ಸಾರಾಂಶ
ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿ
ಗುರಿ ಸಾಧನೆಗೆ ವಿದ್ಯಾರ್ಥಿಗಳ ಪರಿಶ್ರಮ ಮುಖ್ಯ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ ಹೇಳಿದರು.ತಾಲೂಕಿನ ಕುಡಪಲಿ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಆವರಣದಲ್ಲಿ ಜರುಗಿದ ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ, ಮಹಾ ಸರಸ್ವತಿ ಪೂಜೆ ಹಾಗೂ ತಾಯಂದಿರ ಪಾದಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಗುರು-ಹಿರಿಯರಿಗೆ ಗೌರವ ನೀಡಬೇಕು. ಆಗ ಮಾತ್ರ ವಿದ್ಯಾರ್ಥಿ ಜೀವನಕ್ಕೆ ಅರ್ಥ ಬರುವುದು ಎಂದರು.
ಶಿಕ್ಷಕ ಶಿವರಾಜ ಶಿಮಿಕೇರಿ ಮಾತನಾಡಿ, ಈಗ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಮ್ಮಿ ಇಲ್ಲ. ಸರ್ಕಾರ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ಉತ್ತಮ ಕಟ್ಟಡ, ಸ್ಮಾರ್ಟ್ ಕ್ಲಾಸ್, ಸುಸಜ್ಜಿತ ಪೀಠೋಪಕರಣ, ಶುದ್ಧ ಕುಡಿಯುವ ನೀರಿನ ಘಟಕ, ವಿಶಾಲವಾದ ಆಟದ ಮೈದಾನ ಇಂತಹ ಸೌಲಭ್ಯಗಳು ಸದುಪಯೋಗವಾಗಬೇಕು ಎಂದರು.ರಟ್ಟೀಹಳ್ಳಿ ಪೊಲೀಸ್ ಠಾಣೆಯ ಎಎಸ್‍ಐ ಹಾಗೂ ಸಾಹಿತಿ ಅಶೋಕ ಕೊಂಡ್ಲಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದಿದ ಅನೇಕರು ಉನ್ನತ ಹುದ್ದೆ ಹೊಂದಿದ್ದಾರೆ. ತಂದೆ-ತಾಯಿಗಳು ಮಕ್ಕಳ ಭವಿಷ್ಯದ ಬಗ್ಗೆ ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡು, ಕೂಲಿ-ನಾಲಿ ಮಾಡಿ, ಮಕ್ಕಳ ಓದಿಗಾಗಿ ಅವರ ಜೀವನವನ್ನೇ ಮುಡಿಪಾಗಿಟ್ಟಿರುತ್ತಾರೆ. ವಿದ್ಯಾರ್ಥಿಗಳು ತಾಯಂದಿರ ಕನಸು ನನಸು ಮಾಡಬೇಕು ಎಂದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕ್ಷೇತ್ರ ಸಮನ್ವಯಾಧಿಕಾರಿ ಎನ್. ಸುರೇಶಕುಮಾರ, ಅಕ್ಷರ ದಾಸೋಹ ನಿರ್ದೇಶಕ ಎಚ್.ಎಚ್. ಜಾಡರ, ಗ್ರಾಪಂ ಅಧ್ಯಕ್ಷ ಮಹೇಶ್ವರಗೌಡ ಚಿಗ್ಗೌಡ್ರ, ಇಸಿಒ ವಸಂತರಾವ್ ಪಾಟೀಲ, ಜಿಬಿಎಸ್ ಪ್ರಾಚಾರ್ಯ ಎಸ್.ಬಿ. ಪಾಟೀಲ, ಮುಖ್ಯ ಶಿಕ್ಷಕ ಎಂ.ಆರ್. ಮರಿಗೌಡ್ರ, ಎಸ್‍ಡಿಎಂಸಿ ಅಧ್ಯಕ್ಷ ಮಹೇಶಪ್ಪ ಕುಸಗೂರು, ಕರಿಯಪ್ಪ ಚೌಡಕ್ಕನವರ, ನಿವೃತ್ತ ಶಿಕ್ಷಕ ಎಚ್.ಆರ್. ಬೆಲ್ಲದ, ಎಸ್.ಜಿ. ಮಠದ, ಶಿಕ್ಷಕ ಶಿವರಾಜ ಶಿಮಿಕೇರಿ, ಸಿಆರ್‌ಪಿ ಚೇತನಕುಮಾರ ಬಣಕಾರ, ಎಂ.ಆರ್. ಕಟಗಿ, ಎಸ್‍ಡಿಎಂಸಿ ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಇದ್ದರು.