ರಭ ಇದ್ದರು.