ಸಾರಾಂಶ
ಭದ್ರತೆಗಿರುವ ಸಿಸಿ ಕ್ಯಾಮರಾ, ತಂತಿ ಬೇಲಿ ಅವ್ಯವಸ್ಥೆ । ಡ್ಯಾಂ ಸುರಕ್ಷತೆ ಬಗ್ಗೆ ಸರ್ಕಾರ ಉದಾಸೀನ
-----------ರವಿ ಕಾಂಬಳೆ
ಕನ್ನಡಪ್ರಭ ವಾರ್ತೆ ಹುಕ್ಕೇರಿರಾಜ್ಯ ಸರ್ಕಾರದ ಅವಕೃಪೆಗೆ ಒಳಗಾಗಿರುವ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂಗೆ (ರಾಜಾ ಲಖಮಗೌಡ ಜಲಾಶಯ) ಅಭದ್ರತೆ ಕಾಡುತ್ತಿದೆ. ಜಲಾಶಯದ ಅಸ್ತಿತ್ವವನ್ನೇ ಅಲುಗಾಡಿಸುವ ಈ ಸೂಕ್ಷ್ಮ ವಿಚಾರ ಅರಿತುಕೊಳ್ಳುವಲ್ಲಿ ಸರ್ಕಾರ ಎಡವಿದೆಯೇ ಎಂಬ ಅನುಮಾನ ಕಾಡುತ್ತಿದೆ.ಉತ್ತರ ಕರ್ನಾಟಕ ಜನರ ಜೀವನಾಡಿ ಎನಿಸಿರುವ ಈ ಜಲಾಶಯದ ಉಸ್ತುವಾರಿ ಕಾರ್ಯಗಳಿಗೆ ಕಳೆದ ವರ್ಷದಿಂದ ಅನುದಾನದ ಕೂಡ ಬರುತ್ತಿಲ್ಲ. ಈ ಜಲಾಶಯದ ಬಗ್ಗೆ ಸರ್ಕಾರದ ಉದಾಸೀನತೆಯನ್ನು ಎತ್ತಿ ತೋರಿಸುತ್ತಿದೆ. ಇದರಿಂದ ಜಲಾಶಯಕ್ಕೆ ಭದ್ರತಾ ಸೌಕರ್ಯಗಳನ್ನು ಒದಗಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ.
ರಾಜ್ಯದ ಬೃಹತ್ ನೀರಾವರಿ ಯೋಜನೆಗಳಲ್ಲಿ ಒಂದಾಗಿರುವ ಹಿಡಕಲ್ ಜಲಾಶಯವು ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ಜನರ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳ ಆಧಾರ. ಜತೆಗೆ ವಿದ್ಯುತ್‌ನ್ನೂ ಉತ್ಪಾದಿಸಲಾಗುತ್ತಿದೆ. ಆದರೆ, ಈ ಜಲಾಶಯದ ರಕ್ಷಣೆಗೆ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಮಾತ್ರ ಸರ್ಕಾರ ಗಮನಹರಿಸುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ.ಇನ್ನು ಕೆಆರ್‌ಎಸ್, ಆಲಮಟ್ಟಿ ಸೇರಿದಂತೆ ರಾಜ್ಯದ ಬೃಹತ್ ಕೈಗಾರಿಕೆಗಳಂತೆ ಶಾಶ್ವತ ಕೈಗಾರಿಕಾ ಭದ್ರತಾ ಸಿಬ್ಬಂದಿ ನಿಯೋಜಿಸುವಂತೆ ಒತ್ತಾಯಗಳಿವೆ. ಜಲಾಶಯದ ಗೋಡೆ ರಸ್ತೆ ಬದಿ ಅಳವಡಿಸಿದ ವಿದ್ಯುತ್ ದೀಪಗಳು ಕೂಡ ಬೆಳಕು ನೀಡದೆ ಬಂದ್ ಆಗಿವೆ. ಸಮಸ್ಯೆಗಳ ಸುಳಿಯಲ್ಲಿರುವ ಈ ಜಲಾಶಯದಲ್ಲಿ ರಾಶಿಗಟ್ಟಲೇ ಹೂಳು ಸಂಗ್ರಹಗೊಂಡಿದ್ದು, ಮೂರು ಜಿಲ್ಲೆಗಳ ಜೀವನಾಡಿಗೆ ಕಂಟಕ ಎನಿಸಿದೆ. ಇದು ಜಲಸಂಪನ್ಮೂಲ ಇಲಾಖೆಗೆ ಇದೀಗ ಸವಾಲಾಗಿ ಪರಿಣಮಿಸಿದೆ.
ಜಲಾಶಯಕ್ಕೆ ಬೇಕಾದ ಅಗತ್ಯ ಸೌಕರ್ಯಗಳನ್ನು ಒದಗಿಸುವಂತೆ ಕ್ಷೇತ್ರದ ಶಾಸಕ ನಿಖಿಲ್ ಕತ್ತಿ ಅವರು ನೀರಾವರಿ ಇಲಾಖೆಯ ಕೇಂದ್ರ ಕಚೇರಿಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಈ ಭಾಗದ ಸಕ್ಕರೆ ಕಾರ್ಖಾನೆಗಳು ಸೇರಿದಂತೆ ವಿವಿಧ ಉದ್ಯಮಗಳನ್ನು ಅವಲಂಬಿಸಿರುವ ಜಲಾಶಯಕ್ಕೆ ಭವಿಷ್ಯದಲ್ಲಿ ಭಾರೀ ಅವಘಡ ಸಂಭವಿಸುವ ಮುನ್ನ ಮುನ್ನಚ್ಚರಿಕೆ ವಹಿಸಿದರೆ ಒಳ್ಳೆಯದು ಎಂಬುವುದು ಸಾರ್ವಜನಿಕರ ಅಭಿಮತ.----
--- ಬಾಕ್ಸ್ ---ಜಲಾಶಯದ ಹಿನ್ನೋಟ
ಘಟಪ್ರಭಾ ನದಿಗೆ ಅಡ್ಡಲಾಗಿ 1977ರಲ್ಲಿ ಕಟ್ಟಲಾಗಿರುವ ಈ ಹಿಡಕಲ್ ಡ್ಯಾಂ ವಂಟಮುರಿ ಜಮೀನ್ದಾರ್ ವಂಶಸ್ಥ ರಾಜಾ ಲಖಮಗೌಡ ಸರದೇಸಾಯಿ ಆಣೆಕಟ್ಟು ಎಂದೂ ಕರೆಯಲಾಗುತ್ತದೆ. 62.48 ಮೀಟರ್ ಎತ್ತರ ಹೊಂದಿರುವ ಈ ಜಲಾಶಯ 10 ಲಂಬ ಕ್ರೆಸ್ಟ್‌ಗೇಟ್ ಹೊಂದಿದೆ. ಒಟ್ಟು ಮೇಲ್ಮೈ ವಿಸ್ತೀರ್ಣ 63.38 ಚದರ ಕಿಲೋಮೀಟರ್ ಮತ್ತು 51.16 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 36 ಮೆಗಾವ್ಯಾಟ್ ಜಲ ವಿದ್ಯುತ್‌ನ್ನು ಉತ್ಪಾದಿಸುತ್ತಿದೆ. 7 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತಿದೆ.---------------------------------
ಬಾಕ್ಸ್‌ಡ್ಯಾಂ ಸುರಕ್ಷತೆಗಿಲ್ಲ ಸೌಲಭ್ಯಗಳುಇಲ್ಲಿ ಜಲಾಶಯದ ಕಣ್ಣಾವಲಿಗೆ ಅಳವಡಿಸಿರುವ 10 ಸಿಸಿ ಕ್ಯಾಮರಾಗಳ ಪೈಕಿ ಕೇವಲ 2 ಮಾತ್ರ ಕಾರ್ಯಾಚರಣೆಯಲ್ಲಿವೆ. ಇನ್ನುಳಿದ 8 ಕ್ಯಾಮೆರಾಗಳು ಸ್ಥಗಿತಗೊಂಡಿದ್ದು ದುರಸ್ತಿಗಾಗಿ ಕಾಯುತ್ತಿವೆ. ಮುಂಭಾಗದಲ್ಲಿ ತಂತಿಬೇಲಿ ಹರಿದು ಹೋಗಿದ್ದು, ಮರು ಜೋಡಿಸುವ ಕಾರ್ಯ ಕೂಡ ನಡೆದಿಲ್ಲ. ತುರ್ತು ಸಂದರ್ಭದಲ್ಲಿ ಸಂಪರ್ಕ ಸಾಧಿಸಲು ವಿದ್ಯುತ್ ಉತ್ಪಾದನಾ ಘಟಕದ ಬಳಿ ನಿರ್ಮಿಸಿರುವ ಸೇತುವೆ 2019ರ ನೆರೆಹಾವಳಿಗೆ ಕೊಚ್ಚಿಕೊಂಡು ಹೋಗಿದೆ. ಆದರೆ, ಇದುವರೆಗೆ ಅದನ್ನು ಮರು ನಿರ್ಮಿಸುವ ಕಾರ್ಯ ಕೂಡ ಆಗಿಲ್ಲ. ಹೊರಗುತ್ತಿಗೆ ಆಧಾರದ ಮೇಲೆ ಸುಮಾರು 20ಕ್ಕೂ ಹೆಚ್ಚು ಖಾಸಗಿ ಭದ್ರತಾ ಸಿಬ್ಬಂದಿಯನ್ನು ಇಲ್ಲಿ ಟೆಂಡರ್ ಮೆಲೆ ನಿಯೋಜನೆ ಮಾಡಲಾಗಿದೆ. ಆ ಟೆಂಡರ್ ಅವಧಿ ಕೂಡ ಕಳೆದ ವರ್ಷ ಆಗಸ್ಟ್‌ನಲ್ಲೇ ಪೂರ್ಣಗೊಂಡಿದೆ. ಆದರೂ, ಹೊರಗುತ್ತಿಗೆದಾರ ಆರ್ಥಿಕ ಹೊರೆ ಅನುಭವಿಸುತ್ತಿದ್ದರೂ ಜಲಾಶಯದ ಹಿತದೃಷ್ಟಿಯಿಂದ ಸಿಬ್ಬಂದಿಯನ್ನು ಮುಂದುವರಿಸಿದ್ದಾರೆ.