ರಾಜ್ಯದಲ್ಲಿ ಐವರು ಕೇಂದ್ರ ಸಚಿವರಿದ್ದಾರೆ. ೧೯ ಮಂದಿ ಬಿಜೆಪಿ ಶಾಸಕರಗಿದ್ದಾರೆ. ಕೇಂದ್ರದಿಂದ ಬರುವಂತಹ ಯೋಜನೆಗಳು, ಅನುದಾನ ಕಡಿತವಾಗಿದೆ. ಆದರೂ ಅವರ್ಯಾರೂ ಪ್ರಶ್ನೆ ಮಾಡುತ್ತಿಲ್ಲ. ಬಿಜೆಪಿಯವರಿಗೆ ನಾಚಿಕೆಯಾಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಅಧಿಕಾರಕ್ಕೆ ಬಂದು ಕೇವಲ ೫ ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಅನುಮೋದನೆ ಕೊಡಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದರು. ಆದರೆ, ಇದುವರೆವಿಗೂ ಏನೂ ಆಗಲಿಲ್ಲ. ಸುಪ್ರೀಂ ಕೋರ್ಟ್‌ ಆದೇಶ ನೀಡಬೇಕಾಯಿತು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಐವರು ಕೇಂದ್ರ ಸಚಿವರಿದ್ದಾರೆ. ೧೯ ಮಂದಿ ಬಿಜೆಪಿ ಶಾಸಕರಗಿದ್ದಾರೆ. ಕೇಂದ್ರದಿಂದ ಬರುವಂತಹ ಯೋಜನೆಗಳು, ಅನುದಾನ ಕಡಿತವಾಗಿದೆ. ಆದರೂ ಅವರ್ಯಾರೂ ಪ್ರಶ್ನೆ ಮಾಡುತ್ತಿಲ್ಲ. ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

ಮನ್‌ಮೋಹನ್‌ಸಿಂಗ್ ಪ್ರಧಾನಿಯಾಗಿದ್ದಾಗ ೫೦ ಸಾವಿರ ಕೋಟಿ ರು. ಸಾಲ ಮಾಡಿದ್ದರು. ಆದರೆ, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದ ಸಾಲ ೨.೫೦ ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ಈ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದು ದೂರಿದರು.

ಶೀಘ್ರ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಮಾರುಕಟ್ಟೆ:

ಶಾಸಕ ಪಿ.ರವಿಕುಮಾರ್ ಮಾತನಾಡಿ, ಸ್ತ್ರೀಶಕ್ತಿ ಸಂಘಗಳು ತಯಾರಿಸುವ ಉತ್ಪನ್ನಗಳನ್ನು ಮಾರಾಟ ಮಾಡಲು ಮಂಡ್ಯದ ಗಾಂಧಿನಗರ ನಾಲ್ಕನೇ ಕ್ರಾಸ್‌ನಲ್ಲಿ ೧೦೦*೧೦೦ ಅಳತೆಯ ನಿವೇಶನ ನೀಡಿ ಶೀಘ್ರ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯದ ಜನರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಸೌಲಭ್ಯಗಳು ಸಿಗುತ್ತಿವೆ. ಆದರೆ, ಈ ಬಗ್ಗೆ ಯಾರೂ ಮಾತನಾಡುವುದಿಲ್ಲ. ಎರಡು ಸಾವಿರ ರು. ಕೊಟ್ಟಿಲ್ಲ, ಒಂದೆರಡು ತಿಂಗಳು ತಡವಾಗಿದೆ ಎಂದರೆ ಬಿಜೆಪಿಯವರು ದೊಡ್ಡದಾಗಿ ಬಾಯಿ ತೆಗೆಯುತ್ತಾರೆ. ಅವರು ಏನು ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ, ನಾವು ಕೊಡುವ ೨ ಸಾವಿರ ರು. ಹಣವನ್ನು ಕೊಟ್ಟಿದ್ದಾರೋ ಇಲ್ಲವೋ ಎಂಬುದನ್ನು ಮಾತ್ರ ಸರಿಯಾಗಿ ಲೆಕ್ಕ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ನಾವು ಬಡಪರ ಪರವಾಗಿ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ, ಜೆಡಿಎಸ್‌ನವರು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು. ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಮಂಗ ಮಾಡುತ್ತಿದ್ದಾರೆ. ನಾವು ಜನರನ್ನು ಸ್ವಾವಲಂಬಿಯನ್ನಾಗಿಸುವ ಕೆಲಸ ಮಾಡುತ್ತಿದ್ದೇವೆ. ಜೊತೆಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಈ ಭಾಗದಲ್ಲಿರುವ ಕಾಲುವೆಗಳ ಅಭಿವೃದ್ಧಿ ಮಾಡಿ ರೈತರ ಹೊಲ-ಗದ್ದೆಗಳಿಗೆ ಸರಾಗವಾಗಿ ನೀರು ಹರಿಯುವಂತೆ ಮಾಡುತ್ತಿದ್ದೇವೆ ಎಂದು ಹೇಳಿದರು.