ಕುಡಿಯುವ ನೀರಿಗೆ ಶಾಶ್ವತ ವ್ಯವಸ್ಥೆ: ಶಾಸಕ ಷಡಕ್ಷರಿ

| Published : Jan 14 2025, 01:00 AM IST

ಸಾರಾಂಶ

ನಗರದ ಜನತೆಗೆ ಯಾವುದೇ ಕೊರತೆಯಾಗದಂತೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ರೂಪಿಸುತ್ತಿದ್ದು ಇದಕ್ಕೆ ಎಷ್ಟೇ ವಿರೋಧ ಬಂದರೂ ನಾನು ಲೆಕ್ಕಿಸದೆ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸಲು ಬದ್ದನಾಗಿದ್ದು ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ನಗರದ ಜನತೆಗೆ ಯಾವುದೇ ಕೊರತೆಯಾಗದಂತೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ರೂಪಿಸುತ್ತಿದ್ದು ಇದಕ್ಕೆ ಎಷ್ಟೇ ವಿರೋಧ ಬಂದರೂ ನಾನು ಲೆಕ್ಕಿಸದೆ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸಲು ಬದ್ದನಾಗಿದ್ದು ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು. ನಗರದ ತಮ್ಮ ಕಚೇಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದಲ್ಲಿ ಒಂದು ಲಕ್ಷಕ್ಕೂ ಜನಸಂಖ್ಯೆ ಮೀರುತ್ತಿದ್ದು ಜನಸಂಖ್ಯೆ ಹೆಚ್ಚಾದಂತೆಲ್ಲಾ ನೀರಿನ ಬಳಕೆ ಮತ್ತು ಅವಶ್ಯಕತೆ ಹೆಚ್ಚಾಗುತ್ತದೆ. ಅದಕ್ಕೆ ತಕ್ಕಂತೆ ಭವಿಷ್ಯದ ಅವಶ್ಯಕತೆಗಳನ್ನೂ ದೃಷ್ಠಿಯಲ್ಲಿಟ್ಟುಕೊಂಡು ಯೋಜನೆಯನ್ನು ರೂಪಿಸಬೇಕಿದೆ. ಮುಂದೆ ನೀರಿನ ಅವಶ್ಯಕತೆ ಹೆಚ್ಚಾಗಲಿರುವುದರಿಂದ ಈಚನೂರು ಕೆರೆಗೆ ಪರ್ಯಾಯವಾಗಿ ಬೇರೆ ಮೂಲಗಳಿಂದಲೂ ತಿಪಟೂರು ನಗರಕ್ಕೆ ಕುಡಿಯುವ ನೀರು ಒದಗಿಸಲು ಸಮೀಕ್ಷೆ ಮಾಡಲಾಗಿದೆ. ಅದರ ನೀಲನಕ್ಷೆಯನ್ನೂ ತಯಾರಿಸಲಾಗಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಸಚಿವರ ಜೊತೆಯಲ್ಲಿಯೂ ಚರ್ಚಿಸಲಾಗಿದೆ. ನೂತನ ಕುಡಿಯುವ ನೀರಿಗೆ ಯೋಜನೆ ರೂಪಿಸಲು ನಗರಸಭೆಯಿಂದಲೂ ಅನುಮತಿ ಪಡೆಯಲಾಗಿದೆ ಎಂದರು. ಸದ್ಯಕ್ಕೆ ನಗರದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲು ಬೋರ್‌ವೆಲ್‌ಗಳಿಂದ ಈಗಾಗಲೇ ನಗರಕ್ಕೆ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಇನ್ನೂ ಹೆಚ್ಚುವರಿಯಾಗಿ ಬೋರ್‌ವೆಲ್‌ಗಳನ್ನು ಕೊರೆಸಲಾಗುವುದು. ಹೊಸದಾಗಿ ಪೈಪ್‌ಲೈನ್‌ಗಳನ್ನು ಅಳವಡಿಸಲಾಗುತ್ತಿದೆ. ಅವಶ್ಯ ಇರುವ ಕಡೆ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತದೆ. ಇದಕ್ಕಾಗಿ ಬೇಕಾಗುವ ಹೆಚ್ಚುವರಿ ನೀರನ್ನು ಮಂಜೂರು ಮಾಡಿಸುತ್ತೇನೆ ಎಂದರು. ನಗರದಲ್ಲಿ ಯುಜಿಡಿ ಸಮಸ್ಯೆ ಇಂದು ನೆನ್ನೆಯದಲ್ಲ ಕಳೆದ ಹಲವು ವರ್ಷಗಳಿಂದಲೂ ಇದೆ. ಈ ವರ್ಷ ಮಳೆ ಹೆಚ್ಚಾದ್ದರಿಂದ ಕೊಳಚೆ ಜೊತೆ ನೀರಿನ ಹರಿವೂ ಸೇರಿಕೊಂಡು ಕಲುಷಿತ ನೀರು ಮಿಶ್ರಣವಾಗಿದೆ. ಆದರೂ ಜನತೆಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸಧ್ಯಕ್ಕೆ ಈಚನೂರು ಕೆರೆಯ ನೀರನ್ನು ನಗರದ ಜನತೆಗೆ ಕುಡಿಯುವ ನೀರು ಪೂರೈಸಲು ಬಳಸಿಕೊಳ್ಳಲಾಗುತ್ತಿಲ್ಲ ಎಂದು ತಿಳಿಸಿದರು. ಕೋಟ್‌...

ಹಿಂದಿನ ಅವಧಿಯಲ್ಲಿ ನಾನು ಶಾಸಕನಾಗಿದ್ದಾಗ ತಾಲೂಕಿನ ನೊಣವಿನಕೆರೆಯಿಂದ ನಗರಕ್ಕೆ ಕುಡಿಯುವ ನೀರನ್ನು ತರುವ 128 ಕೋಟಿ ರು.ಗಳ ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿ ನೊಣವಿನಕೆರೆಗೆ ಹೆಚ್ಚುವರಿ 0.3 ಟಿಎಂಸಿ ನೀರನ್ನೂ ನಿಗದಿ ಮಾಡಿಸಿದ್ದೆ. ಆದರೆ ಕೆಲವರು ಅಭಿವೃದ್ಧಿಗೂ ರಾಜಕಾರಣ ಮಾಡಿದ್ದರಿಂದ ತೀವ್ರ ವಿರೋಧ ವ್ಯಕ್ತವಾಗಿ ಕೋರ್ಟಿಗೂ ಹೋದರು. ಈಗ ಕೇಸ್ ವಜಾ ಆಗಿದೆ. ನಗರದ ಕುಡಿಯುವ ನೀರಿಗೆ ಎಲ್ಲಿಂದ ನೀರು ತರಬೇಕೆಂಬುದನ್ನು ಅಧಿಕಾರಿಗಳ ತಾಂತ್ರಿಕ ವರದಿಗಳನ್ನು ಆಧರಿಸಿ ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳಲಿದೆ. - ಕೆ.ಷಡಕ್ಷರಿ, ಶಾಸಕರು, ತಿಪಟೂರು

ಫೋಟೋ 13-ಟಿಪಿಟಿ2ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಕೆ. ಷಡಕ್ಷರಿ.