ಸಾರಾಂಶ
ಕಾರವಾರ: ಜಿಲ್ಲೆಯಲ್ಲಿ ಗರ್ಭಿಣಿಯರ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡುವ ದೃಷ್ಟಿಯಿಂದ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರ ಆಲೋಚನೆಯಲ್ಲಿ ಮೂಡಿಬಂದ, ಅತ್ಯಂತ ಅಪರೂಪದ ಹಾಗೂ ವಿನೂತನ ಯೋಜನೆಯಾದ, ಗರ್ಭಿಣಿ ಮಹಿಳೆಯರ ಆರೋಗ್ಯದ ಕಾಳಜಿಯನ್ನು ದತ್ತು ನೀಡುವ ಯೋಜನೆಗೆ ಅಭೂತಪೂರ್ವ ಯಶಸ್ಸು ದೊರೆತಿದ್ದು, ಈ ಯೋಜನೆಯಡಿ ಗುರುತಿಸಲಾಗಿದ್ದ ಎಲ್ಲ ಮಹಿಳೆಯರಿಗೆ ಸುರಕ್ಷಿತವಾಗಿ ಹೆರಿಗೆ ಆಗಿದ್ದು, ಈ ಸಂದರ್ಭದಲ್ಲಿ ಯಾವುದೇ ತಾಯಿ ಮಗುವಿನ ಮರಣ ಸಂಭವಿಸಿಲ್ಲ.2023ರ ಸೆಪ್ಟೆಂಬರ್‌ನಲ್ಲಿ ಆರಂಭಿಸಿದ ಈ ಯೋಜನೆಯಡಿ ಆರೋಗ್ಯ ಇಲಾಖೆಯ ಆರ್‌ಸಿಎಚ್ ತಂತ್ರಾಂಶದಲ್ಲಿ ದಾಖಲಾದ 358 ಗರ್ಭಿಣಿಯರಿಗೆ, ಅವರಿಗೆ ದೊರೆಯಬೇಕಾದ ಆರೋಗ್ಯ ಸೇವೆಗಳನ್ನು ಸಕಾಲದಲ್ಲಿ ದೊರಕಿಸಲು ಮತ್ತು ಅವರು ಸುರಕ್ಷಿತವಾಗಿ, ಆರೋಗ್ಯವಂತ ಶಿಶುವಿಗೆ ಜನ್ಮ ನೀಡುವವರೆಗೆ ಅವರನ್ನು ನಿರಂತರ ಅನುಸರಣೆ ಮಾಡುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಜಿಲ್ಲೆಯ ಎಲ್ಲ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ, ಒಬ್ಬ ಮಹಿಳೆಯ ಯೋಗಕ್ಷೇಮದ ವಿಚಾರಣೆಯ ದತ್ತು ನೀಡಲಾಗಿತ್ತು.
ಈ ಯೋಜನೆಯಡಿ ಗುರುತಿಸಲಾಗಿದ್ದ ಮಹಿಳೆಯರಲ್ಲಿ 2024ರ ಮೇ ವೇಳೆಗೆ 345 ಮಹಿಳೆಯರಿಗೆ ಸುರಕ್ಷಿತವಾಗಿ ಹೆರಿಗೆ ಆಗಿದ್ದು, ತಾಯಿ ಮತ್ತು ಮಗು ಇಬ್ಬರೂ ಸಂಪೂರ್ಣ ಆರೋಗ್ಯವಾಗಿದ್ದಾರೆ. ವಿವಿಧ ಆರೋಗ್ಯ ಸಮಸ್ಯೆಗಳಿಂದ 13 ಮಹಿಳೆಯರಿಗೆ ಗರ್ಭಪಾತವಾಗಿದೆ. ಸುರಕ್ಷಿತ ಹೆರಿಗೆಯಾಗಿರುವ ಮಹಿಳೆಯರಲ್ಲಿ 121 ಮಂದಿಗೆ ಸಿ ಸೆಕ್ಷನ್ ಹೆರಿಗೆಯಾಗಿದ್ದರೆ, 224 ಮಂದಿಗೆ ಸಾಮಾನ್ಯ ಹೆರಿಗೆಯಾಗಿರುವುದು ಗಮನಾರ್ಹವಾಗಿದೆ.ದತ್ತು ನೀಡಿದ ಸಂಬಂಧಪಟ್ಟ ಅಧಿಕಾರಿಗಳು, ತಮಗೆ ದತ್ತು ವಹಿಸಲಾದ ಗರ್ಭಿಣಿಯರಿಗೆ ವಿವಿಧ ಆರೋಗ್ಯ ಸೇವೆಗಳನ್ನು ಸಕಾಲದಲ್ಲಿ ಪಡೆದಿದ್ದಾರೆಯೇ ಎಂದು ನಿಯಮಿತವಾಗಿ ದೂರವಾಣಿ ಮುಖಾಂತರ ಸಂಪರ್ಕಿಸಿ ಖಚಿತಪಡಿಸಿಕೊಳ್ಳುತ್ತಿದ್ದು ಹಾಗೂ ಆರೋಗ್ಯ ಸೇವೆಗಳನ್ನು ಪಡೆಯದೇ ಇದ್ದಲ್ಲಿ ಸಂಬಂಧಿಸಿದ ನೋಡೆಲ್ ಅಧಿಕಾರಿಗಳನ್ನು ಅಥವಾ ತಾಲೂಕು ವೈದ್ಯಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಸಕಾಲದಲ್ಲಿ ಸೇವೆಗಳು ದೊರಕುವಂತೆ ಮಾಡುವ ಮೂಲಕ ಯೋಜನೆ ಸಂಪೂರ್ಣ ಯಶಸ್ವಿಯಾಗುವಂತೆ ಮಾಡಿದ್ದಾರೆ.
ಗರ್ಭಿಣಿ ವಾಸವಾಗಿದ್ದ ಪ್ರದೇಶದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಕೂಡಾ ಗರ್ಭಿಣಿಯರ ಕುರಿತು ವಿಶೇಷ ಕಾಳಜಿ ವಹಿಸಿದ್ದು, ಅವರಿಗೆ ನಿಯಮಿತ ತಪಾಸಣೆ, ಆರೋಗ್ಯ ಸಂಬಂದಿತ ಸಲಹೆ ಸೂಚನೆಗಳನ್ನು ನೀಡಿ ಅವುಗಳನ್ನು ಪಾಲನೆ ಕುರಿತಂತೆ ನಿಗಾ ಇರಿಸಿದ್ದರು.ಈ ಯೋಜನೆಗಾಗಿ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ 79, ಅಂಕೋಲಾ 24, ಕುಮಟಾ 30, ಹೊನ್ನಾವರ 42), ಭಟ್ಕಳ 21, ಶಿರಸಿ 40, ಸಿದ್ದಾಪುರ 25, ಯಲ್ಲಾಪುರ 20, ಹಳಿಯಾಳ 43, ಮುಂಡಗೋಡ 16, ಜೋಯಿಡಾ ತಾಲೂಕಿನಲ್ಲಿ 18 ಸೇರಿದಂತೆ ಒಟ್ಟು 358 ಗರ್ಭಿಣಿಯರನ್ನು ಗುರುತಿಸಿ, ಅವರ ಯೋಗಕ್ಷೇಮ ವಿಚಾರಣೆಯ ಜವಾಬ್ದಾರಿಯ ಕಾರ್ಯವನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ದತ್ತು ನೀಡಲಾಗಿತ್ತು.
ಆರೋಗ್ಯವಾಗಿದ್ದೇವೆ: ಜಿಲ್ಲಾಧಿಕಾರಿ ನನಗೆ ಪ್ರತಿ ತಿಂಗಳು ಕರೆ ಮಾಡುತ್ತಿದ್ದರು. ಏನಾದರೂ ಸಮಸ್ಯೆ ಇದೆಯೇ ಎಂದು ಸಂಪೂರ್ಣವಾಗಿ ನನ್ನ ಆರೋಗ್ಯದ ಕಾಳಜಿ ವಿಚಾರಿಸುತ್ತಿದ್ದರು. ಪ್ರಸ್ತುತ ನನಗೆ ಹೆರಿಗೆಯಾಗಿದ್ದು ನಾನು ಮತ್ತು ಮಗು ಆರೋಗ್ಯವಾಗಿದ್ದೇವೆ ಎಂದು (ಜಿಲ್ಲಾಧಿಕಾರಿ ದತ್ತು ಪಡೆದ ಮಹಿಳೆಯಾದ ಮಲ್ಲಾಪುರದ ಕೋಮಲ್ ತಿಳಿಸಿದರು.ಈ ಕುರಿತು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಪ್ರತಿಕ್ರಿಯಿಸಿ ಈ ಯೋಜನೆ ಸಂಪೂರ್ಣ ಯಶಸ್ವಿಯಾಗಿದೆ. ಯೋಜನೆಯನ್ನು ಮುಂದುವರಿಸುತ್ತೇವೆ ಎಂದರು.