ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅರಣ್ಯಾಧಿಕಾರಿಗಳಿಗೆ ಶಾಸಕ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ಯಲ್ಲಾಪುರಅರಣ್ಯ ಅಧಿಕಾರಿಗಳು ಬರುವ ಮುಂಚೆಯೇ ಜಿಲ್ಲೆಯಲ್ಲಿ ಅರಣ್ಯವಿದೆ. ಅದನ್ನು ರಕ್ಷಿಸಲಾಗಿದ್ದು, ರಕ್ಷಣೆಗೆಂದು ಬಂದ ನೀವು ಯಾವುದೇ ಕಾರಣಕ್ಕೂ ಜನರಿಗೆ ತೊಂದರೆ ನೀಡಬಾರದು. ಜನತೆಗೆ ಮಾನವೀಯತೆ ತೋರಬೇಕು. ಹೊಸ ಅತಿಕ್ರಮಣಕ್ಕೆ ಅವಕಾಶ ನೀಡಬೇಡಿ ಎಂದು ಅರಣ್ಯಾಧಿಕಾರಿಗಳಿಗೆ ಶಾಸಕ ಶಿವರಾಮ ಹೆಬ್ಬಾರ ಎಚ್ಚರಿಸಿದರು.ಬುಧವಾರ ತಾಪಂ ಸಭಾಭವನದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ವಿವಿಧ ಇಲಾಖೆಗಳ ಅನುದಾನದಡಿ ಫಲಾನುಭವಿಗಳಿಗೆ ಸಲಕರಣೆ ವಿತರಿಸಿ ಮಾತನಾಡಿದರು.ಅತಿಕ್ರಮಣದಾರರಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆ ಯಾವಾಗ ಮುಗಿಯುತ್ತದೆ ಎಂಬ ಸ್ಪಷ್ಟತೆ ಇಲ್ಲ. ಈಗಾಗಲೇ ಅರ್ಜಿ ಸಲ್ಲಿಸಿ ಜಿಪಿಎಸ್ ಆದ ಅತಿಕ್ರಮಣದಾರರಿಗೆ ಇಲಾಖೆ ಅಧಿಕಾರಿಗಳಿಂದ ಯಾವುದೇ ತೊಂದರೆ ಆಗಬಾರದು. ಅಧಿಕಾರಿಗಳು ಕಾನೂನಿನ ಪುಸ್ತಕ ಹಿಡಿದು ಕಾರ್ಯನಿರ್ವಹಿಸುವ ಬದಲು ಮಾನವೀಯತೆಯ ಆಧಾರದಲ್ಲಿ ಕೆಲಸ ಮಾಡಬೇಕು. ಕ್ಷೇತ್ರದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಹಣ ಬಿಡುಗಡೆಯಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ತೊಂದರೆ ಆಗದಂತೆ ಇಲಾಖೆ ಸಹಕರಿಸಬೇಕು ಎಂದರು.
ಕ್ಯಾನ್ಸರ್ ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರ 8-9 ತರಗತಿಯ ಎಲ್ಲ ಹೆಣ್ಣುಮಕ್ಕಳಿಗೆ ಲಸಿಕೆ ನೀಡಲು ಮುಂದಾಗಿದೆ. ಪಾಲಕರು ಆತಂಕಪಡುವ ಅಗತ್ಯವಿಲ್ಲ. ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ವಿನಂತಿಸಿದರು.ಈ ವೇಳೆ ಮಾವಿನಮನೆ ಗ್ರಾಪಂ ಮಾಜಿ ಅಧ್ಯಕ್ಷ ಸುಬ್ಬಣ್ಣ ಕುಂಟೆಗಾಳಿ ಪ್ರಸ್ತಾಪಿಸಿ, ಗ್ರಾಪಂ ವ್ಯಾಪ್ತಿಯಲ್ಲಿ ಕ್ಯಾನ್ಸರ್ ಕಂಡಿದ್ದು, ಇತ್ತೀಚೆಗೆ ಇಬ್ಬರು ಬಲಿಯಾಗಿದ್ದಾರೆ. ಇದಕ್ಕೆ ಕೈಗಾ ಅಣುಸ್ಥಾವರದಿಂದಲೇ ರೋಗ ವ್ಯಾಪಿಸುತ್ತಿದೆ ಎಂಬ ವದಂತಿಯೂ ಹಬ್ಬಿದೆ. ಆದ್ದರಿಂದ ಆರೋಗ್ಯ ಇಲಾಖೆ ಸರ್ವೆ ನಡೆಸಬೇಕೆಂದು ಆಗ್ರಹಿಸಿದಾಗ, ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಶಾಸಕ ಭರವಸೆ ನೀಡಿದರು.
ಜತೆಗೆ ತಾಲೂಕಿನಲ್ಲಿ 18 ಮಳೆಮಾಪನವಿದ್ದು, ಅದರಲ್ಲಿ 6 ಮಾತ್ರ ಸರಿ ಇದೆ ಉಳಿದ 12ಕ್ಕೆ ಮೂರು ಬಾರಿ ಟೆಂಡರ್ ಕರೆದರೂ ಸರಿಪಡಿಸಲು ಯಾರೂ ಬಂದಿಲ್ಲ. ಅದನ್ನು ಸರಿಪಡಿಸುವ ಕಾರ್ಯ ಈಗ ಸ್ಥಳೀಯವಾಗಿಯೇ ಮಾಡಲು ಸರ್ಕಾರ ನಿರ್ದೇಶಿಸಿದೆ. ತಕ್ಷಣ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಹೆಬ್ಬಾರ ಸೂಚಿಸಿದರು.
ಇನ್ನು ಜಲಜೀವನ ಮಿಷನ್ ಅಡಿಯಲ್ಲಿ ಶೇ.೫೦ರಷ್ಟು ಮನೆಗಳಿಗೆ ನೀರು ಸಿಗದೇ ಇರುವುದರಿಂದ ಯೋಜನೆಯ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ. ಕೇಂದ್ರದಿಂದ ಬೋರ್ ವೆಲ್ ಕೊರೆಯಲು, ಪೈಪ್ ಲೈನ್ ಅಳವಡಿಕೆಗೆ ಅನುದಾನ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ತಾಲೂಕಿನಲ್ಲಿ ಹೆಚ್ಚಿನ ಭತ್ತ ಬೆಳೆದ ಕೃಷಿಕರಾದ ನಾರಾಯಣ ಹೆಗಡೆ ಕೆರೆಹೊಸಳ್ಳಿ, ನಂದೀಶ ಮರಾಠಿ ಅವರನ್ನು ಸನ್ಮಾನಿಸ ಲಾಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ಹಿಂದುಳಿದ ಮಹಿಳೆಯರಿಗೆ 70ಹೊಲಿಗೆ ಮಷಿನ್, 7ಮಿನಿ ಟ್ರ್ಯಾಕ್ಟರ್, 4 ಹುಲ್ಲು ಕಟಿಂಗ್ ಮಷಿನ್ ಸೇರಿದಂತೆ ವಿವಿಧ ಉಪಕರಣಗಳನ್ನು ಫಲಾನುಭವಿಗಳಿಗೆ ವಿತರಿಸಿದರು.ಆಡಳಿತಾಧಿಕಾರಿ ಕೆ.ಎಚ್. ಪಾಂಡು, ತಹಸೀಲ್ದಾರ್ ಚಂದ್ರಶೇಖರ ಹೊಸಮನಿ, ಕೆಡಿಪಿ ಸಮಿತಿಯ ಸದಸ್ಯರಾದ ವಿಜಯ ಮಿರಾಶಿ, ಲಾರೆನ್ಸ್ ಸಿದ್ದಿ, ಪ್ರಶಾಂತ ಸಭಾಹಿತ, ಎಂ.ಡಿ.ಮುಲ್ಲಾ, ದ್ಯಾಮಣ್ಣ ಬೋವಿವಡ್ಡರ್, ರಾಧಾ ಹೆಗಡೆ, ತಾಪಂ ಇಒ ರಾಜೇಶ ಧನವಾಡಕರ್, ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ಸಾರ್ವಜನಿಕರು ಇದ್ದರು.