ಸಾರಾಂಶ
ರಾಣಿಬೆನ್ನೂರು: ಮುಡಾ ನಿವೇಶನ ಹಂಚಿಕೆ ಪ್ರಕರಣ ನೆಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಹಾಗೂ ಆ ಮೂಲಕ ರಾಜ್ಯ ಸರ್ಕಾರ ಅಸ್ಥಿರಗೊಳಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಖಂಡಿಸಿ ಸ್ಥಳೀಯ ಅಹಿಂದ ಸಮುದಾಯಗಳ ಒಕ್ಕೂಟದ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಿದರು. ಇಲ್ಲಿನ ಕೆಇಬಿ ವಿನಾಯಕ ದೇವಸ್ಥಾನದ ಬಳಿಯಿಂದ ಕುರಿ ಹಿಂಡಿನ ಸಮೇತ ಮೆರವಣಿಗೆ ಹೊರಟ ಪ್ರತಿಭಟನಾಕರರು ಬಸ್ ನಿಲ್ದಾಣದವರೆಗೆ ಸಾಗಿಬಂದರು. ಈ ಸಮಯದಲ್ಲಿ ಮಾಜಿ ಸಚಿವ ಆರ್. ಶಂಕರ್ ಮಾತನಾಡಿ, ನಿಷ್ಕಳಂಕ ವ್ಯಕ್ತಿತ್ವದ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರಿಗೆ ಯಾವುದೇ ವಿವೇಚನೆಯಿಲ್ಲವಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸಿದ್ದರಾಮಯ್ಯ ಪತ್ನಿಗೆ ನಿವೇಶನ ಕೊಡಲಾಗಿದೆ. ಇದರಲ್ಲಿ ಮುಖ್ಯಮಂತ್ರಿಗಳು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಇಡೀ ಅಹಿಂದ ವರ್ಗ, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಬೆಂಬಲವಾಗಿ ನಿಂತಿದೆ. ಇದು ಅವರ ರಾಜಕಾರಣಕ್ಕೆ ಮಾದರಿಯಾಗಿದೆ. ಸಿದ್ದರಾಮಯ್ಯ ಆಡಳಿತ ವೈಖರಿ ಸಹಿಸದೆ ಈ ರೀತಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆ. 29ರಂದು ಸಿದ್ದರಾಮಯ್ಯ ಪರವಾಗಿ ತೀರ್ಪು ಬರುವ ವಿಶ್ವಾಸವಿದೆ. ಈ ಹಿಂದೆ ಇದೇ ರೀತಿ ಹಿಂದುಳಿದ ವರ್ಗಗಳ ನಾಯಕರಾದ ದೇವರಾಜ ಅರಸು, ಎಸ್. ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರ್ಮಸಿಂಗ್ ವಿರುದ್ಧ ಷಡ್ಯಂತ್ರ ರೂಪಿಸಲಾಗಿತ್ತು. ಆದರೆ ಈಗ ಶೋಷಿತ ಸಮುದಾಯಗಳು ಜಾಗೃತವಾಗಿದ್ದು ಸಮಾಜವಾದದ ಹಿನ್ನೆಲೆಯಿಂದ ಬಂದಿರುವ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ಪರ ಬಂಡೆಯಂತೆ ನಿಂತಿವೆ. ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ತಕ್ಕ ಪಾಠವನ್ನು ಕಲಿಸಲು ಅಹಿಂದ ಸಮುದಾಯಗಳು ನಿರ್ಧರಿಸಿವೆ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಅವಕಾಶ ನೀಡುವುದಿಲ್ಲ ಎಂದರು. ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಮಹಿಳೆಯರಿಗೆ ಅಗೌರವ ತೋರಿಸಿದ ಕುಟುಂಬದವರು ಬಂದು ಸಿದ್ದರಾಮಯ್ಯ ಕುರಿತು ನೀತಿ ಪಾಠ ಹೇಳುತ್ತಿದ್ದಾರೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ, ಶಕುನಿ ಬಾಯಲ್ಲಿ ಮಹಾಭಾರತ, ರಾವಣನ ಬಾಯಲ್ಲಿ ರಾಮಾಯಣ ಕೇಳುವಂತಾಗಿದೆ. ಇನ್ನು ಬಿಜೆಪಿಗರು ಭ್ರಷ್ಟಾಚಾರ ಮಾಡಿ ನಮ್ಮ ರೀತಿ ಜಗತ್ತು ಇದೆ ಅಂತ ಅಂದುಕೊಂಡಿದ್ದಾರೆ. ಅವರಿಂದ ಸಿದ್ದರಾಮಯ್ಯ ಕೂದಲು ಅಲುಗಾಡಿಸಲು ಆಗುವುದಿಲ್ಲ. ನಮಗೆ ನ್ಯಾಯ ಸಿಗುತ್ತದೆ. ಒಂದು ವೇಳೆ ನ್ಯಾಯ ಸಿಗದೇ ಹೋದಲ್ಲಿ ನಾನು ಶಂಕರಣ್ಣ ಜತೆಗೂಡಿ ರಾಣಿಬೆನ್ನೂರಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ಹೋಗುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ನಾವು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಬೇಕಿತ್ತು. ಅಹಿಂದ ವರ್ಗದವರಿಗೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಒಗ್ಗಟ್ಟಾಗಿ ಅಹಿಂದ ವರ್ಗದ ಹಿತ ಕಾಪಾಡಬೇಕಾಗಿದೆ ಎಂದರು. ರತ್ನಾಕರ ಕುಂದಾಪುರ, ಕೃಷ್ಣಮೂರ್ತಿ ಸುಣಗಾರ, ಪುಟ್ಟಪ್ಪ ಮರಿಯಮ್ಮನವರ, ಸಿದ್ದಣ್ಣ ಅಂಬಲಿ, ಮರಿಯಪ್ಪ ಪೂಜಾರ, ರವಿ ಹುಲಿಗೆಮ್ಮನವರ, ಆನಂದ ದೊಡ್ಡಮನಿ, ಜುಮ್ಮಣ್ಣಿ, ಏಕನಾಥ ಭಾನುವಳ್ಳಿ, ಬಿ.ಬಿ. ನಂದ್ಯಾಲ, ಮೃತ್ಯುಂಜಯ ಗುದಿಗೇರ, ರೇಣುಕಾ ಲಮಾಣಿ, ಶೇರುಖಾನ ಕಾಬೂಲಿ, ರವೀಂದ್ರಗೌಡ ಪಾಟೀಲ, ಆನಂದ ಹುಲಬನ್ನಿ, ಷಣ್ಮುಖಪ್ಪ ಕಂಬಳಿ, ಕಿರಣ ಗುಳೇದ, ಸುರೇಶ ಜಡಮಲಿ, ಡಾಕಪ್ಪ ಲಮಾಣಿ, ಹನುಮಂತಪ್ಪ ಕಬ್ಬಾರ, ದೇವೇಂದ್ರಪ್ಪ ಕಾಟಿ, ಕೃಷ್ಣಪ್ಪ ಕಂಬಳಿ ಮತ್ತಿತರರಿದ್ದರು.