ಅನುಮತಿ ಬೀದರ್‌ನಲ್ಲಿ, ಶಾಲೆ ಔರಾದ್‌ನಲ್ಲಿ!

| Published : Jul 07 2025, 11:48 PM IST

ಸಾರಾಂಶ

ಬೀದರ್‌ ತಾಲೂಕಿನ ಜನವಾಡ ಗ್ರಾಮದಲ್ಲಿ ಅನುಮತಿ ಪಡೆದ ಶಾಲೆಯಲ್ಲಿ ಮಕ್ಕಳ ದಾಖಲಾತಿ ಮಾಡಿ ಅನಧಿಕೃತವಾಗಿ ಶಾಲೆಯೊಂದನ್ನು ಸ್ಥಾಪಿಸಿ ಶಾಲಾವಧಿಯಲ್ಲಿ ಮಕ್ಕಳನ್ನು ಇಟ್ಟುಕೊಂಡು ಪಾಠ ಮಾಡ್ತಿದ್ದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಅಕ್ರಮ ಎಸಗಿದೆ ಎಂದು ಹೇಳಲಾಗಿದೆ.

ಕನ್ನಡಪ್ರಭ ವಾರ್ತೆ ಔರಾದ್‌

ಬೀದರ್‌ ತಾಲೂಕಿನ ಜನವಾಡ ಗ್ರಾಮದಲ್ಲಿ ಅನುಮತಿ ಪಡೆದ ಶಾಲೆಯಲ್ಲಿ ಮಕ್ಕಳ ದಾಖಲಾತಿ ಮಾಡಿ ಅನಧಿಕೃತವಾಗಿ ಶಾಲೆಯೊಂದನ್ನು ಸ್ಥಾಪಿಸಿ ಶಾಲಾವಧಿಯಲ್ಲಿ ಮಕ್ಕಳನ್ನು ಇಟ್ಟುಕೊಂಡು ಪಾಠ ಮಾಡ್ತಿದ್ದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಅಕ್ರಮ ಎಸಗಿದೆ ಎಂದು ಹೇಳಲಾಗಿದೆ.

ಪಟ್ಟಣದ ಹೊರ ವಲಯದ ಗಣೇಶಪೂರ್‌ ರಸ್ತೆಯಲ್ಲಿ ತಗಡಿನ ಶೆಡ್‌ ಹಾಕಿ ಶಾಲೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಉತ್ತಮ ಶಿಕ್ಷಣ ಸಂಸ್ಥೆಯ ಖ್ಯಾತಿ ಪಡೆದ ಗುರುನಾನಕ ಪಬ್ಲಿಕ್‌ ಶಾಲೆಯ ಹೆಸರಿನಲ್ಲಿ ಅನಧಿಕೃತವಾಗಿ ಕಳೆದ ಮೂರು ವರ್ಷಗಳಿಂದ ಶಾಲೆ ನಡೆಯುತ್ತಿದ್ದು ಶಾಲೆಯಲ್ಲಿ ದಾಖಲಾಗುವ ವಿದ್ಯಾರ್ಥಿಗಳನ್ನು ಬೀದರ್‌ ತಾಲೂಕಿನ ಜನವಾಡ ಗ್ರಾಮದ ಬಳಿ ಇರುವ ಗುರುನಾನಕ ಪಬ್ಲಿಕ್‌ ಶಾಲೆಯಲ್ಲಿ ದಾಖಲಾತಿ ಮಾಡಿ ಪಟ್ಟಣದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡ್ತಿರುವ ಅಕ್ರಮ ನಡೆಯುತ್ತಿದೆ ಎಂಬುವದು ಇದೀಗ ಬೆಳಕಿಗೆ ಬಂದಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪೂರ್ವ ಪ್ರಾಥಮಿಕ ಶಾಲೆ (ಎಲ್‌ಕೆಜಿ ಮತ್ತು ಯುಕೆಜಿ) ಎಂದು ಅನುಮತಿ ಪಡೆದು 1ನೇ ತರಗತಿಯಿಂದ 6ನೇ ತರಗತಿವರೆಗೆ ಅನಧಿಕೃತವಾಗಿ ದಾಖಲಾತಿಯನ್ನು ಮಾಡ್ತಿದ್ದು ಈ ಭಾಗದ ಪೋಷಕರು ಪ್ರತಿಷ್ಠಿತ ಸಂಸ್ಥೆಯ ಹೆಸರಿನಲ್ಲಿ ಉತ್ತಮ ಶಿಕ್ಷಣದ ನಿರೀಕ್ಷೆಯಲ್ಲಿ ಮಕ್ಕಳನ್ನು ದಾಖಲು ಮಾದಿದ್ದರೆ ಈ ಸಂಸ್ಥೆಯು ದಾಖಲಾತಿಯಲ್ಲಿ ಗೋಲಮಾಲ್‌ ಮಾಡಿರುವುದು ಬೆಳಕಿಗೆ ಬಂದಿದೆ.

ಸೋಮವಾರ ಬಿಇಒ ಪ್ರಕಾಶ ರಾಠೋಡ್‌ ನೇತೃತ್ವದ ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಿದಾಗ ಶಾಲೆಯಲ್ಲಿ ಅಂದಾಜು 250ಕ್ಕೂ ಹೆಚ್ಚಿನ ಮಕ್ಕಳು ಇರುವುದು ಕಂಡು ಬಂದಿದೆ. 6ನೇ ತರಗತಿ ವರೆಗೆ ವಿದ್ಯಾರ್ಥಿಗಳಿದ್ದರೂ ಮಾನ್ಯತೆ ಇಲ್ಲದೆ ಅಕ್ರಮವಾಗಿ ನಡೆಯುತ್ತಿರುವ ಶಾಲೆಯನ್ನು ನಾಳೆಯಿಂದ ಮುಚ್ಚಬೇಕು ಇಲ್ಲವಾದಲ್ಲಿ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿ ಕ್ರಿಮಿನಲ್‌ ಮೊಕದ್ದಮೆ ದಾಖಲಿ ಸುವದಾಗಿ ಬಿಇಒ ಅವರು ಸ್ಥಳದಲ್ಲಿಯೇ ಇದ್ದ ಶಾಲೆಯ ಮುಖ್ಯಸ್ಥರಿಗೆ ಖಡಕ್‌ ಸೂಚನೆ ನೀಡಿದರು.

ಅನುಮತಿ ಇಲ್ಲದೆ ಶಾಲೆ ಅಕ್ರಮವಾಗಿ ನಡೆಸಿದರೆ ಕ್ರಿಮಿನಲ್‌ ಮೊಕದಮೆ ದಾಖಲಿಸಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭಾರಿ ಬಿಇಒ ಪ್ರಕಾಶ ರಾಠೋಡ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

----

ಅನುಮತಿಯೇ ಇಲ್ಲ!

ಶಾಲೆಗೆ ಅನುಮತಿ ನೀಡಿಲ್ಲ, ಅನುಮತಿ ಕೊಟ್ಟಿದ್ದ ಪೂರ್ವ ಪ್ರಾಥಮಿಕ ಶಾಲೆಗೆ ಅದನ್ನ ಬಿಟ್ಟು 1ನೇ ತರಗತಿಯಿಂದ 6ನೇ ತರಗತಿ ವರೆಗೆ ಶಾಲೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಎಸ್‌ಟಿಎಸ್‌ ಬೀದರ್‌ ತಾಲೂಕಿನಲ್ಲಿ ಮಾಡಿ ಇಲ್ಲಿ ಮಕ್ಕಳ ಹಾಜರಾತಿ ತೋರಿಸ್ತಿದ್ದಾರೆ. ಇದು ಶಿಕ್ಷಣ ಇಲಾಖೆಯ ಕಾಯ್ದೆಯ ವಿರುದ್ಧವಾಗಿದ್ದು, ಶಾಲೆಯನ್ನು ಮುಚ್ಚುವಂತೆ ಸೂಚನೆ ನೀಡಲಾಗಿದೆ.

ವಿಶ್ವಾಸಕ್ಕೆ ಧಕ್ಕೆಯಾಗಲಿಲ್ಲವೇ?

ಪ್ರತಿಷ್ಠಿತ ಸಂಸ್ಥೆಯ ಹೆಸರಿದೆ ಎಂದು ಕೇಳಿಕೊಂಡು ನಾವು ನಮ್ಮ ಮಕ್ಕಳನ್ನು ದಾಖಲಾತಿ ಮಾಡ್ತಿದ್ದೇವೆ. ಶಾಲೆಯಲ್ಲಿ ಅವರು ಕೇಳಿದಷ್ಟು ಶುಲ್ಕ ಕಟ್ಟಿದ್ದೇವೆ. ಎರಡು ವರ್ಷದಿಂದ ನಮ್ಮ ಮಗನ ದಾಖಲಾತಿ ಇದೆ. ಶಾಲೆಯಲ್ಲಿ ಇರಬೇಕು ಅಂತ ನಾವು ತಿಳಿದುಕೊಂಡಿದ್ದೇವೆ. ಆದರೆ ಈ ಶಾಲೆಗೆ ಸರ್ಕಾರದ ಮಾನ್ಯತೆಯೇ ಇಲ್ಲ ಎಂಬ ಮಾಹಿತಿ ಕೇಳಿ ಶಾಕ್‌ ಆಗಿದೆ. ದೊಡ್ಡ ದೊಡ್ಡ ಸಂಸ್ಥೆ ಅಂತ ಹೇಳಕೊಂಡವರು ಹೀಗೆ ಮಾಡಿದ್ರೆ ನಮ್ಮ ವಿಶ್ವಾಸಕ್ಕೆ ಧಕ್ಕೆಯಾಗಲ್ಲವಾ ಏನ್‌ ಮಾಡಬೇಕೊ ಒಂದೂ ತಿಳಿತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಪೋಷಕರೊಬ್ಬರು ಅಳಲು ತೊಡಿಕೊಂಡಿದ್ದಾರೆ.