ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಸ್ತುತ ದಿನಗಳಲ್ಲಿ ಅಧಿಕಾರಯುತ ರಾಜಕಾರಣ ಮಾಡುವುದು ಸುಲಭ. ಆದರೆ, ಜನಪರ ರಾಜಕಾರಣ ಮಾಡುವುದು ಬಹಳ ಕಷ್ಟ. ಜನರ ಸಮಸ್ಯೆಗಳನ್ನು ತಿಳಿದು ಅದನ್ನು ನಿವಾರಣೆ ಮಾಡಿದಾಗ ಮಾತ್ರ ಒಬ್ಬ ರಾಜಕಾರಣಿ ನಿಜವಾದ ಜನನಾಯಕನಾಗಲು ಸಾಧ್ಯ. ಜನಪರವಾದ ರಾಜಕಾರಣ ನಮ್ಮನ್ನು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ತಾಲೂಕಿನ ಎಲೆಚಾಕನಹಳ್ಳಿ ಗ್ರಾಮದಲ್ಲಿ ತೂಬಿನಕೆರೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಕೆರೆ-ಕಟ್ಟೆಗಳಿಗೆ ಲೋಕಪಾವನಿ ನದಿಯಿಂದ ನೀರು ತುಂಬಿಸಲು ಅನುವು ಮಾಡಿಕೊಟ್ಟ ನೆನಪಿಗಾಗಿ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಗೌರವ ಸಮರ್ಪಣೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ನಾವು ಸಾರ್ವಜನಿಕ ಜೀವನಕ್ಕೆ ಬರುವಂತೆ ಯಾರೂ ಆಹ್ವಾನ ಕೊಟ್ಟಿಲ್ಲ. ಸ್ವಯಂ ಪ್ರೇರಿತವಾಗಿ ಬಂದಿದ್ದೇವೆ. ಜನರು ನಮ್ಮನ್ನು ಗುರುತಿಸಿ ಆಯ್ಕೆ ಮಾಡಿ ಗೌರವದ ಸ್ಥಾನ ನೀಡಿದ್ದಾರೆ. ಆ ಸ್ಥಾನದಿಂದ ನಮಗೆ ಜವಾಬ್ದಾರಿ ಹೆಚ್ಚಿದೆ. ಬದ್ಧತೆಯಿಂದ ಜನಪರ ಕೆಲಸ ಮಾಡುವುದು ನಮ್ಮ ಕರ್ತವ್ಯ. ಹಣ, ಅಧಿಕಾರವಷ್ಟೇ ರಾಜಕಾರಣಿಗಳ ಗುರಿಯಾಗಬಾರದು. ಅಧಿಕಾರದಿಂದ ಸಿಕ್ಕ ಅವಕಾಶವನ್ನು ಬಳಸಿಕೊಂಡು ಜನರ ಬಳಿಗೆ ಹೋಗಿ ರಾಜಕಾರಣ ಮಾಡಿ ಅವರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಗುರಿಯಾಗಿಸಿಕೊಳ್ಳಬೇಕು. ಆಗ ಜನಮನ್ನಣೆಗೆ ಪಾತ್ರರಾಗುತ್ತೀರಿ ಎನ್ನುವುದಕ್ಕೆ ಈ ಸಮಾರಂಭವೇ ಸಾಕ್ಷಿ ಎಂದರು.ನಾನು ಜಲಸಂಪನ್ಮೂಲ ಸಚಿವನಾಗಿದ್ದ ಸಮಯದಲ್ಲಿ ಕೆಆರ್‌ಎಸ್‌ನ +೭೦ ಮತ್ತು +೭೫ರ ಗೇಟ್‌ಗಳು ಶಿಥಿಲಗೊಂಡು ನೀರು ಹೊರಗೆ ಹರಿದುಹೋಗುತ್ತಿತ್ತು. ಏನಾದರೂ ಮಾಡಿ ವ್ಯರ್ಥವಾಗಿ ಹರಿದುಹೋಗುವ ನೀರನ್ನು ತಡೆಯಲೇಬೇಕೆಂದು ಪಣತೊಟ್ಟು ಗೇಟ್‌ಗಳನ್ನು ಬದಲಾವಣೆ ಮಾಡಲು ನಿರ್ಧರಿಸಿದೆ. ಅದರಂತೆ ೩೫ಕ್ಕೂ ಹೆಚ್ಚು ಗೇಟ್‌ಗಳು ಬದಲಾವಣೆಯಾಗಿದ್ದರಿಂದ ಈಗ ಒಂದು ಹನಿ ನೀರು ವ್ಯರ್ಥವಾಗಿ ಹರಿದುಹೋಗುತ್ತಿಲ್ಲ ಎಂದರು.
ಕಾವೇರಿ ನೀರನ್ನು ಬಳಸುವುದು ನಮ್ಮ ಹಕ್ಕು. ತಮಿಳುನಾಡಿಗೆ ನಿಗದಿಪಡಿಸಿದ ನೀರನ್ನು ಹೊರತುಪಡಿಸಿ ಹೆಚ್ಚುವರಿ ನೀರನ್ನು ಬಳಸುವ ಹಕ್ಕು ನಮಗೆ ಕಾನೂನುಬದ್ಧವಾಗಿ ಸಿಕ್ಕಿದೆ. ಅದನ್ನು ಬಳಸಿಕೊಂಡು ನೂರಾರು ಕೆರೆಗಳನ್ನು ತುಂಬಿಸಿದ್ದೇವೆ. ಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡು ಅಣೆಕಟ್ಟೆಗಳನ್ನು ನವೀಕರಣ ಮಾಡಿ ೯೦ ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸಲಾಗಿದೆ. ನಾವು ಮಾಡಿದ ಕೆಲಸವನ್ನು ಗುರುತಿಸಿ ಜನರು ಗೌರವಿಸಿದರೆ ಅದಕ್ಕಿಂತ ದೊಡ್ಡ ಡಾಕ್ಟರೇಟ್ ಮತ್ತೊಂದಿಲ್ಲ ಎಂದರು.
ಜನಪರವಾಗಿರುವ ಒಂದೊಂದು ಯೋಜನೆಗಳನ್ನು ಜಾರಿ ಮಾಡುವಾಗ ಸಾಕಷ್ಟು ಅಡಚಣೆಗಳು ಎದುರಾಗುತ್ತವೆ. ಆ ಸಮಯದಲ್ಲಿ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು. ಜನರಿಗೆ ಒಳ್ಳೆಯದಾಗುವ ಕೆಲಸವನ್ನು ಮಾಡಿದಾಗ ಯಾವುದೇ ಕಾನೂನು ಅಡಚಣೆಗಳೂ ಎದುರಾಗುವುದಿಲ್ಲ. ಆದರೆ, ಅಧಿಕಾರಿಗಳ ಮಾತು ಕೇಳಿದರೆ ಎಂದಿಗೂ ಉದ್ಧಾರವಾಗುವುದಿಲ್ಲ. ಅಧಿಕಾರಿಗಳ ಮನಸ್ಥಿತಿಯನ್ನು ಮೀರಿ ಯೋಚನೆ ಮಾಡುವ ಮನಸ್ಥಿತಿಯನ್ನು ನಾವು ಹೊಂದಿರಬೇಕು ಎಂದರು.
ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು ಬಹಳ ಸೂಕ್ಷ್ಮಮತಿಗಳು. ಪ್ರತಿ ವಿಚಾರದಲ್ಲೂ ತಜ್ಞರಷ್ಟೇ ಆಲೋಚನೆ ಮಾಡುವಂತಹವರು. ಅಧ್ಯಯನಶೀಲರು. ಜನರ ನಂಬಿಕೆಯನ್ನು ನಾವು ಹುಸಿಗೊಳಿಸಲು ಬಿಡಬಾರದು. ಸುಧಾರಣೆ ಬಯಸುವ ಜನರಿಗೆ ತಕ್ಕಂತೆ ನಾವೂ ವೇಗವಾಗಿರಬೇಕು ಎನ್ನುತ್ತಾ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದವರು ಎಂದರು.ಮಂಡ್ಯ ಅಭಿವೃದ್ಧಿಯಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಂಡಿಲ್ಲ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ನೀಲಿ ನಕ್ಷೆಯೊಂದನ್ನು ತಯಾರು ಮಾಡಿ. ಪಕ್ಷಾತೀತವಾಗಿ ಎಲ್ಲರೂ ಒಟ್ಟಾಗಿ ಬೆಂಬಲ ನೀಡಿ ಜಿಲ್ಲೆಯನ್ನು ಅಭಿವೃದ್ಧಿಯತ್ತ ಮುನ್ನಡೆಸೋಣ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗೌರವ ಸಮರ್ಪಿಸಲಾಯಿತು. ಸುತ್ತೂರು ಹಾಗೂ ಚುಂಚಶ್ರೀಗಳೂ ಬಸವರಾಜ ಬೊಮ್ಮಾಯಿ ಅವರನ್ನು ಮಠದ ವತಿಯಿಂದ ಅಭಿನಂದಿಸಿದರು. ವೇದಿಕೆಯಲ್ಲಿ ಸುತ್ತೂರು ಮಠದ ಪೀಠಾಧಿಪತಿ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ಶಿವಲೀಲ ಆಶ್ರಯಮ ಮಠದ ಶ್ರೀರಾಜುಸ್ವಾಮಿ, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ರಮೇಶ್ ಬಂಡಿಸಿದ್ದೇಗೌಡ, ಮಾಜಿ ಶಾಸಕಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಮಂಡ್ಯ ತಾಪಂ ಮಾಜಿ ಅಧ್ಯಕ್ಷೆ ಕೆ.ಹೇಮಲತಾ, ಸಮಾಜಸೇವಕ ಎಲೆಚಾಕನಹಳ್ಳಿ ಬಸವರಾಜು, ತಗ್ಗಹಳ್ಳಿ ವೆಂಕಟೇಶ್, ಅಶೋಕ್ ಪಟೇಲ್ ಇತರರಿದ್ದರು.ಎಲೆಚಾಕನಹಳ್ಳಿ ಕೆರೆಗೆ ಬಾಗಿನ ಸಮರ್ಪಣೆ:ಸಮಾರಂಭಕ್ಕೂ ಮುನ್ನ ಸುತ್ತೂರು ಶ್ರೀಗಳು ಮತ್ತು ಚುಂಚಶ್ರೀ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಎಲೆಚಾಕನಹಳ್ಳಿ ಕೆರೆಗೆ ಬಾಗೀನ ಸಮರ್ಪಿಸಿದರು. ನಂತರ ಗಣ್ಯರನ್ನು ಜಾನಪದ ಕಲಾತಂಡಗಳು, ಜೋಡೆತ್ತುಗಳು ಹಾಗೂ ಮಹಿಳೆಯರ ಪೂರ್ಣಕುಂಭ ಸ್ವಾಗತದೊಂದಿಗೆ ವೇದಿಕೆಗೆ ಕರೆತರಲಾಯಿತು.