ಸಾರಾಂಶ
ಶಾಲೆಯ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ
ಕನ್ನಡಪ್ರಭ ವಾರ್ತೆ ತ್ಯಾಗರ್ತಿಸರ್ಕಾರಿ ಶಾಲಾ ಮಕ್ಕಳಿಗೆ ಪೋಷಕರು ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಸಹಕಾರ ನೀಡಿದ್ದಲ್ಲಿ ಖಾಸಗಿ ಶಾಲಾ ಮಕ್ಕಳೊಂದಿಗೆ ಪೈಪೋಟಿ ನೀಡಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ದಿಶಾ ಸಮಿತಿಯ ಸದಸ್ಯ ಮಲ್ಲಿಕಾರ್ಜುನ್ ಹಕ್ರೆ ಹೇಳಿದರು.
ಸಾಗರ ತಾಲೂಕಿನ ತ್ಯಾಗರ್ತಿಯಲ್ಲಿ ಶನಿವಾರ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್, ತಾಲೂಕು ದಿಶಾ ಸಮಿತಿ ಹಾಗೂ ಟಿಎಸಿ ಸಮಿತಿ ನೇತೃತ್ವದಲ್ಲಿ ಸರ್ಕಾರಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ಬ್ಯಾಗ್ ವಿತರಿಸಿ ಮಾತನಾಡಿ, ಇಂದಿನ ಪೈಪೋಟಿ ಯುಗದಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆದ ಮಕ್ಕಳಿಗೆ ಬದುಕಲು ಸಾಕಷ್ಟು ಅವಕಾಶಗಳಿವೆ. ಸರ್ಕಾರಿ ಶಾಲೆಗಳು ಸರ್ಕಾರಿ ಕಚೇರಿಯಾಗಿ ಮಾರ್ಪಾಡಾಗದೆ ವಿದ್ಯಾಸಂಸ್ಥೆಯಾಗಿ ಶಿಕ್ಷಕರು ತಮ್ಮಲ್ಲಿರುವ ವಿದ್ಯೆಯನ್ನು ಮಕ್ಕಳಿಗೆ ದಾರೆ ಎರೆದು ಉತ್ತಮ ಪ್ರಜೆಯಾಗಿ ಮುಂದಿನ ಭವಿಷ್ಯಕ್ಕೆ ದಾರಿ ದೀಪವಾಗಬೇಕೆಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಜ್ಯ ದಿಶಾ ಸಮಿತಿಯ ಸದಸ್ಯರಾದ ಸುವರ್ಣ ಟೀಕಪ್ಪ ಮಾತನಾಡಿ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲೆಂದು ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಮಾಡುತ್ತಿದ್ದು, ನಮಗೆ ಪ್ರತಿಯೊಂದು ಶಾಲೆಗೂ ಭೇಟಿ ನೀಡಿ ಶಿಕ್ಷಕರನ್ನು ಪ್ರೋತ್ಸಾಹಿಸಿ ಮಕ್ಕಳನ್ನು ಉತ್ತೇಜಿಸಿ ಪೋಷಕರನ್ನು ಪ್ರೇರೇಪಿಸಿ ಮಕ್ಕಳ ಭವಿಷ್ಯ ರೂಪಿಸುವ ಉದ್ದೇಶವನ್ನು ಈಡೇರಿಸಬೇಕೆಂಬ ಸಂಸದರ ಆಶಯದಂತೆ ತಾಲೂಕಿನ ಪ್ರತಿ ಸರ್ಕಾರಿ ಶಾಲೆಯ ಒಂದರಿಂದ ಏಳನೇ ತರಗತಿ ಮಕ್ಕಳಿಗೆ ಉಚಿತ ಬ್ಯಾಗ ನೀಡುತ್ತಿದ್ದೇವೆ. ಪ್ರತಿಯೊಬ್ಬ ಮಗುವು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ದೇಶದ ಉತ್ತಮ ಪ್ರಜೆಯಾಗಿ ಸದೃಢ ರಾಷ್ಟ್ರ ನಿರ್ಮಿಸಲು ಸಹಕಾರಿಯಾಗಬೇಕೆಂದು ಹೇಳಿದರು.
ತ್ಯಾಗರ್ತಿ ಗ್ರಾಮ ಪಂಚಾಯಿತಿ ಸದಸ್ಯರಾದ ಇಸಾಕ್, ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಹಾಗೂ ಕೆಡಿಪಿ ಸದಸ್ಯರಾದ ಪ್ರಶಾಂತ್, ಎಸ್‍ಟಿಎಂಸಿ ಅಧ್ಯಕ್ಷರಾದ ಪ್ರಕಾಶ್, ಸದಸ್ಯರಾದ ಚಂದ್ರಶೇಖರ್, ಸಿಆರ್‍ಪಿ ಪ್ರವೀಣ್, ಮುಖ್ಯೋಪಾಧ್ಯಾಯ ತಿಮ್ಮಪ್ಪ ಇದ್ದರು.