ಸಾರಾಂಶ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಹಾಗೂ ಅಭ್ಯರ್ಥಿಗಳ ಪ್ರಚಾರದ ಕರಪತ್ರ, ಪೋಸ್ಟರ್ ಹಾಗೂ ಕಿರುಹೊತ್ತಿಗೆ ಇತ್ಯಾದಿಗಳನ್ನು ಮುದ್ರಿಸುವ ಪೂರ್ವದಲ್ಲಿ ಮುದ್ರಕರು ನಿಗದಿತ ನಮೂನೆ ಭರ್ತಿ ಮಾಡಿ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಹಾಗೂ ಅಭ್ಯರ್ಥಿಗಳ ಪ್ರಚಾರದ ಕರಪತ್ರ, ಪೋಸ್ಟರ್ ಹಾಗೂ ಕಿರುಹೊತ್ತಿಗೆ ಇತ್ಯಾದಿಗಳನ್ನು ಮುದ್ರಿಸುವ ಪೂರ್ವದಲ್ಲಿ ಮುದ್ರಕರು ನಿಗದಿತ ನಮೂನೆ ಭರ್ತಿ ಮಾಡಿ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಹೇಳಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಮುದ್ರಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುದ್ರಕರ ಮತ್ತು ಪ್ರಕಾಶಕರ ಹೆಸರನ್ನು ಹೊಂದಿರದ ಯಾವುದೇ ಚುನಾವಣೆಯ ಕಿರುಹೊತ್ತಿಗೆ ಅಥವಾ ಬಿತ್ತಿಪತ್ರಗಳ್ನು ಮುದ್ರಿಸಿ ಪ್ರಕಟಿಸುವಂತಿಲ್ಲ. ಮುದ್ರಣ ಮಾಡಿಸುವವರಿಂದ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿಸಿಕೊಳ್ಳಬೇಕು. ಪ್ರಕಟಿಸಿದ ಕರಪತ್ರ ಮತ್ತು ನಮೂನೆಯನ್ನು 24 ಗಂಟೆಗಳಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಲು ತಿಳಿಸಿದರು.
ಚುನಾವಣೆಯಲ್ಲಿ ಅಭ್ಯರ್ಥಿಗಳ, ಪಕ್ಷದ ಖರ್ಚು ವೆಚ್ಚಗಳ ಮಾಹಿತಿ ಮಹತ್ವದ್ದಾಗಿದೆ. ಚುನಾವಣೆ ಆಯೋಗವು ಗರಿಷ್ಠ ₹ 95 ಲಕ್ಷ ಖರ್ಚು ಮಾಡಲು ನಿಗದಿಪಡಿಸಿದೆ. ಮುದ್ರಕರು ಮುದ್ರಿತ ಪ್ರಕಟಣೆಯಲ್ಲಿ ಮುದ್ರಣ ಸ್ಥಳ, ಎಷ್ಟು ಪ್ರತಿ ಎಂಬುದನ್ನು ಪ್ರಕಟಿಸಬೇಕು. ಅದರ ವೆಚ್ಚವನ್ನು ಚೆಕ್, ಡಿಡಿ ಅಥವಾ ಫೋನ್ ಪೇ ಮೂಲಕ ಪಾವತಿ ಮಾಡಿಕೊಂಡು ಕಾನೂನಾತ್ಮಕವಾಗಿ ಕಾರ್ಯನಿರ್ವಹಿಸಬೇಕು. ನಿಬಂಧನೆ ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಮಾತನಾಡಿ, ಮುದ್ರಣದ ವಿವರದಲ್ಲಿ ಶಾಂತಿಭಂಗ, ಭದ್ರತೆ, ಧಾರ್ಮಿಕ ನಿಂದನೆ, ವ್ಯಕ್ತಿಗತ ಅವಹೇಳನಕಾರಿ ಹೇಳಿಕೆಗಳು ಇರಬಾರದು. ಪ್ರಿಂಟ್ ಮಾಡುವ ಪೂರ್ವದಲ್ಲಿ ಅದರಲ್ಲಿರುವ ಎಲ್ಲ ವಿಷಯವನ್ನು ಕೂಲಂಕಶವಾಗಿ ಪರಿಶೀಲಿಸಿ ನಂತರ ಮುದ್ರಣ ಮಾಡಬೇಕು ಎಂದು ತಿಳಿಸಿದರು.
ಯುಕೆಪಿ ಮಹಾವ್ಯವಸ್ಥಾಪಕ ರಮೇಶ ಕಳಸದ ಮಾತನಾಡಿ, ಜಿಲ್ಲೆಯಲ್ಲಿ ಅಂದಾಜು 80 ರಿಂದ 100 ಮುದ್ರಕರಿದ್ದು, ಸೆಕ್ಸನ್ 127ಎ ಅನುಗುಣವಾಗಿ ನಿಗದಿತ ನಮೂನೆಗಳಲ್ಲಿ ಕಡ್ಡಾಯವಾಗಿ ಸಲ್ಲಿಸಬೇಕು. ಅಭ್ಯರ್ಥಿಗಳ ಕುರಿತು ಪ್ರಚಾರ ಮಾಡುವಾಗ ಪಕ್ಷದ ಅಭ್ಯರ್ಥಿಯ ಸಹಿ ಇದ್ದಲ್ಲಿ ಮಾತ್ರ ಕರಪತ್ರ, ಪೋಸ್ಟರ್ ಮುದ್ರಿಸಲು ಪರವಾನಗಿ ನೀಡಲಾಗುವುದೆಂದು ತಿಳಿಸಿದರು. ಸಭೆಯಲ್ಲಿ ಜಿಲ್ಲೆಯ ವಿವಿಧ ಮುದ್ರಕರು ಉಪಸ್ಥಿತರಿದ್ದರು.