ಶಾಲೆ, ನೀರಿನ ಟ್ಯಾಂಕ್ ಇದ್ದರೂ ಮರಮ್‌ ಅಗೆಯಲು ಅನುಮತಿ

| Published : Jun 25 2025, 11:47 PM IST

ಸಾರಾಂಶ

ಆನೆಗೊಂದಿಯ ರಸ್ತೆಯ ಮಾರ್ಗದ ಬಳಿ ಸರ್ವೇ ನಂಬರ್‌ 53ರಲ್ಲಿ ಮಾಲ್ಕಿ ಜಮೀನಿನಲ್ಲಿ ಮರಮ್‌ ಅಗೆಯಲು ಅನುಮತಿ ನೀಡಲಾಗಿದೆ. ಆದರೆ, ಅದೇ ಸರ್ವೇ ನಂಬರ್‌ನ ಮೇಲ್ಭಾಗದಲ್ಲಿ ನೀರಿನ ಟ್ಯಾಂಕ್‌ ಹಾಗೂ ಶಾಲಾ ಕಟ್ಟಡವಿದೆ.

ರಾಮಮೂರ್ತಿ ನವಲಿ

ಗಂಗಾವತಿ:

ನಗರದ 35 ವಾರ್ಡ್‌ಗಳಿಗೆ ನೀರು ಪೂರೈಸುವ 10ರಿಂದ 15 ಲಕ್ಷ ಲೀಟರ್‌ ಸಾಮರ್ಥ್ಯದ ನೀರಿನ ಟ್ಯಾಂಕ್‌ ಹಾಗೂ ಶಾಲಾ ಕಟ್ಟಡದ ಸಮೀಪವೇ ಮರಮ್‌ (ಮಣ್ಣು) ಅಗೆಯಲು ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ಆನೆಗೊಂದಿಯ ರಸ್ತೆಯ ಮಾರ್ಗದ ಬಳಿ ಸರ್ವೇ ನಂಬರ್‌ 53ರಲ್ಲಿ ಮಾಲ್ಕಿ ಜಮೀನಿನಲ್ಲಿ ಮರಮ್‌ ಅಗೆಯಲು ಅನುಮತಿ ನೀಡಲಾಗಿದೆ. ಆದರೆ, ಅದೇ ಸರ್ವೇ ನಂಬರ್‌ನ ಮೇಲ್ಭಾಗದಲ್ಲಿ ನೀರಿನ ಟ್ಯಾಂಕ್‌ ಹಾಗೂ ಶಾಲಾ ಕಟ್ಟಡವಿದೆ. ಹೀಗಾಗಿ ಕೆಳ ಭಾಗದಲ್ಲಿ ಮರಮ್‌ ಅಗೆಯಲು ಯಾವ ಆಧಾರದ ಮೇಲೆ ಪರವಾನಗಿ ನೀಡಲಾಗಿದೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಟ್ಯಾಂಕ್‌-ಶಾಲಾ ಕಟ್ಟಡಕ್ಕೆ ಧಕ್ಕೆ ಆತಂಕ:

ನೀರಿನ ಟ್ಯಾಂಕ್‌ ಹಾಗೂ ಶಾಲಾ ಕಟ್ಟಡದ ಕೆಳಭಾಗದಲ್ಲಿ ಮುರಮ್‌ ಅಗೆಯಲು ಅನುಮತಿ ನೀಡಿದ್ದರಿಂದ ಮಣ್ಣು ಸಡಿಲಗೊಂಡು ನೀರಿನ ಟ್ಯಾಂಕ್‌ ಹಾಗೂ ಕೇಂದ್ರೀಯ ವಿದ್ಯಾಲಯಕ್ಕೆ ಧಕ್ಕೆ ಆಗಲಿದೆ ಎಂಬ ಆತಂಕ ಶುರುವಾಗಿದೆ. ಜತೆಗೆ ಮರಮ್‌ ಸಾಗಾಟದಿಂದ ಅದರ ಧೂಳು ವಾತಾವರಣದಲ್ಲಿ ಬೆರತು ವಿದ್ಯಾರ್ಥಿಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ ಎಂದು ಶಿಕ್ಷಕರು ಹೇಳುತ್ತಿದ್ದಾರೆ. ಮರಮ್‌ ಅಗೆಯಲು ಎನ್‌ಒಸಿ ನೀಡುವಾಗ ಅಧಿಕಾರಿಗಳು ಇವುಗಳನ್ನು ಏಕೆ ಗಣನೆಗೆ ತೆಗೆದುಕೊಂಡಿಲ್ಲ ಎಂಬುದೇ ಇದೀಗ ಯಕ್ಷ ಪ್ರಶ್ನೆಯಾಗಿದೆ.

35 ವಾರ್ಡ್‌ಗೆ ನೀರು ಪೂರೈಕೆ:

ಆನೆಗೊಂದಿ ರಸ್ತೆಯ ಮಾರ್ಗದ ಗುಡ್ಡದ ಮೇಲೆ 10ರಿಂದ 15 ಲಕ್ಷ ಲೀಟರ್‌ ಸಾಮರ್ಥ್ಯದ ವಾಟರ್‌ ಟ್ಯಾಂಕ್‌ ನಿರ್ಮಿಸಲಾಗಿದೆ. ಇದರ ಮೂಲಕವೇ ಗಂಗಾವತಿಯ 35 ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಒಂದು ವೇಳೆ ಈ ಟ್ಯಾಂಕ್‌ಗೆ ಧಕ್ಕೆಯಾದರೆ ಇಡೀ ನಗರಕ್ಕೆ ಜಲ ಸಂಪರ್ಕ ಕಡಿತವಾಗುತ್ತದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಜತೆಗೆ ಸಮೀಪವೇ ಕೇಂದ್ರಿಯ ಮಹಾವಿದ್ಯಾಲಯವಿದ್ದು ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ. ಮರಮ್‌ ಕಾರ್ಯಾಚರಣೆ ವೇಳೆ ಜೆಸಿಬಿಗಳ ಅಬ್ಬರದಿಂದ ಪಾಠ ಕೇಳಿಸಿಕೊಳ್ಳಲು ಆಗುತ್ತಿಲ್ಲವೆಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಜತೆಗೆ ಕಂಪನವೂ ಆಗುತ್ತಿದೆ ಎಂದು ವಿದ್ಯಾರ್ಥಿಗಳು ಪತ್ರಿಕೆಗೆ ತಿಳಿಸಿದ್ದಾನೆ.

ಶಾಲಾ ಕಟ್ಟಡ, ನೀರಿನ ಟ್ಯಾಂಕ್‌, ಆಸ್ಪತ್ರೆ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳದಲ್ಲಿ ಗಣಿಗಾರಿಕೆ, ಕಾರ್ಖಾನೆ ಸ್ಥಾಪನೆ, ಮರಮ್‌ ಅಗೆಯಲು ಅನುಮತಿ ನೀಡಬಾರದು ಎಂದು ಕಾನೂನು ಇದ್ದರೂ ಅಧಿಕಾರಿಗಳು ಯಾವ ಕಾರಣಕ್ಕೆ ಅನುಮತಿ ನೀಡಿದ್ದಾರೆ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.ಗಂಗಾವತಿಯ ಆನೆಗೊಂದಿ ರಸ್ತೆಯ ಮಾರ್ಗದಲ್ಲಿರುವ ಗುಡ್ಡದ ಸರ್ವೇ ನಂ. 53ರಲ್ಲಿ ಮರಮ್ ಅಗೆಯಲು ವ್ಯಕ್ತಿಯೊಬ್ಬರು ಅನುಮತಿ ಪಡೆದಿದ್ದಾರೆ. ಆದರೆ, ಈ ಕಾರ್ಯಾಚರಣೆ ನಡೆಯುವ ಸ್ಥಳದ ಸನಿಹದಲ್ಲಿ ನೀರಿನ ಟ್ಯಾಂಕ್ ಮತ್ತು ಕೇಂದ್ರೀಯ ವಿದ್ಯಾಲಯ ಇರುವುದು ನಮ್ಮ ಗಮನಕ್ಕೆ ಇಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮತ್ತು ತಹಸೀಲ್ದಾರ್‌ರು ಭೇಟಿ ನೀಡಿ ಪರಿಶೀಲಿಸುತ್ತಾರೆ.

ಸನ್ನಿತ್, ಗಣಿ ಮತ್ತು ಭೂ ವಿಜ್ಞಾನಿ ಕೊಪ್ಪಳಕುಡಿಯುವ ನೀರಿನ ಟ್ಯಾಂಕ್‌, ಕೇಂದ್ರೀಯ ವಿಶ್ವವಿದ್ಯಾಲಯದ ಸಮೀಪವೇ ಮರಮ್‌ ಅಗೆಯುವ ಕಾರ್ಯ ನಡೆಯುತ್ತಿರುವ ಮಾಹಿತಿ ಬಂದಿದೆ. ಒಂದು ವೇಳೆ ನೀರಿನ ಟ್ಯಾಂಕ್‌ಗೆ ತೊಂದರೆಯಾದರೆ ಇಡೀ ಗಂಗಾವತಿ ನಗರವೇ ನೀರಿಲ್ಲದೇ ಪರದಾಡಬೇಕಾಗುತ್ತದೆ. ಕೂಡಲೇ ನಗರಸಭೆ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಸೂಚಿಸುತ್ತೇನೆ.

ರಮೇಶ ಚೌಡ್ಕಿ. ಅಧ್ಯಕ್ಷರು, ಹಣಕಾಸು ಸ್ಥಾಯಿ ಸಮಿತಿ ನಗರಸಭೆ