ಕಲ್ಲಡ್ಕ, ಮುತಾಲಿಕ್‌, ಸೂಲಿಬೆಲೆ ನಿರ್ಬಂಧಕ್ಕೆ ಮನವಿ

| Published : Feb 03 2024, 01:46 AM IST / Updated: Feb 03 2024, 01:47 AM IST

ಸಾರಾಂಶ

ಜಿಲ್ಲೆಯ ಸೌಹಾರ್ದ ಪರಂಪರೆಯನ್ನು ರಕ್ಷಿಸಲು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಹಾಗಾಗಿ ತೆರಗೂಡು ಗ್ರಾಮದಲ್ಲಿ ರಾಷ್ಟ್ರ ಧ್ವಜ ಮತ್ತು ನಾಡ ಧ್ವಜ ಹಾರಿಸಲು ಅನುಮತಿ ಪಡೆದು ಅನ್ಯ ಧ್ವಜ ಹಾರಿಸಿ ಕೋಮು ಭಾವನೆ ಕೆರಳಿಸಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.

ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಲು ಪ್ರಗತಿಪರರ ಒತ್ತಾಯ । ಪರಿಸ್ಥಿತಿಯನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲು ಅವಕಾಶ ನೀಡಬೇಡಿ

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಕೆರಗೋಡು ಹನುಮ ಧ್ವಜ ವಿವಾದದ ಹಿನ್ನೆಲೆ ಪ್ರಚೋದನಕಾರಿ ಭಾಷಣ ಮಾಡಿ ಜಿಲ್ಲೆಯ ಶಾಂತಿ-ನೆಮ್ಮದಿಗೆ ಧಕ್ಕೆ ತರುವ ಕಲ್ಲಡ್ಕ ಪ್ರಭಾಕರ್ ಭಟ್, ಪ್ರಮೋದ್ ಮುತಾಲಿಕ್ ಹಾಗೂ ಚಕ್ರವರ್ತಿ ಸೂಲಿಬೆಲೆ ಜಿಲ್ಲೆಗೆ ಪ್ರವೇಶಿಸಿದಂತೆ ನಿರ್ಬಂಧಿಸಬೇಕು ಎಂದು ಪ್ರಗತಿಪರರು ಮನವಿ ಮಾಡಿದರು.

ಸಮಾನ ಮನಸ್ಕರ ವೇದಿಕೆ ನೇತೃತ್ವದಲ್ಲಿ ಪ್ರಗತಿಪರ ನಿಯೋಗ ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿತು.

ಕೆರಗೋಡು ಧ್ವಜ ವಿವಾದ ಹಿನ್ನೆಲೆ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣವಿದೆ. ಇಂತಹ ಸ್ಥಿತಿಗೆ ಆರ್‌ಎಸ್ಎಸ್ ನೇತೃತ್ವದ ಸಂಘ ಪರಿವಾರ ಕಾರಣ. ಪರಿಸ್ಥಿತಿಯನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲು ಹವಣಿಸುತ್ತಿದೆ, ಜಿಲ್ಲೆಯ ಸರ್ಕಾರಿ ಕಚೇರಿ, ವ್ಯಾಪಾರದ ಸ್ಥಳ ಹಾಗೂ ಸಾರ್ವಜನಿಕ ಸ್ಥಳಗಳನ್ನು ದುರ್ಬಳಕೆ ಮಾಡಿಕೊಂಡು ಅನ್ಯ ಧರ್ಮದ ವಿರುದ್ಧ ದ್ವೇಷ ಹರಡುವ ಹಾಗೂ ಅವರ ವಿರುದ್ಧ ಬಹು ಸಂಖ್ಯಾತ ಧಾರ್ಮಿಕ ನಂಬಿಕೆಯುಳ್ಳ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಆದ್ದರಿಂದ ಜಿಲ್ಲೆಯ ಸೌಹಾರ್ದ ಪರಂಪರೆಯನ್ನು ರಕ್ಷಿಸಲು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಹಾಗಾಗಿ ತೆರಗೂಡು ಗ್ರಾಮದಲ್ಲಿ ರಾಷ್ಟ್ರ ಧ್ವಜ ಮತ್ತು ನಾಡ ಧ್ವಜ ಹಾರಿಸಲು ಅನುಮತಿ ಪಡೆದು ಅನ್ಯ ಧ್ವಜ ಹಾರಿಸಿ ಕೋಮು ಭಾವನೆ ಕೆರಳಿಸಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಧ್ವಜಸ್ತಂಭ ನಿರ್ಮಿಸಲು ಅಕ್ರಮವಾಗಿ ಅನುಮತಿ ನೀಡಿದ ಎಲ್ಲರ ಮೇಲೂ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.

ಯಾವುದೇ ಕಾರ್ಯಕ್ರಮದ ಬ್ಯಾನರ್, ಬಂಟಿಂಗ್ಸ್ ಹಾಕಿದವರು ಕಾರ್ಯಕ್ರಮ ಮುಗಿದ 24 ತಾಸಿನೊಳಗೆ ಅವುಗಳನ್ನು ತೆರೆವುಗೊಳಿಸಬೇಕೆಂಬ ನಿಬಂಧನೆ ವಿಧಿಸುವಂತೆ ಆಗ್ರಹಿಸಿದರು.

ಇದೇ ವೇಳೆ ಸಚಿವ ಚಲುವರಾಯಸ್ವಾಮಿ ಯಾವುದೇ ಕಾರಣಕ್ಕೂ ಬಂದ್ ಮಾಡಬೇಡಿ, ಯಾರೂ ಕೂಡ ಬಂದ್ ಮಾಡಬಾರದು ಎಂದು ಮನವಿ ಮಾಡಿದರು.

ಪ್ರಗತಿಪರ ಮುಖಂಡರಾದ ಎ.ಎಲ್. ಕೃಷ್ಣೇಗೌಡ, ಎಂ.ಬಿ. ನಾಗಣ್ಣಗೌಡ, ಸುನಂದ ಜಯರಾಮ್, ಲಕ್ಷ್ಮಣ್ ಚೀರನಹಳ್ಳಿ, ಸಿ.ಕುಮಾರಿ. ಎಂ.ವಿ ಕೃಷ್ಣ, ಸಿ.ಡಿ ನಾಗರಾಜ್, ಮುದ್ದೇಗೌಡ, ಬಿಎಸ್ಪಿ ಜಿಲ್ಲಾಧ್ಯಕ್ಷ ಶಿವಶಂಕರ್,ಮುಕುಂದಪ್ಪ, ಹುರುಗಲವಾಡಿ ರಾಮಯ್ಯ ಇತರರಿದ್ದರು.

-----