ಸಾರಾಂಶ
ಧಾರವಾಡ: ರೈತರ ಜಾತ್ರೆ ಎಂದೇ ಕರೆಯುವ ಕೃಷಿ ಮೇಳದಲ್ಲಿ ಸಂಜೆ ಸುರಿದ ಏಕಾಏಕಿ ಮಳೆಯು ಕೃಷಿ ಮೇಳವನ್ನು ಅಲ್ಲೋಲ ಕಲ್ಲೋಲ ಮಾಡಿತು. ಉಕ್ಕೇರಿದ ಉತ್ಸಾಹದಿಂದ ಕೃಷಿ ಮೇಳದ ಸೊಬಗು ಸವಿಯಲು ರಾಜ್ಯದ ವಿವಿಧೆಡೆಯಿಂದ ಬಂದ ಜನಸಾಗರ ಅಡ್ಡ ಮಳೆಯಿಂದ ದಿಕ್ಕಾಪಾಲಾಗಿ ಓಡಿ ಹೋಯಿತು.
ಮೊದಲ ದಿನ ಶನಿವಾರ ಸಾಮಾನ್ಯ ಸಂಖ್ಯೆಯಲ್ಲಿದ್ದ ಜನರು ವಾರಾಂತ್ಯದ ದಿನ ಭಾನುವಾರ ಕಿಕ್ಕಿರಿದು ತುಂಬಿತ್ತು. ಅಂದಾಜು ಐದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ನಡೆದಾಡಲು ಅವಕಾಶವೇ ಇಲ್ಲದಂತಹ ಸ್ಥಿತಿ ಇತ್ತು. ಇಂತಹ ಸಮಯದಲ್ಲಿಯೇ ಸಂಜೆ 4ರಿಂದ 5ರ ವರೆಗೆ ಸುರಿದ ಧಾರಾಕಾರ ಮಳೆಗೆ ಕಾಲಿಗೆ ಬುದ್ಧಿ ಹೇಳಿ ಸಿಕ್ಕ ಸಿಕ್ಕ ಮಳಿಗೆಗಳಿಗೆ ನುಗ್ಗಿ ಮಳೆಯಿಂದ ರಕ್ಷಣೆ ಪಡೆದರು.ಮಧ್ಯಾಹ್ನ 2ರ ಸುಮಾರಿಗೆ ಮೋಡ ಮುಸುಕಿದ ವಾತಾರವಣ ಸೃಷ್ಟಿಯಾಗಿ ತುಂತುರು ಮಳೆಯಾಯಿತು. ಇನ್ನೇನು ಮಳೆ ಹೋಯಿತು ಎನ್ನುವರಷ್ಟರಲ್ಲಿ 4ರ ಸುಮಾರಿಗೆ ಧೋ ಎಂದು ಸುರಿದ ಮಳೆಗೆ ಮೇಳದಲ್ಲಿನ ಜನರು ಪರದಾಡಿದರು. ಕೃಷಿ, ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿಕೊಂಡು ವಿವಿಧ ಸ್ಟಾಲ್‌ಗಳನ್ನು ಸುತ್ತಾಡಿದ ಜನರು ಮಳೆ ಹನಿಯೊಡೆಯುತ್ತಿದ್ದಂತೆ ತಲೆಮೇಲೆ ಬುಟ್ಟಿ, ಚಾಪೆ, ಪ್ಲಾಸ್ಟಿಕ್ ಚೀಲ, ಕರಪತ್ರವನ್ನು ಹೊದ್ದುಕೊಂಡು ಓಡ ಹತ್ತಿದರು. ಇನ್ನೂ ಕೆಲವರು ಬಿರುಸಿನ ಮಳೆಯಲ್ಲಿ ಓಡಲಾರದೆ ಮಳೆಗೆ ಮೈವೊಡ್ಡಿ ನಿಂತರು.
ಕೃಷಿ ವಿವಿಯಲ್ಲಿರುವ ಗೋಡೌನ್‌ನಲ್ಲಿರುವ ಮಳಿಗೆಯಲ್ಲಿ ಕಿಕ್ಕಿರಿದು ತುಂಬಿದ ಜನರು ಸ್ಟಾಲ್‌ಗಳ ಒಳಗಡೆಯೇ ನುಸುಳಿದ್ದು ಮಳಿಗೆ ಹಾಕಿದ ವಿವಿಧ ಕಂಪನಿಯವರು ತೊಂದರೆಗೆ ಒಳಗಾದರು. ಮಳೆಗೆ ಕಕ್ಕಾಬಿಕ್ಕಿಯಾಗಿ ಓಡಿದ ಜನರು ಮಳೆ ನಿಂತ ಮೇಲೆ ತಮ್ಮ ಜತೆಗೆ ಬಂದವರಿಗಾಗಿ ಹುಡುಕಾಟ ನಡೆಸಿದ ಘಟನೆಯೂ ನಡೆಯಿತು. ಮೊಬೈಲ್ ನೆಟ್‌ವರ್ಕ್ ಇಲ್ಲದೇ ತಮ್ಮವರನ್ನು ಹುಡುಕಲು ಪರದಾಡಬೇಕಾಯಿತು. ಅಲ್ಲೆ ಇರುವ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ ಮೈಕಿನಲ್ಲಿ ತಮ್ಮವರಿಗಾಗಿ ಕೂಗಿದರು. ಸಂಚಾರ ದಟ್ಟನೆಯಿಂದಾಗಿ ಜನರು ಬಸ್ ಹಿಡಿಯಲು ಹರಸಾಹಸ ಪಡುವಂತಾಯಿತು.ವಿವಿಯ ಮಹಾದ್ವಾರದಿಂದ ಒಳಗೆ ಹೆಮ್ಮರಗಳು ಅಧಿಕವಾಗಿದ್ದು, ಸಂಜೆ ಮಳೆ ಕಡಿಮೆಯಾದರೂ ಸಹ ಮರದ ಹನಿಗಳಿಗೆ ಜನರು ತೊಯಿಸಿಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು. ಮಳೆ ಬರುತ್ತಿದ್ದಂತೆ ಜನರು ಓಡಾಡುತ್ತಿದ್ದರೆ ಸ್ಟಾಲ್‌ನಲ್ಲಿ ನಿಂತಿದ್ದ ಕೆಲವರು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು.
ಟ್ರಾಫಿಕ್ ಸಮಸ್ಯೆಐದು ಲಕ್ಷಕ್ಕೂ ಹೆಚ್ಚು ಜನರು ಭಾನುವಾರದ ಕೃಷಿ ಮೇಳದಲ್ಲಿ ಭಾಗವಹಿಸಿದ್ದು, ಜನರೊಂದಿಗೆ ವಾಹನಗಳ ಸಂಖ್ಯೆ, ಟ್ರಾಫಿಕ್ ಕಿರಿಕಿರಿ ಉಂಟಾಯಿತು. ಮೇಳಕ್ಕೆ ಬರುವ ಜನರಿಗಾಗಿ ವಿವಿ ಸುತ್ತಲೂ ಸಾಕಷ್ಟು ದೊಡ್ಡ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರೂ ಆ ಪ್ರದೇಶವೆಲ್ಲ ತುಂಬಿ ಹೋಗಿತ್ತು. ವಿವಿಗೆ ಬರುವ ಎರಡು ಬದಿಯ ರಸ್ತೆಯಲ್ಲೂ ವಾಹನ ನಿಂತಿದ್ದು ಒಂದೆಡೆ ನರೇಂದ್ರ ಕ್ರಾಸ್ ವರೆಗೆ, ಇನ್ನೊಂದೆಡೆ ಹೊಸ ಬಸ್ ನಿಲ್ದಾಣದ ವರೆಗೂ ಎರಡು ಬದಿಗೆ ವಾಹನಗಳು ಪಾರ್ಕಿಂಗ್ ಮಾಡುವ ಸ್ಥಿತಿ. ಅಷ್ಟೊಂದು ಸಂಖ್ಯೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದಿದ್ದು, ಟ್ರಾಫಿಕ್ ಪೊಲೀಸರಿಗೆ ವಾಹನ ನಿರ್ವಹಣೆ ಸಾಕು ಸಾಕಾಗಿ ಹೋಯಿತು.