ಮಹಿಳೆಯರಿಗೆ ಸ್ವಾಭಿಮಾನದ ಬದುಕು ಕಲ್ಪಿಸಿದ ಮೋದಿ ಗೆಲ್ಲಿಸಿ

| Published : Apr 06 2024, 12:47 AM IST

ಸಾರಾಂಶ

ಕೂಡ್ಲಿಗೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮಹಿಳಾ ಕಾರ್ಯಕರ್ತರ ಸಮಾವೇಶದಲ್ಲಿ ಬಿ.ವೈ.ರಾಘವೇಂದ್ರ

ಕನ್ನಡಪ್ರಭ ವಾರ್ತೆ ಭದ್ರಾವತಿ

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶಕ್ತಿ ಸ್ವರೂಪರಾದ ಮಾತೆಯರು ಹೆಚ್ಚಿನ ಮತಗಳನ್ನು ನೀಡಿ ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೆಲ್ಲಿಸಬೇಕೆಂದು ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ ರಾಘವೇಂದ್ರ ಮನವಿ ಮಾಡಿದರು.

ಅವರು ಶುಕ್ರವಾರ ತಾಲೂಕಿನ ಶ್ರೀರಾಮನಗರದ ಶ್ರಮಶೀವಿ ಮರಿಸಿದ್ದಯ್ಯ ಶ್ರೀ ರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೂಡ್ಲಿಗೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮಹಿಳಾ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆಯರು, ಬಡವರು ಸೇರಿ ಪ್ರತಿಯೊಬ್ಬರ ಸ್ವಾಭಿಮಾನದ ಬದುಕಿಗೆ ಹೆಚ್ಚಿನ ಆದ್ಯತೆ ನೀಡಿದೆ. ಅದರಲ್ಲೂ ವಿಶೇಷವಾಗಿ ಇಂದು ಮಹಿಳೆಯರು ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಸಾಧನೆ ಮಾಡಲು ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನು ನೀಡಿದೆ. ಮಹಿಳೆಯರಿಗಾಗಿ ಹಲವಾರು ಯೋಜನೆ ಜಾರಿಗೆ ತಂದಿದ್ದು, ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಮಹಿಳೆಯರು ಇಂದು ಪ್ರಗತಿ ಸಾಧಿಸುವಂತಾಗಿದೆ ಎಂದರು.

ರಾಜ್ಯದಲ್ಲೂ ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಹಿಳೆಯರಿಗಾಗಿ ಹಲವಾರು ಯೋಜನೆ ಜಾರಿಗೆ ತಂದಿದ್ದರು. ಆ ಯೋಜನೆಗಳ ಫಲಾನುಭವಿಗಳಾಗಿ ಇಂದಿಗೂ ಮಹಿಳೆಯರು ಸ್ಮರಿಸುತ್ತಿದ್ದಾರೆ. ಒಟ್ಟಾರೆ ಬಿಜೆಪಿ ಸರ್ಕಾರ ಮಹಿಳೆಯರ ಸರ್ವತೋಮುಖ ಬೆಳವಣಿಗೆಗೆ ಆದ್ಯತೆ ನೀಡುತ್ತಿದೆ. ಈ ಹಿನ್ನೆಲೆ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಪುನಃ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಮುಂದುವರೆಯಲು ಕಾರಣೀಭೂತರಾಗಬೇಕೆಂದರು.

ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಗಾಯತ್ರಿ ದೇವಿ ಮಲ್ಲಪ್ಪ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಂಗಳಾ ನಾಗೇಂದ್ರ, ಪ್ರಮುಖರಾದ ಆರ್.ಎಸ್ ಶೋಭ, ಜಿಲ್ಲಾ ಉಪಾಧ್ಯಕ್ಷೆ ಸುಲೋಚನಾ ಪ್ರಕಾಶ್, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಸರಸ್ವತಿ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಮಂಜುಳಾ ಹಾಗೂ ಶಕುಂತಲಾ, ಮಂಡಲ ಚುನಾವಣಾ ಸಂಚಾಲಕ ಕೂಡ್ಲಿಗೆರೆ ಹಾಲೇಶ್, ಸಹ ಸಂಚಾಲಕ ಎಚ್. ತೀರ್ಥಯ್ಯ, ಕೆ. ಮಂಜುನಾಥ್ ಕದಿರೇಶ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಮೂರ್ತಿ, ಜೆಡಿಎಸ್ ನಗರ ಅಧ್ಯಕ್ಷ ಕರುಣಾಮೂರ್ತಿ ಮತ್ತು ಗ್ರಾಮ ಹಾಗೂ ನಗರ ಚುನಾಯಿತ ಪ್ರತಿನಿಧಿಗಳು, ಪದಾಧಿಕಾರಿಗಳು, ಮಹಿಳಾ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಇಂದು ಬೂತ್ ಮಟ್ಟದಲ್ಲಿ ಬಿಜೆಪಿ ಪಕ್ಷದ ಸಂಸ್ಥಾಪನ ದಿನಾಚರಣೆ

ಏ.6ರಂದು ಬೂತ್ ಮಟ್ಟದಲ್ಲಿ ಬಿಜೆಪಿ ಪಕ್ಷದ ಸಂಸ್ಥಾಪನ ದಿನ ಆಚರಣೆ ಮಾಡಲಾಗುವುದು ಎಂದು ಸಂಸದ ರಾಘವೇಂದ್ರ ತಿಳಿಸಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1980ರ ಏ.6ರಂದು ನಮ್ಮ ಪಕ್ಷ ಆರಂಭವಾಯಿತು. ಇದರ ಅಂಗವಾಗಿ ರಾಷ್ಟ್ರದಾದ್ಯಂತ ಏ.6ರಂದು ಬೂತ್ ಮಟ್ಟದಿಂದ ಸಂಸ್ಥಾಪನ ದಿನಾಚರಣೆ ಆಚರಿಸಲಾಗುವುದು. ಈ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲಾಗುವುದು. ಏಕತ ಮಾನವತ ವಾದದ ಧ್ಯೇಯ ವಾಕ್ಯ ಇಟ್ಟು ಕೊಂಡು ದೀನದಯಾಳು ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿಯವರ ಆಶಯದಂತೆ ಕಾರ್ಯಕರ್ತರನ್ನು ಜೋಡಿಸಿಕೊಂಡು ಎಲ್ಲಾ ಬೂತ್‌ಗಳಲ್ಲಿ ವಿಶೇಷ ವಾಗಿ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.

ನಮ್ಮ ಹಿರಿಯರ ಆಶಯವೇ ಕಟ್ಟ ಕಡೆ ವ್ಯಕ್ತಿಗೂ ಮೂಲಭೂತ ಸೌಲಭ್ಯಗಳು ದೊರಕಬೇಕು. ಆರೋಗ್ಯ, ಶಿಕ್ಷಣ, ನೀರು, ಸ್ವಾಭಿಮಾನದ ಬದುಕು ಕೊಟ್ಟಿಕೊಡುವುದು ನಮ್ಮ ಮುಖ್ಯ ಧೈಯವಾಗಿದೆ. ಇದರ ಅಡಿಯಲ್ಲಿಯೇ ನಾವು ಕೆಲಸ ಮಾಡುತ್ತೇವೆ ಎಂದರು.

ಚುನಾವಣೆ ಇನ್ನು 37 ದಿನ ಬಾಕಿ ಇದೆ. ಈಗಾಗಲೇ ಬೂತ್ ಮಟ್ಟದಿಂದ ನಾವು ಪ್ರಚಾರವನ್ನು ಆರಂಭಿಸಿದ್ದೇವೆ. ಕಾರ್ಯಕರ್ತರ ಪರಿಶ್ರಮ ಎದ್ದುಕಾಣುತ್ತಿದೆ. ಮಹಿಳಾ ಸಮಾವೇಶಗಳು ಯಶಸ್ವಿಯಾಗುತ್ತಿವೆ. ಬಿಜೆಪಿ ಬಹುದೊಡ್ಡ ಪಕ್ಷವಾಗಿದೆ. 18 ಕೋಟಿ ಸದಸ್ಯರು ಇಲ್ಲಿದ್ದಾರೆ. ಈಗ ಒಳ್ಳೆಯ ವಾತಾವರಣವಿದೆ. ಎಲ್ಲರೂ ಸೇರಿ ಈ ಚುನಾವಣಾ ರಥವನ್ನು ಯಶಸ್ವಿಯಾಗಿ ಎಳೆಯುತ್ತೇವೆ ಎಂದರು.

ಭದ್ರಾವತಿ ತಾಲೂಕಿನ ಶ್ರೀರಾಮನಗರದ ಶ್ರಮಶೀವಿ ಮರಿಸಿದ್ದಯ್ಯ ಶ್ರೀ ರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಮಹಿಳಾ ಕಾರ್ಯಕರ್ತರ ಸಮಾವೇಶವನ್ನು ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿದರು.