ಅಧಿಕಾರಿಗಳ ನಿರ್ಲಕ್ಷ್ಯ : ಸ್ವಂತ ಹಣದಲ್ಲಿ ರಸ್ತೆ ಗುಂಡಿ ದುರಸ್ತಿಗೆ ಮುಂದಾದ ಜನತೆ

| Published : Oct 30 2024, 01:42 AM IST / Updated: Oct 30 2024, 07:58 AM IST

ಅಧಿಕಾರಿಗಳ ನಿರ್ಲಕ್ಷ್ಯ : ಸ್ವಂತ ಹಣದಲ್ಲಿ ರಸ್ತೆ ಗುಂಡಿ ದುರಸ್ತಿಗೆ ಮುಂದಾದ ಜನತೆ
Share this Article
  • FB
  • TW
  • Linkdin
  • Email

ಸಾರಾಂಶ

 ಗುಳೇದಗುಡ್ಡ ಪಟ್ಟಣದ ಪುರಸಭೆಗೆ ಹತ್ತಿರವಿರುವ ಅರಳಿಕಟ್ಟಿ ಹತ್ತಿರ  ಅಧಿಕಾರಿಗಳ ನಿರ್ಲಕ್ಷಕ್ಕೆ ಬೇಸತ್ತ ಅಕ್ಕಪಕ್ಕದ ಅಂಗಡಿಗಳ ಮಾಲೀಕರು, ಸಾರ್ವಜನಿಕರು ಸ್ವತಃ ಹಣ ಸಂಗ್ರಹಿಸಿ ಸೋಮವಾರ ತಾವೇ ದುರಸ್ತಿ ಮಾಡಿಸಿದ್ದಾರೆ.

  ಗುಳೇದಗುಡ್ಡ  : ಪಟ್ಟಣದ ಪುರಸಭೆಗೆ ಹತ್ತಿರವಿರುವ ಅರಳಿಕಟ್ಟಿ ಹತ್ತಿರ ಕಳೆದ ಹಲವಾರು ತಿಂಗಳುಗಳಿಂದ ರಸ್ತೆ ಮೇಲೆಯೇ ಗುಂಡಿ ನಿರ್ಮಾಣವಾಗಿ, ಅದರಲ್ಲಿ ನೀರು ಸಂಗ್ರಹಗೊಂಡು ಕೊಳಚೆ ಗುಂಡಿಯಾಗಿ ನಿರ್ಮಾಣವಾಗಿತ್ತು. ಅದರ ದುರಸ್ತಿಗೆ ಸಾರ್ವಜನಿಕರು ಸಾಕಷ್ಟು ಬಾರಿ ಪುರಸಭೆಗೆ ವಿನಂತಿಸಿಕೊಂಡರೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದರು. 

ಅಧಿಕಾರಿಗಳ ನಿರ್ಲಕ್ಷಕ್ಕೆ ಬೇಸತ್ತ ಅಕ್ಕಪಕ್ಕದ ಅಂಗಡಿಗಳ ಮಾಲೀಕರು, ಸಾರ್ವಜನಿಕರು ಸ್ವತಃ ಹಣ ಸಂಗ್ರಹಿಸಿ ಸೋಮವಾರ ತಾವೇ ದುರಸ್ತಿ ಮಾಡಿಸಿದ್ದಾರೆ.ಪುರಸಭೆಗೆ ಹತ್ತಿರವಿರುವ ಅರಳಿಕಟ್ಟಿ ಹತ್ತಿರ ಮೂರು ರಸ್ತೆಗಳು ಬಂದು ಸೇರುತ್ತವೆ. ಅಕ್ಕ ಪಕ್ಕದಲ್ಲಿ ಅಂಗಡಿಗಳು ಹೆಚ್ಚಾಗಿವೆ. ಸಾರ್ವಜನಿಕರು, ವಾಹನಗಳು ನಿರಂತರ ಚಲಿಸುವ ರಸ್ತೆ ಇದಾಗಿದ್ದರೂ, ರಸ್ತೆ ಮೇಲೆ ಗುಂಡಿ ನಿರ್ಮಾಣವಾಗಿ ಸಾಕಷ್ಟು ತಿಂಗಳುಗಳೇ ಕಳೆದಿದ್ದವು. ಈ ಗುಂಡಿ ಹತ್ತಿರವೇ ಪುರಸಭೆ ಸದಸ್ಯ ವಿನೋದ ಮದ್ದಾನಿ ಅಂಗಡಿಯೂ ಇದೆ. ದುರಸ್ತಿಗೆ ಸಾರ್ವಜನಿಕರು ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ.

ನಂತರ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಅವರೂ ಕ್ಯಾರೇ ಅನ್ನಲಿಲ್ಲ. ಗುಂಡಿಯಲ್ಲಿ ನಿಂತ ನೀರು ಮಲಿನವಾಗಿ ಕ್ರಿಮಿಕೀಟಗಳು ಹೆಚ್ಚಾಗಿ ರೋಗ ಹರಡುವ ಸ್ಥಳವಾಯಿತು. ಹಂದಿಗಳು ಅದೇ ಕೊಳಚೆ ನೀರಿನಲ್ಲಿ ಬಿದ್ದು ಹೊರಳಾಡುವ, ಗೊಬ್ಬು ವಾಸನೆ ಸ್ಥಳವಾಗಿಯೂ ಕಂಡು ಬಂದಿತು.

ಅಧಿಕಾರಿಗಳು ದುರಸ್ತಿಗೆ ಕ್ರಮ ಕೈಗೊಳ್ಳದ ಕಾರಣ ಸಾರ್ವಜನಿಕರು ಹಾಗೂ ಅಕ್ಕಪಕ್ಕದ ಅಂಗಡಿಗಳ ಮಾಲೀಕರೆ ಹಣ ಸಂಗ್ರಹಿಸಿ ದುರಸ್ತಿ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಹೆಚ್ಚು ಗಮನ ಹರಿಸಿದೆ.

ಪುರಸಭೆ ಮಾಡಬೇಕಾದ ಕೆಲಸವನ್ನು ಜನರೇ ಮಾಡಿ ಮುಗಿಸಿದ್ದಾರೆ. ಸಣ್ಣ ಪುಟ್ಟ ಸಾರ್ವಜನಿಕ ಕೆಲಸಗಳನ್ನ ಮಾಡದ ಆಡಳಿತ ಇನ್ನು ದೊಡ್ಡ ದೊಡ್ಡ ದುರಸ್ತಿ ಕಾರ್ಯಗಳನ್ನು ಹೇಗೆ ಮಾಡುತ್ತದೆ. ಪುರಸಭೆ ಇರುವುದಾದರೂವೆತ್ತಕ್ಕೆ ಎಂಬ ಪ್ರಶ್ನೆ ಮೂಡಿದೆ.

- ಅಶೋಕ ಹೆಗಡೆ, ಗುಳೇದಗುಡ್ಡ ನಿವಾಸಿ