ಸಾರಾಂಶ
- ಅನುಮತಿ ಕೊಟ್ಟು ಅಪಾಯ ಆಹ್ವಾನಿಸಲು ಸಾಧ್ಯವಿಲ್ಲ: ಹೈಕೋರ್ಟ್
- ಕೆಆರ್‌ಎಸ್ ಜಲಾಶಯದ ಸುರಕ್ಷತೆ ಅತ್ಯಂತ ಸೂಕ್ಷ್ಮ ವಿಷಯಕನ್ನಡಪ್ರಭ ವಾರ್ತೆ ಮಂಡ್ಯಕೃಷ್ಣರಾಜಸಾಗರ ಜಲಾಶಯದ ಬಳಿ ಪ್ರಾಯೋಗಿಕ ಸ್ಫೋಟಕ್ಕೆ ಅನುಮತಿ ನೀಡಿ ಅಪಾಯವನ್ನು ಆಹ್ವಾನಿಸುವುದಕ್ಕೆ ಸಾಧ್ಯವಿಲ್ಲ. ಈ ವಿಚಾರವಾಗಿ ಅನುಮತಿ ನೀಡಲಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಾಧೀಶ ಪ್ರಸನ್ನ ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠ ಕೆಆರ್‌ಎಸ್ ಬಳಿ ಕಲ್ಲು ಗಣಿಗಾರಿಕೆ ಸಂಬಂಧಿಸಿದಂತೆ ಅನುಮತಿ ಕೋರಿದ್ದ ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ಈ ನಿಲುವನ್ನು ವ್ಯಕ್ತಪಡಿಸಿದೆ.ಕೆಆರ್‌ಎಸ್ ಪ್ರಮುಖ ಜಲಾಶಯವಾಗಿದ್ದು, ಅದರ ಸುರಕ್ಷತೆ ಸೂಕ್ಷ್ಮ ವಿಷಯವೂ ಆಗಿದೆ. ಅಣೆಕಟ್ಟು ಸುರಕ್ಷತಾ ಕಾಯ್ದೆಯನ್ನು ಪರಿಗಣಿಸಬೇಕಾದ ಅಗತ್ಯವಿದೆ. ಎಲ್ಲ ಅಂಶಗಳನ್ನು ಪರಿಗಣಿಸದೆ ಏಕಾಏಕಿ ಪ್ರಾಯೋಗಿಕ ಸ್ಫೋಟಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ಅಪಾಯವನ್ನು ಆಹ್ವಾನ ಮಾಡಿಕೊಳ್ಳುವುದೂ ಇಲ್ಲ ಎಂದು ಹೇಳಿದೆ.
ಕೃಷ್ಣರಾಜಸಾಗರದ ಸುರಕ್ಷತೆಯನ್ನು ಅತ್ಯಂತ ಗಂಭೀರ ವಿಷಯ. ಯಾವುದೇ ಕಾರಣಕ್ಕೂ ಅದನ್ನು ನಿರ್ಲಕ್ಷಿಸಲಾಗುವುದಿಲ್ಲ. ಪ್ರಾಯೋಗಿಕ ಸ್ಫೋಟದಂತಹ ಸಣ್ಣ ಲೋಪ ದೊಡ್ಡ ಅಪಾಯಕ್ಕೂ ಕಾರಣವಾಗಬಹುದು ಎಂದೂ ಉಚ್ಛ ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ.ಪರೀಕ್ಷಾರ್ಥ ಸ್ಫೋಟಕ್ಕೆ ಮನವಿ:
ಕಲ್ಲು ಗಣಿಗಾರಿಕೆ ನಡೆಸಲು ಪಾಂಡವಪುರ ತಾಲೂಕಿನ ಹೊಂಗನಹಳ್ಳಿ ವ್ಯಾಪ್ತಿಯಲ್ಲಿನ ೧೨೦ ಎಕರೆ ಭೂಪರಿವರ್ತನೆಗೆ ೨೦೨೩ರ ಮೇ ೧೫ರಂದು ಪರವಾನಗಿ ನೀಡಿದ್ದರು. ಆದರೆ, ಕಾವೇರಿ ನೀರಾವರಿ ನಿಗಮವು ಪರೀಕ್ಷಾರ್ಥ ಸ್ಫೋಟ ನಡೆಸಿದ ಬಳಿಕ ಭೂ ಪರಿವರ್ತನೆ ಆದೇಶ ಚಾಲ್ತಿಗೆ ಬರಲಿದೆ ಎಂಬ ಷರತ್ತು ವಿಧಿಸಿದ್ದರು. ಈ ಷರತ್ತನ್ನು ಪ್ರಶ್ನಿಸಿ ಸಿ.ಜಿ.ಕುಮಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಕೆಆರ್‌ಎಸ್ ಜಲಾಶಯಕ್ಕೆ ಗಣಿಗಾರಿಕೆಯಿಂದ ಅಪಾಯವಿದೆ ಎಂಬ ವಿಷಯ ನ್ಯಾಯಾಲಯದ ಗಮನಕ್ಕೆ ಬಂದಿದ್ದು, ಕಲ್ಲುಗಣಿಗಾರಿಕೆ ಭಾಗವಾಗಿ ನಡೆಸುವ ಸ್ಫೋಟ ಜಲಾಶಯಕ್ಕೆ ಹಾನಿ ಮಾಡುತ್ತದೆಯೇ ಎನ್ನುವುದನ್ನು ಪರಿಶೀಲಿಸಬೇಕಿದೆ ಎಂಬುದಾಗಿ ತಿಳಿಸಿತ್ತು. ಆ ಸಂಬಂಧ ಪರೀಕ್ಷಾರ್ಥ ಸ್ಫೋಟ ನಡೆಸುವುದಕ್ಕೆ ಅನುಮತಿ ನ್ಯಾಯಾಲಯದ ಕೋರಿದಾಗ ಅದನ್ನು ನ್ಯಾಯಮೂರ್ತಿಗಳು ನಿರಾಕರಿಸಿದ್ದಾರೆ.
ಗಣಿ ಸ್ಫೋಟ ಅನುಮತಿಗೆ ಹಿಂದೇಟು:೨೦೧೮ರ ಸೆ.೨೫ರಂದು ಬೇಬಿ ಬೆಟ್ಟದಲ್ಲಿ ೬ ಸೆಕೆಂಡ್‌ಗಳ ಅಂತರದಲ್ಲಿ ಸಂಭವಿಸಿದ ಎರಡು ಸ್ಫೋಟಗಳಿಂದ ಉಂಟಾದ ಕಂಪನದ ಅಲೆಗಳು ಸಾಗಿರುವುದನ್ನು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸ್ಯಾಟಲೈಟ್ ಫೋಟೋ ಸಹಿತ ವರದಿ ನೀಡಿದೆ. ಇದು ಬೇಬಿ ಬೆಟ್ಟದಲ್ಲಿ ಗಣಿ ಸ್ಫೋಟಕ್ಕೆ ಅನುಮತಿ ನೀಡಿದಲ್ಲಿ ಅಣೆಕಟ್ಟೆಯ ಸುರಕ್ಷತೆಗೆ ಎದುರಾಗುವ ಅಪಾಯಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಈ ವರದಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಗಣಿಗಾರಿಕೆಗೆ ಭೂ ಪರಿವರ್ತಿಸಲು ಮತ್ತು ಸ್ಫೋಟಕ್ಕೆ ಅನುಮತಿ ನೀಡುವುದಕ್ಕೆ ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ. ಇದನ್ನು ಹೈಕೋರ್ಟ್ ಕೂಡ ಗಂಭೀರವಾಗಿ ಪರಿಗಣಿಸಿದಂತೆ ಕಂಡುಬರುತ್ತಿದೆ.
ವರದಿಯ ಗೌಪ್ಯತೆ:ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೇಬಿ ಬೆಟ್ಟದ ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯವಿರುವ ಸಾಧ್ಯತೆಗಳಿರುವ ಕುರಿತು ನೀಡಿರುವ ವರದಿಯ ಗೌಪ್ಯತೆ ಕಾಪಾಡಲಾಗುತ್ತಿದೆ. ಅದೇ ವರದಿಯನ್ನು ಮುಂದಿಟ್ಟುಕೊಂಡು ಗಣಿಗಾರಿಕೆಗೆ ಅನುಮತಿ ನಿರಾಕರಿಸುವುದಕ್ಕೆ ಜಿಲ್ಲಾಡಳಿತ ಸೇರಿದಂತೆ ಸರ್ಕಾರವೂ ಮುಂದಾಗುತ್ತಿಲ್ಲ. ಇದರ ಪರಿಣಾಮ ಗಣಿ ಮಾಲೀಕರು, ಜಿಲ್ಲಾಡಳಿತದ ನಡುವಿನ ಹಗ್ಗ-ಜಗ್ಗಾಟ ಮುಂದುವರೆದಿದೆ. ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯನ್ನು ಸಾರ್ವಜನಿಕಗೊಳಿಸುವುದಕ್ಕೂ ಜಿಲ್ಲಾಡಳಿತ ಹಿಂದೇಟು ಹಾಕುತ್ತಿರುವುದು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ.
------------------------------ಎರಡು ಬಾರಿ ಪರೀಕ್ಷಾರ್ಥ ಸ್ಫೋಟ ರದ್ದು
೨೦೧೮ರ ಸೆ.೨೫ರಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೇಬಿ ಬೆಟ್ಟದ ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯಗಳಿರುವ ಸಾಧ್ಯತೆ ಕುರಿತು ವರದಿ ನೀಡಿದ ನಂತರ ೨೯ ಜನವರಿ ೨೦೧೯ರಂದು ಸೆಂಟ್ರಲ್ ವಾಟರ್ ಅಂಡ್ ಪವರ್ ರೀಸರ್ಚ್ ಸ್ಟೆಷನ್ ಪುಣೆ ವಿಜ್ಞಾನಿಗಳ ತಂಡ ಪ್ರಾಯೋಗಿಕ ಸ್ಫೋಟ ಪರೀಕ್ಷೆಗೆ ಆಗಮಿಸಿತ್ತು. ಪ್ರಯೋಗಾತ್ಮಕ ಪರೀಕ್ಷೆಗೆ ಆಗಮಿಸಿದ್ದ ಹುಲಿಕೆರೆ ಬಳಿ ಇರುವ ಹೆರಿಟೇಜ್ ಶೆಲ್ಟರ್ ಹೋಟೆಲ್‌ನಲ್ಲಿ ತಂಗಿದ್ದರು. ಕೆಆರ್‌ಎಸ್ ಉಳಿಸಿ ಜನಾಂದೋಲನ ಸಮಿತಿಯವರ ತೀವ್ರ ವಿರೋಧದಿಂದ ಸೆಂಟ್ರಲ್ ವಾಟರ್ ಅಂಡ್ ಪವರ್ ರೀಸರ್ಚ್ ಸ್ಟೆಷನ್ ವಿಜ್ಞಾನಿಗಳಾದ ಎ.ಕೆ ಘೋಷ್, ವಿಜಯಘೋಡ್ಕೆ, ರಿಸರ್ಚ್ ಅಸಿಸ್ಟೆಂಟ್ ರಾಜೇಂದ್ರ ಗುರ್ಜಾರ್, ಲ್ಯಾಬ್ ಟೆಕ್ನಿಷಿಯನ್ ನಿಖಿಲ್ ತರಾಡೆ ಹೋಟೆಲ್ ಬಿಟ್ಟು ಹೊರ ಬರಲಿಲ್ಲ. ಪರೀಕ್ಷೆ ನಡೆಸದೆ ವಾಪಸಾಗಿದ್ದರು.ಮತ್ತೆ ೨೦೨೨ರ ಜುಲೈ ೨೫ ರಿಂದ ೩೧ರವರೆಗೆ ಬೇಬಿ ಬೆಟ್ಟದಲ್ಲಿ ಪ್ರಾಯೋಗಿಕ ಸ್ಫೋಟ ನಡೆಸಲು ರಾಜ್ಯಸರ್ಕಾರ ನಿರ್ಧರಿಸಿತ್ತು. ಇದಕ್ಕಾಗಿ ಕೆಆರ್‌ಎಸ್ ಜಲಾಶಯಕ್ಕೆ ಜಾರ್ಖಂಡ್‌ನ ಧನಬಾದ್‌ನಿಂದ ವಿಶೇಷ ತಂಡವೊಂದು ಆಗಮಿಸಿತ್ತು. ಅದೂ ಕೂಡ ಯಶಸ್ವಿಯಾಗಿ ನಡೆದಿರಲಿಲ್ಲ.