ಕಾನೂನು, ಸುವ್ಯವಸ್ಥೆ ಕಾಪಾಡಲು ಜನತೆ ಸಹಕರಿಸಿ: ಎಸ್ಪಿ ಉಮಾ ಪ್ರಶಾಂತ

| Published : Jun 28 2024, 12:50 AM IST

ಕಾನೂನು, ಸುವ್ಯವಸ್ಥೆ ಕಾಪಾಡಲು ಜನತೆ ಸಹಕರಿಸಿ: ಎಸ್ಪಿ ಉಮಾ ಪ್ರಶಾಂತ
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸ್ ಇಲಾಖೆ ಇರುವುದೇ ಸಾರ್ವಜನಿಕರ ಹಿತರಕ್ಷಣೆ, ಕಾನೂನು, ಸುವ್ಯವಸ್ಥೆ ಕಾಪಾಡಲು. ಇಂತಹ ಇಲಾಖೆ ಜೊತೆಗೆ ಸಾರ್ವಜನಿಕರ ಸ್ಪಂದನೆಯೂ ಅತೀ ಮುಖ್ಯ

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರವೂ ಅತೀ ಮುಖ್ಯ. ಅಕ್ರಮ ಮದ್ಯ ಮಾರಾಟ, ಮಟ್ಕಾ-ಇಸ್ಪೀಟ್‌ ಜೂಜಾಟ ಸೇರಿ ಯಾವುದೇ ಅಕ್ರಮ ಚಟುವಟಿಕೆ, ರೌಡಿಗಳು, ಪುಡಿ ರೌಡಿಗಳ ಹಾವಳಿ, ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್‌ ಅಧೀಕ್ಷಕಿ ಉಮಾ ಪ್ರಶಾಂತ ಕರೆ ನೀಡಿದರು.

ಇಲ್ಲಿನ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಜನ ಸಂಪರ್ಕ ಸಭೆ ಉದ್ಘಾಟಿಸಿ, ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಇರುವುದೇ ಸಾರ್ವಜನಿಕರ ಹಿತರಕ್ಷಣೆ, ಕಾನೂನು, ಸುವ್ಯವಸ್ಥೆ ಕಾಪಾಡಲು. ಇಂತಹ ಇಲಾಖೆ ಜೊತೆಗೆ ಸಾರ್ವಜನಿಕರ ಸ್ಪಂದನೆಯೂ ಅತೀ ಮುಖ್ಯ ಎಂದರು.

ಗಾಂಜಾ ಸೇವನೆ, ಮಾರಾಟ ಮಾಡುವವರ ವಿರುದ್ಧ ಜಿಲ್ಲಾದ್ಯಂತ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ವರ್ಷ 70ಕ್ಕೂ ಹೆಚ್ಚು ಎನ್‌ಡಿಪಿಎಸ್‌ ಪ್ರಕರಣ ದಾಖಲಾಗಿದೆ. ನಿತ್ಯವೂ ಸಂಶಯಾಸ್ಪದ ವ್ಯಕ್ತಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಗಾಂಜಾ ಸೇವನೆ ಪಾಸಿಟಿವ್ ವರದಿ ಬಂದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ನಿಮ್ಮ ಸುತ್ತಮುತ್ತ ಗಾಂಜಾ ವ್ಯಸನಿ, ಮಾರಾಟಗಾರರು ಕಂಡು ಬಂದರೆ ತಕ್ಷಣ ಸ್ಥಳೀಯ ಠಾಣೆ, ತುರ್ತು ಸಹಾಯವಾಣಿ 112ಗೆ ಕರೆ ಮಾಡಿ, ಮಾಹಿತಿ ನೀಡಿ. ಮಾಹಿತಿ ನೀಡಿದವರ ವಿವರ ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು.

ಅಕ್ರಮ ಮದ್ಯ ಮಾರಾಟ, ಮಟ್ಕಾ-ಇಸ್ಪೀಟ್‌ ಜೂಜಾಟ ಕಂಡು ಬಂದರೆ ಇಲಾಖೆಗೆ ಗಮನಕ್ಕೆ ತನ್ನಿ. ಕೆಟಿಜೆ ನಗರ ಠಾಣೆ ವ್ಯಾಪ್ತಿಯಲ್ಲಿ 13 ವಾರ್ಡ್ ಇದ್ದು, 16 ಹಗಲು ಬೀಟ್‌ ಇವೆ. ಒಬ್ಬ ಠಾಣಾಧಿಕಾರಿ ಯಾವ ರೀತಿ ಜವಾಬ್ದಾರರೋ ಅದೇ ರೀತಿ ಬೀಟ್ ಕಾನ್ಸಟೇಬಲ್ ಸಹ ತಮ್ಮ ಬೀಟ್‌ನ ಜವಾಬ್ದಾರರಾಗಿರುತ್ತಾರೆ. ಬಡ್ಡಿ ವ್ಯವಹಾರ ಮಾಡುವವರ ವಿರುದ್ಧ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ. ಧೂಮಪಾನ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಹೇಳಿದರು.

ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗುವವರಿದ್ದರೆ ಅಂತಹ ಮನೆಯವರು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಪ್ರತಿ ಮನೆಯಲ್ಲೂ ಸಿಸಿ ಕ್ಯಾಮೆರಾ ಅಳವಡಿಸುವುದು ಸೂಕ್ತ. ಇದರಿಂದ ಅಪರಾಧ ತಡೆ ಜೊತೆಗೆ ಆರೋಪಿಗಳ ಪತ್ತೆಗೂ ಸಹಕಾರಿಯಾಗುತ್ತದೆ. ಪಾಲಕರು ತಮ್ಮ ಅಪ್ರಾಪ್ತ ಮಕ್ಕಳಿಗೆ ದ್ವಿಚಕ್ರ ಸೇರಿ ಯಾವುದೇ ವಾಹನ ಚಾಲನೆಗೆ ಕೊಡಬಾರದು. ಚಿಕ್ಕ ಮಕ್ಕಳು ವಾಹನ ಚಾಲನೆ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆ ಸ್ಪೆಷಲ್ ಡ್ರೈವ್ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಮೊಬೈಲ್‌, ವಾಟ್ಸಪ್ ಸೇರಿ ಸೋಷಿಯಲ್ ಮೀಡಿಯಾ ಬಳಕೆ ಬಗ್ಗೆ ಮಕ್ಕಳಿಂದ ಹಿರಿಯ ನಾಗರಿಕರು, ವಿಶೇಷವಾಗಿ ಯುವತಿಯರು, ಮಹಿಳೆಯರು ಜಾಗ್ರತೆ ವಹಿಸಬೇಕು. ಕಳುವು, ಕಳೆದು ಹೋದ ಮೊಬೈಲ್ ಪೋನ್‌ ** CEIR PORTAL ** ನಲ್ಲಿ ಮೊಬೈಲ್ ವಾರಸುದಾರರ ವಿವರ ನಮೂದಿಸಿ, ಮೊಬೈಲ್ ** IMEI ** ನಂಬರನ್ನು ಬ್ಲಾಕ್ ಮಾಡುವ ಬಗ್ಗೆ ಹಾಗೂ ದೂರು ಜನರು ತಿಳಿದುಕೊಳ್ಳಬೇಕು. ಜಿಲ್ಲೆಯಲ್ಲಿ ** CEIR PORTAL ** ಆರಂಭವಾದಾಗಿನಿಂದ ಈವರೆಗೆ 5430 ಮೊಬೈಲ್ ಕಳುವಾದ, ಕಳೆದು ಹೋದ ಬಗ್ಗೆ ದೂರು ದಾಖಲಿಸಿದ್ದು, 2968 ಮೊಬೈಲ್ ಪತ್ತೆ ಮಾಡಿ, 1410 ಮೋಬೈಲ್ ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ ತಿಳಿಸಿದರು.

ಸ್ಥಳೀಯ ನಿವಾಸಿ ಸತೀಶ ಪೂಜಾರಿ ಮಾತನಾಡಿ, ಗಾಂಜಾ ಪ್ರಕರಣ ಕೆಟಿಜೆ ನಗರ ವ್ಯಾಪ್ತಿಯಲ್ಲಿ ಸಾಕಷ್ಟು ಕಡಿಮೆಯಾಗಿದೆ. ಹಿಂದೆ ಬಿ.ಸಿ.ಪಾಟೀಲ್, ಶಮೀದ್ ಪಾಷಾ ಇತರೆ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದರು. ಅದೇ ರೀತಿ ಕಾನೂನು ಸುವ್ಯವಸ್ಥೆ ಕಾಪಾಡಲು, ಕಾನೂನು ಬಾಹಿರ ಚಟುವಟಿಕೆ ಕಾಪಾಡಲು ಪೊಲೀಸ್ ಇಲಾಖೆಗೆ ಸಾರ್ವಜನಿಕರೂ ಸ್ಪಂದಿಸುತ್ತಿದ್ದಾರೆ ಎಂದರು.

ಕಾಲೇಜು ಪ್ರಾಚಾರ್ಯ ಗಂಗಾಧರ ಮಾತನಾಡಿ, ಅಪರಾಧ, ಕಳ್ಳತನ ಪ್ರಕರಣಗಳು ಕಡಿಮೆಯಾಗಿದ್ದರೂ, ಸಣ್ಣಪುಟ್ಟ ಪೆಟ್ರೋಲ್‌ ವಾಹನಗಳ ಬಿಡಿ ಭಾಗ ಕದಿಯುವುದು, ಗುಂಪು ಕಟ್ಟಿಕೊಂಡು ನಿಲ್ಲುವುದು, ಸುತ್ತಾಡುವುದು ಸಾಮಾನ್ಯವಾಗುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಸಿಇಐಆರ್ ಬಗ್ಗೆ ಅರಿವು ಮೂಡಿಸಬೇಕು. ಸಂಚಾರ ನಿಯಮ ಉಲ್ಲಂಘನೆ ತಡೆಗೆ ಕಠಿಣಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಎಎಸ್ಪಿಗಳಾದ ವಿಜಯಕುಮಾರ ಎಂ.ಸಂತೋಷ, ಡಿವೈಎಸ್ಪಿ ಬಸವರಾಜ, ಕೆಟಿಜೆ ನಗರ ಠಾಣೆ ಇನ್ಸಪೆಕ್ಟರ್ ಸುನೀಲಕುಮಾರ, ಪಿಎಸ್ಐ ಸಾಗರ್ ಅತ್ತರ್‌ವಾಲಾ, ಅಧಿಕಾರಿ, ಸಿಬ್ಬಂದಿ, ಸ್ಥಳೀಯ ಮುಖಂಡ ಆರ್.ಲಕ್ಷ್ಮಣ, ಬಸವರಾಜ, ನಂದಿನಿ, ಇತರರು ಇದ್ದರು.

ನಾವು ಹತ್ತು ಜನ ಸೇರಿ ಸಂಘದ ಸಾಲ ಪಡೆದಿದ್ದೇವೆ. ಈ ಪೈಕಿ ಒಬ್ಬರು ಕಾಣೆಯಾಗಿದ್ದಾರೆ. ಉಳಿದ 9 ಜನರಿಗೆ ತೊಂದರೆಯಾಗಿದೆ. ಕಾಣೆಯಾದ ಮಹಿಳೆ ಸಾಲ ನಾವು ತೀರಿಸುವಂತಾಗಿರುತ್ತದೆ. ದಯಮಾಡಿ ತಲೆ ಮರೆಸಿಕೊಂಡವರನ್ನು ಪತ್ತೆ ಮಾಡಿ, ಹಣ ಕೊಡಿಸಬೇಕು.

ನಂದಿನಿ. ಕೆಟಿಜೆ ನಗರ ಠಾಣೆ ವ್ಯಾಪ್ತಿ ನಿವಾಸಿ.

ಸಂಘದಿಂದ ಸಾಲ ಪಡೆದು, ನಾಪತ್ತೆಯಾದ ಮಹಿಳೆ ಬಗ್ಗೆ ಕೆಟಿಜೆ ನಗರ ಠಾಣೆಗೆ ಅರ್ಜಿ ನೀಡಿ. ಕಾನೂನು ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇನ್ನಾದರೂ ಸಂಘದ ಸಾಲ ಕೊಡುವ, ಪಡೆಯುವ ವೇಳೆ ಜಾಗೃತಿ ವಹಿಸಿ. ಸೂಕ್ತ ದಾಖಲೆ ಇಟ್ಟುಕೊಂಡು, ಸಾಲ ಪಡೆಯಬೇಕು.

ಉಮಾ ಪ್ರಶಾಂತ, ಜಿಲ್ಲಾ ಪೊಲೀಸ್ ಅಧೀಕ್ಷಕಿ.