ಸಾರಾಂಶ
ಉದ್ಯಾವರ ಫ್ರೆಂಡ್ಸ್ ಸರ್ಕಲ್‌ನ ಸುವರ್ಣ ಸಂಭ್ರಮ ವರ್ಷದ ಮಾರ್ಚ್ ತಿಂಗಳ ಕಾರ್ಯಕ್ರಮ ‘ಹಾವು ನಾವು’ ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉರಗತಜ್ಞ ಗುರುರಾಜ್ ಸನಿಲ್ ಹಾವುಗಳ ಬಗ್ಗೆ ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಉದ್ಯಾವರ
ಜನರಲ್ಲಿ ನಮ್ಮ ಸುತ್ತ ಇರುವ ಹಾವುಗಳ ಬಗ್ಗೆ ತುಂಬಾ ತಪ್ಪು ಕಲ್ಪನೆಗಳಿವೆ. ಎಲ್ಲ ಹಾವುಗಳು ವಿಷಕಾರಿಗಳು ಅಲ್ಲ. ವಿಷಕಾರಿ ಹಾವುಗಳು ಕೂಡ ನಮ್ಮಿಂದ ನೋವಿಗೊಳಗಾಗದೇ ನಮಗೆ ಹಾನಿ ಮಾಡುವುದಿಲ್ಲ. ಹಾವುಗಳು ಮುಗ್ಧ ಜೀವಿಗಳು. ಅವುಗಳ ಬಗೆಗಿನ ಮೂಢನಂಬಿಕೆಯಿಂದ ನಾವು ನಾನಾ ತೊಂದರೆಗೆ ಒಳಗಾಗುತ್ತಿದ್ದೇವೆ. ಹಾಗಾಗಿ ಮೊದಲು ನಮ್ಮ ಮನಸ್ಸಲ್ಲಿರುವ ಹಾವುಗಳನ್ನು ದೂರ ಮಾಡಿ, ನಿಜ ಹಾವುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಉರಗತಜ್ಞ ಗುರುರಾಜ್ ಸನಿಲ್ ಹೇಳಿದರು.ಅವರು ಇಲ್ಲಿನ ಉದ್ಯಾವರ ಫ್ರೆಂಡ್ಸ್ ಸರ್ಕಲ್‌ನ ಸುವರ್ಣ ಸಂಭ್ರಮ ವರ್ಷದ ಮಾರ್ಚ್ ತಿಂಗಳ ಕಾರ್ಯಕ್ರಮ ‘ಹಾವು ನಾವು’ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಾವು ನಮ್ಮ ಮನೆ ಸುತ್ತಮುತ್ತ ಹರಿದಾಡುತ್ತಿದ್ದರೆ ಅದಕ್ಕೆ ಹಸಿವೆಯಾಗಿದೆ ಎಂದು ಅರ್ಥ. ಇಲಿ, ಕೋಳಿಗಳನ್ನು ಬೇಟೆಯಾಡುವುದಕ್ಕೆ ಅವು ಬರುತ್ತದೆ ಎಂಬುದನ್ನ ನಾವು ತಿಳಿದುಕೊಳ್ಳಬೇಕು. ಪ್ರಕೃತಿಯಲ್ಲಿರುವ ಯಾವುದೇ ಜೀವಜಂತುಗಳ ಬಗ್ಗೆ ತಿಳಿದುಕೊಳ್ಳದೆ, ಹೆದರಿ ಅವುಗಳನ್ನು ಕೊಲ್ಲುವುದರಿಂದ ಪ್ರಕೃತಿ ನಾಶವಾಗುತ್ತದೆ. ಕೆಲವು ಬಗೆಯ ಹಾವುಗಳು ಕೋಟಿ ರುಪಾಯಿಗೆ ಬೆಲೆ ಬಾಳುತ್ತದೆ ಎನ್ನುವುದು ಸುಳ್ಳು, ಹೆಬ್ಬಾವುಗಳು ಮನುಷ್ಯರನ್ನು ನುಂಗುತ್ತೆ ಎಂಬುದು ತಪ್ಪು ಕಲ್ಪನೆ ಎಂದರು.ವಿಷಕಾರಿ ಹಾವುಗಳು ಕಚ್ಚಿದರೆ ಭಯಪಡಬೇಕಾಗಿಲ್ಲ, ಪ್ರಥಮ ಚಿಕಿತ್ಸೆಯನ್ನು ಮಾಡಿ ನಂತರ ಹತ್ತಿರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಬಹುದು. ನಾವು ಆಸ್ಪತ್ರೆಗೆ ಹೋಗುವುದು ವಿಳಂಬವಾದರೆ ಮಾತ್ರ ಸಾವು ಸಂಭವಿಸಬಹುದು. ಹಾವುಗಳ ಆರಾಧನೆ ಎಂದರೆ ಪ್ರಕೃತಿಯ ಆರಾಧನೆ. ಪ್ರಾಕೃತಿಕ ಹುತ್ತ, ಬನಗಳಿಂದ ಅಂತರ್ಜಲ ಹೆಚ್ಚುತ್ತದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಬನಗಳನ್ನ ನಾಶವಾಗುತ್ತಿರುವುದು ದುರಂತ ಎಂದರು.
ಸಂಸ್ಥೆ ಅಧ್ಯಕ್ಷ ತಿಲಕ್ ರಾಜ್ ಸಾಲಿಯಾನ್ ಸ್ವಾಗತಿಸಿದರು. ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತಾಡಿದರು. ಪ್ರಧಾನ ಕಾರ್ಯದರ್ಶಿ ಅಬಿದ್ ಅಲಿ ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.