ಸಾರಾಂಶ
ಸದಸ್ಯರ ಆಕ್ರೋಶಕ್ಕೆ ಕಂಗೆಟ್ಟ ಪಿಡಿಒ, ಶಾಸಕರ ಸೂಚನೆಯಂತೆ ತಾನು ಈ ಪರವಾನಗಿಯನ್ನು ನೀಡಿರುವೆನೆಂದು ಸಭೆಗೆ ತಿಳಿಸಿದರು. ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ತಕ್ಷಣವೇ ಪರವಾನಗಿ ರದ್ದು ಪಡಿಸಲು ಒಕ್ಕೊರಳಲ್ಲಿ ಪಟ್ಟು ಹಿಡಿದರು.
ಕನ್ನಡಪ್ರಭ ವಾರ್ತೆ ಉಪ್ಪಿನಗಂಡಿ
ಇಲ್ಲಿನ ಗ್ರಾಮ ಪಂಚಾಯಿತಿ ಆಡಳಿತವನ್ನು ದಿಕ್ಕರಿಸಿ ಪಿಡಿಒ, ಜನ ನಿಬಿಡ ಪ್ರದೇಶದಲ್ಲಿ ಪಟಾಕಿ ವ್ಯಾಪಾರಕ್ಕೆ ಪರವಾನಗಿ ನೀಡಿರುವುದಕ್ಕೆ ಸದಸ್ಯರಿಂದ ಪ್ರಬಲ ವಿರೋಧ ವ್ಯಕ್ತವಾಗಿ ಅದನ್ನು ರದ್ದುಪಡಿಸುವಂತೆ ನಿರ್ಣಯಿಸಿದ ಘಟನೆ ನಡೆದಿದೆ.ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯು ಪಂಚಾಯಿತಿ ಅಧ್ಯಕ್ಷೆ ಲಲಿತಾ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸದಸ್ಯರ ಆಕ್ರೋಶಕ್ಕೆ ಕಂಗೆಟ್ಟ ಪಿಡಿಒ, ಶಾಸಕರ ಸೂಚನೆಯಂತೆ ತಾನು ಈ ಪರವಾನಗಿಯನ್ನು ನೀಡಿರುವೆನೆಂದು ಸಭೆಗೆ ತಿಳಿಸಿದರು. ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ತಕ್ಷಣವೇ ಪರವಾನಗಿ ರದ್ದು ಪಡಿಸಲು ಒಕ್ಕೊರಳಲ್ಲಿ ಪಟ್ಟು ಹಿಡಿದರು. ಸದಸ್ಯರ ಆಗ್ರಹಕ್ಕೆ ಮಣಿದು ನೀಡಲಾದ ಪರವಾನಗಿಯನ್ನು ರದ್ದು ಪಡಿಸುವ ನಿರ್ಣಯ ಕೈಗೊಳ್ಳಲಾಯಿತು.ತ್ಯಾಜ ನಿರ್ವಹಣೆಯು ಇತ್ತೀಚಿನ ದಿನಗಳಲ್ಲಿ ಸರ್ಮಪಕ ವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು, ಕಟ್ಟು ನಿಟ್ಟಿನ ಕ್ರಮದೊಂದಿಗೆ ಸಮರ್ಪಕವಾಗಿ ನಡೆಸಲು ಕ್ರಮ ಕೈಗೊಳ್ಳಬೇಕು, ಮನೆ ನಿವೇಶನಕ್ಕಾಗಿ ನಿರಾಶ್ರಿತರಿಂದ ಅರ್ಜಿ ಪಡೆಯುತ್ತಲೇ ಇದ್ದರೆ ಸಾಲದು ಅವರಿಗೆ ನಿವೇಶನ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು, ಗ್ರಾಮ ಪಂಚಾಯಿತಿ ಸರಹದ್ದಿನಲ್ಲಿರುವ ಎಲ್ಲ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು, ಹೊಸ ಬಸ್ ನಿಲ್ದಾಣದ ವಾಣಿಜ್ಯ ಕಟ್ಟಡಗಳ ಮೇಲೆ ಜಾಹೀರಾತು ಫಲಕಗಳ ಬಾಡಿಗೆಯನ್ನು ನಿಯಮಿತವಾಗಿ ಪಂಚಾಯಿತಿ ಸಂಗ್ರಹಿಸಬೇಕು, ಗ್ರಾಮದಲ್ಲಿ ಒಳಚರಂಡಿ ವ್ಯವಸ್ಥೆಗೆ ಸರ್ಕಾರದಿಂದ ಅನುದಾನ ಪಡೆಯಲು ಶ್ರಮಿಸಬೇಕು ಮೊದಲಾದ ವಿಚಾರಗಳು ಪ್ರಸ್ತಾಪಿಸಲ್ಪಟ್ಟಿತ್ತು.ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಯು.ಟಿ ತೌಸಿಫ್, ಧನಂಜಯ, ಉಷಾ ಮುಳಿಯ, ಅಬ್ದುಲ್ ರಹಿಮಾನ್, ರಶೀದ್, ರುಕ್ಮಿಣಿ, ಶೋಭಾ, ಉಷಾ ನಾಯ್ಕ, ಸುರೇಶ ಅತ್ರ‍್ರಮಜಲು, ಜಯಂತಿ, ವಿನಾಯಕ ಪೈ, ಮೈಸಿದಿ ಇಬ್ರಾಹಿಂ, ವನಿತಾ, ಸೌಧ, ನೇಬಿಸಾ, ಯು.ಕೆ. ಇಬ್ರಾಹಿಂ, ಲೊಕೇಶ ಬೆತ್ತೊಡಿ ಉಪಸ್ಥಿತರಿದ್ದರು.ಪಿ.ಡಿ.ಒ ವಿಲ್ಟೆಡ್ ಲಾರೆನ್ಸ್ ರೊಡ್ರಿಗಸ್ ಸ್ವಾಗತಿಸಿದರು. ಕಾರ‍್ಯದರ್ಶಿ ಗೀತಾ ಶೇಖರ ವಂದಿಸಿದರು.