ಮಹೇಶ ಛಬ್ಬಿ
ಗದಗ: ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ನೆತ್ತಿ ಸುಡುವ ಬಿಸಲಿನ ಝಳಕ್ಕೆ ಜನತೆ ಹೈರಾಣಾಗಿದ್ದಾರೆ. ತಾಪಮಾನ ಏರಿಕೆಯಿಂದ ಹಲವರ ಆರೋಗ್ಯದಲ್ಲಿ ಏರುಪೇರಾಗುವುದು ಕಂಡು ಬರುತ್ತಿದೆ. ನೆತ್ತಿ ಸುಡುವ ಬಿಸಿಲಿನಿಂದ ಬಸವಳಿದ ಜನರು ಬಾಯಾರಿಕೆ ನೀಗಿಸಿಕೊಳ್ಳಲು ಅರವಟ್ಟಿಗೆ, ಎಳನೀರು, ಜ್ಯೂಸ್ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿರುವುದು ಸಾಮಾನ್ಯವಾಗಿದೆ.ಈ ಬಾರಿ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು, ಬೆಳಗಿನ 10ರ ನಂತರ ನೆತ್ತಿಯ ಮೇಲೆ ಕೆಂಡ ಸುರಿದಂತಹ ಅನುಭವ, ರಸ್ತೆಗಳು ಕಾದ ಹಂಚಿನಂತಾಗಿ, ಪಾದಚಾರಿಗಳು, ದ್ವಿ-ಚಕ್ರ ವಾಹನ ಸವಾರರು ಬಸವಳಿಯುವಂತಾಗಿದೆ. ಬಿಸಿಲಿನ ತಾಪಕ್ಕೆ ಬಳಲುವ ಜನ ಚೇತರಿಕೆಗಾಗಿ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಎಳನೀರು, ಲಿಂಬು ಶರಬತ್ ಮೊದಲಾಗಿ ತಂಪು ಪಾನೀಯಗಳ ಬೇಡಿಕೆ ಹೆಚ್ಚಾಗಿದೆ. ಮಾರುಕಟ್ಟೆಗೆ ಕಲ್ಲಂಗಡಿ, ಕರ್ಬೂಜ ಹಣ್ಣುಗಳು ಧಾವಿಸಿವೆ. ವಿವಿಧ ಕಡೆ ಕಲ್ಲಂಗಡಿ ಹಣ್ಣಿನ ವ್ಯಾಪಾರ ಜೋರಾಗಿಯೇ ನಡೆದಿದೆ.
ಮಣ್ಣಿನ ಮಡಕೆಗೆ ಹೆಚ್ಚಿದ ಬೇಡಿಕೆ: ಬಡವರ ಫ್ರೀಜ್ ಎಂದೇ ಕರೆಯುವ ಮಣ್ಣಿನ ಮಡಕೆಗೆ ನಗರದಲ್ಲಿ ಬೇಡಿಕೆ ಹೆಚ್ಚಾಗಿದ್ದು, ಬೇಸಿಗೆ ಬಿಸಿಲಿನ ನಡುವೆ ನೈಸರ್ಗಿಕವಾದ ತಂಪು ನೀರು ಕುಡಿಯುವುದಕ್ಕಾಗಿ ಜನ ಹಾತೊರೆಯುತ್ತಿದ್ದು, ಮಣ್ಣಿನ ಮಡಕೆಗಳತ್ತ ಮುಖ ಮಾಡಿದ್ದಾರೆ. ಬೇಡಿಕೆ ಹೆಚ್ಚಾದಂತೆ ಸಾಮಾನ್ಯವಾಗಿ ಮಡಕೆಗಳ ಬೆಲೆಯೂ ಹೆಚ್ಚಾಗಿದೆ. ನೀರಿನ ಕ್ಯಾನ್‌ಗಳಂತೆ ಮಣ್ಣಿನ ಮಡಕೆಗಳಿಗೆ ನಲ್ಲಿಗಳನ್ನು ಅಳವಡಿಸಿದ್ದು, ಅವುಗಳ ಗಾತ್ರಕ್ಕೆ ತಕ್ಕಂತೆ ಮಣ್ಣಿನ ಮಡಕೆ ವ್ಯಾಪಾರಿಗಳು ಬೆಲೆ ನಿಗದಿ ಮಾಡಿದ್ದಾರೆ. 450-650ರ ವರೆಗೆ ಮಣ್ಣಿನ ಮಡಕೆಗಳ ಬೆಲೆಯಿದ್ದು, ಬೇಸಿಗೆ ದಿನಗಳಲ್ಲಿ ಮಾರಾಟ ಉತ್ತಮವಾಗಿ ನಡೆದಿದೆ ಎನ್ನುತ್ತಾರೆ ವ್ಯಾಪಾರಿಗಳು.ಓಡಾಟ ಅನಿವಾರ್ಯ: ಕಳೆದ ಒಂದು ವಾರದಿಂದ ತಾಪಮಾನ ಏರಿಕೆಯಾಗುತ್ತಿದೆ. ಮನೆಯಿಂದ ಹೊರಬಾರದಂತಹ ಸ್ಥಿತಿ ಇದ್ದರೂ ಅನಿವಾರ್ಯವಾಗಿ ಸರ್ಕಾರಿ ಕಚೇರಿ, ಅಂಗಡಿ- ಮುಂಗಟ್ಟುಗಳಿಗೆ ಆಗಮಿಸುವ ಜನರು ಜನರು ಬಿಸಿಲಿನ ಝಳಕ್ಕೆ ತತ್ತರಿಸಿ, ಬೆವರಿಳಿದು ಮೆತ್ತಗಾಗುತ್ತಿದ್ದಾರೆ. ಬಿಸಿಲಿನ ಹೊಡೆತ ತಾಳದೆ ಮನೆ, ಕಚೇರಿ ಬಿಟ್ಟು ಹೊರಬರಲು ಹಿಂಜರಿಕೆಯಾದರೂ ಕೆಲಸ- ಕಾರ್ಯಗಳ ನಿಮಿತ್ತ ಓಡಾಟ ಅನಿವಾರ್ಯ ಎನಿಸಿದೆ.
ತಂಪು ಪಾನೀಯಕ್ಕೆ ಬೇಡಿಕೆ: ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದಂತೆ ತಂಪಾದ ಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿದೆ. ನಗರದ ವಿವಿಧ ಭಾಗಗಳಲ್ಲಿ ಕಲ್ಲಂಗಡಿ, ಸೇಬು, ಅಂಜೂರ ಸೇರಿ ಬಗೆ-ಬಗೆಯ ಜ್ಯೂಸ್‌ಗಳಿದ್ದು, ಬಿಸಿಲಿನ ತಾಪ ನಿವಾರಿಸಿಕೊಳ್ಳಲು ಜ್ಯೂಸ್ ಕುಡಿಯುತ್ತಿದ್ದಾರೆ. ಕಲ್ಲಂಗಡಿ, ಎಳನೀರಿಗೂ ಸಾಕಷ್ಟು ಬೇಡಿಕೆ ಇದೆ. ಎಳನೀರು ಬೆಲೆ ₹35-40 ಕಲ್ಲಂಗಡಿಗೂ ಹೆಚ್ಚಿನ ಬೇಡಿಕೆ ಉಂಟಾಗಿದೆ. ನಗರದ ಮುಳಗುಂದ ನಾಕಾ, ಹಳೆ ಜಿಲ್ಲಾಸ್ಪತ್ರೆ, ವೀರೇಶ್ವರ ಗ್ರಂಥಾಲಯದ ಬಳಿ, ಹಳೆಯ ಬಸ್ ನಿಲ್ದಾಣದ ಹಿಂದೆ, ಪಂಚರಹೊಂಡ ಬೆಟಗೇರಿಯ ಬಸ್ ನಿಲ್ದಾಣ ಹತ್ತಿರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ರೈತರು ಟ್ರ್ಯಾಕ್ಟರ್‌ಗಳಲ್ಲಿ ಹೇರಿಕೊಂಡು ಕಲ್ಲಂಗಡಿ ಹಣ್ಣಿನ ಮಾರಾಟ ಮಾಡುತ್ತಿದ್ದಾರೆ.
ಕಲ್ಲಂಗಡಿ ಹಣ್ಣಿಗೆ ಮೊರೆ: ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರುತ್ತಿದ್ದು, ಬಿಸಲಿನ ಬೇಗೆಗೆ ಬಸವಳಿದ ಜನತೆ ಕಲ್ಲಂಗಡಿ ಹಣ್ಣಿಗೆ ಮೊರೆ ಹೋಗುತ್ತಿದ್ದಾರೆ. ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಇದೆ. ಹಣ್ಣಿನ ಮಾರಾಟವು ಉತ್ತಮವಾಗಿ ನಡೆದಿದೆ ಎಂದು ಕಲ್ಲಂಗಡಿ ಹಣ್ಣಿನ ವ್ಯಾಪಾರಿ ಮೈನು ಆಲೂರ ತಿಳಿಸಿದರು.
ಬಾಯಾರಿಕೆ ನೀಗುತ್ತಿಲ್ಲ: ಬಿಸಿಲಿನ ಝಳಕ್ಕೆ ಫ್ರೀಡ್ಜ್‌ನಲ್ಲಿನ ನೀರು ಎಷ್ಟೇ ಕುಡಿದರೂ ಬಾಯಾರಿಕೆ ನೀಗುತ್ತಿಲ್ಲ. ಮಣ್ಣಿನ ಮಡಕೆಯಲ್ಲಿನ ನೀರು ನೈಸರ್ಗಿಕವಾಗಿ ತಂಪಾಗಿರುತ್ತದೆ. ಅಲ್ಲದೆ ಆರೋಗ್ಯಕ್ಕೂ ಒಳ್ಳೆಯದು. ಆದ್ದರಿಂದ ಮಣ್ಣಿನ ಮಡಕೆ ಖರೀದಿಸಲು ಬಂದಿದ್ದೇವೆ ಎಂದು ಗ್ರಾಹಕ ಫಕ್ಕೀರೇಶ ಕತ್ತಿ ತಿಳಿಸಿದರು.