ಜನರ ಬೇಡಿಕೆ ಬಹಳಷ್ಟು ಇರುತ್ತದೆ. ಜನರಿಂದ ಮಾಹಿತಿ ಪಡೆದು ಯೋಜನೆ ರೂಪಿಸುವುದು ಕಷ್ಟಕರವಾಗಿದೆ. ಆದ್ದರಿಂದ ಯೋಜನೆ ರೂಪಿಸುವಾಗ ಯಾವ ವಿಷಯಕ್ಕೆ ಆದ್ಯತೆ ನೀಡಬೇಕು ಎಂಬುದನ್ನು ತಿಳಿಸಲಾಗುವುದು. ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ಯಾವ ಫಲಾನುಭವಿಗೆ ಆದ್ಯತೆ ನೀಡಬೇಕು ಎಂಬುದನ್ನು ತಿಳಿಸಲಾಗುವುದು.
ಕನ್ನಡಪ್ರಭ ವಾರ್ತೆ ಮೈಸೂರು
ಸರ್ಕಾರ ಸಾರ್ವಜನಿಕರ ಅಭಿವೃದ್ಧಿಗಾಗಿ ಯೋಜನೆ ರೂಪಿಸುತ್ತದೆ. ಈ ಹಿನ್ನೆಲೆಯಲ್ಲಿ ಯೋಜನೆ ರೂಪಿಸುವಾಗ ಜನರ ಪಾಲ್ಗೊಳ್ಳುವಿಕೆ ಅತಿ ಮುಖ್ಯ ಎಂದು ಕರ್ನಾಟಕ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ್ ತಿಳಿಸಿದರು.ಜಿಪಂ ಸಭಾಂಗಣದಲ್ಲಿ ಮೈಸೂರು ವಿಭಾಗ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಅಧಿಕಾರಿಗಳು ಕಾನೂನು ಬದ್ಧವಾಗಿ ಕೆಲಸ ನಿರ್ವಹಿಸಿದರೆ ಅಭಿವೃದ್ಧಿ ಬಹಳ ಸುಲಭವಾಗಿ ನಡೆಯುತ್ತದೆ ಎಂದರು.
ಜನರ ಬೇಡಿಕೆ ಬಹಳಷ್ಟು ಇರುತ್ತದೆ. ಜನರಿಂದ ಮಾಹಿತಿ ಪಡೆದು ಯೋಜನೆ ರೂಪಿಸುವುದು ಕಷ್ಟಕರವಾಗಿದೆ. ಆದ್ದರಿಂದ ಯೋಜನೆ ರೂಪಿಸುವಾಗ ಯಾವ ವಿಷಯಕ್ಕೆ ಆದ್ಯತೆ ನೀಡಬೇಕು ಎಂಬುದನ್ನು ತಿಳಿಸಲಾಗುವುದು. ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ಯಾವ ಫಲಾನುಭವಿಗೆ ಆದ್ಯತೆ ನೀಡಬೇಕು ಎಂಬುದನ್ನು ತಿಳಿಸಲಾಗುವುದು ಎಂದರು.ಜನರ ಪಾಲ್ಗೊಳ್ಳುವಿಕೆಯಿಂದ ಜನೋಪಯೋಗಿ ಕೆಲಸ ಮಾಡಬಹುದು ಎಂಬ ಆಶಯದೊಂದಿಗೆ ಸಭೆಗಳನ್ನು ನಡೆಸುತ್ತಿದ್ದು, ಜಿಲ್ಲಾ ಯೋಜನಾ ವಿವರಗಳನ್ನು ಆಯವ್ಯಯಕ್ಕೂ ಮುನ್ನ ಮುಖ್ಯಮಂತ್ರಿಗಳಿಗೆ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಗ್ರಾಮ ಮಟ್ಟದಲ್ಲಿ ಗ್ರಾಮ ಸಭೆಯಲ್ಲಿ ಜನರ ಪಾಲ್ಗೊಳ್ಳುವಿಕೆ ನೋಡಬಹುದು. ನಗರ ಪ್ರದೇಶದಲ್ಲಿ ಜನರ ಪಾಲ್ಗೊಳ್ಳುವಿಕೆ ಕಾಣುತ್ತಿಲ್ಲ. ಆದರಿಂದ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಡಿ. 6ರೊಳಗೆ 100 ಮತಗಳಿಗೆ ಇಬ್ಬರನ್ನು ಆಯ್ಕೆ ಮಾಡಿ ನೆಯ್ಬರ್ ವುಡ್ ಗ್ರೂಪ್ ರಚಿಸಿ ನಂತರ ವಾಡ್೯ ಸಭೆಗಳನ್ನು ರಚಿಸಿ ನಗರ ಪ್ರದೇಶದ ಯೋಜನೆಗಳನ್ನು ರೂಪಿಸಿ ಎಂದರು.ಗ್ರಾಮ ಹಾಗೂ ವಾಡ್೯ ಸಭೆಗಳಿಂದ ಜನರ ಅಭಿಪ್ರಾಯ ಪಡೆದು ತಾಲೂಕು ಮಟ್ಟದ ಯೋಜನೆ ರೂಪಿಸಿ ನಂತರ ಜಿಲ್ಲಾ ಮಟ್ಟದಲ್ಲಿ ಕ್ರೋಢಿಕರಿಸಿ ವರದಿ ನೀಡಿ. ಜಿಲ್ಲಾ ಯೋಜನಾ ಸಮಿತಿಗಳ ಕಾರ್ಯನಿರ್ವಹಣೆ ಪರಿಣಾಮಕಾರಿಯಾಗಿ ನಡೆದರೆ ಮುಂದಿನ ದಿನಗಳಲ್ಲಿ ಬಹಳಷ್ಟು ಜನರ ಕಷ್ಟ ಪರಿಹಾರವಾಗುತ್ತದೆ ಎಂದರು.
ಪ್ರಾದೇಶಿಕ ಆಯುಕ್ತ ನಿತೀಶ್ ಪಾಟೀಲ್ ಮಾತನಾಡಿ, ಜಿಲ್ಲೆಯ ಪ್ರಗತಿಪರ ಯೋಜನೆಗಳನ್ನು ರೂಪಿಸುವ ಸಲುವಾಗಿ ಈಗಾಗಲೇ ತರಬೇತಿಗಳನ್ನು ನೀಡಲಾಗಿದೆ. ಕೆಲವು ಜಿಲ್ಲೆಗಳಲ್ಲಿ ತಾಲೂಕು ಹಾಗೂ ಜಿಲ್ಲಾ ಹಂತದಲ್ಲಿ ಯೋಜನೆ ರೂಪಿಸುವುದು ಬಾಕಿ ಇದ್ದು, ಶೀಘ್ರವಾಗಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅವರು ಸೂಚಿಸಿದರು.ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ, ಮೈಸೂರು ಜಿಪಂ ಸಿಇಒ ಯುಕೇಶ್ ಕುಮಾರ್, ಚಾಮರಾಜನಗರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಪಂ ಸಿಇಒಗಳು ತಮ್ಮ ಜಿಲ್ಲೆಗಳ ಯೋಜನೆಯನ್ನು ವಿವರಿಸಿದರು.
ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಸೇರಿದಂತೆ ಮೈಸೂರು ವಿಭಾಗದ ವಿವಿಧ ಜಿಲ್ಲೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.