ಸಾರಾಂಶ
ನರಗುಂದ: ಕೇಂದ್ರ ಸರ್ಕಾರ ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಜಾರಿ ಮಾಡದಿದ್ದರೆ ರಾಷ್ಟ್ರಪತಿಗಳು ಈ ಭಾಗದ ರೈತರಿಗೆ ದಯಾ ಮರಣಕ್ಕೆ ಒಪ್ಪಿಗೆ ನೀಡಬೇಕು ಎಂದು ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಸವರಾಜ ಸಾಬಳೆ ಹೇಳಿದರು.
ಅವರು ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ತಹಸೀಲ್ದಾರ ಮುಖಾಂತ ಸರ್ಕಾರಕ್ಕೆ ಮನವಿ ನೀಡಿ ಮಾತನಾಡಿದರು.ರಾಜ್ಯದ ಉತ್ತರ ಕರ್ನಾಟಕ ಭಾಗದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಕಳೆದ 40 ವರ್ಷದಿಂದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ಹಲವಾರು ರೀತಿ ಸರ್ಕಾರ ವಿರುದ್ಧ ಹೋರಾಟ ಮಾಡಿದರೂ ಕೇಂದ್ರ ಸರ್ಕಾರ ಗೋವಾ ರಾಜ್ಯದ ಮಾತು ಕೇಳಿಕೊಂಡು ಉದ್ದೇಶ ಪೂರ್ವಕವಾಗಿ ಈ ಯೋಜನೆ ಜಾರಿ ಮಾಡುತ್ತಿಲ್ಲವೆಂದು ಆರೋಪಿಸಿದರು.
40 ವರ್ಷದಿಂದ ಈ ಭಾಗದ ರೈತರಿಗೆ ಹೋರಾಟ ಮಾಡಿ ಸಾಕಾಗಿದೆ,ಹೀಗಾಗಿ ಸರ್ಕಾರ ತಿಂಗಳಲ್ಲಿ ಯೋಜನೆ ಜಾರಿ ಮಾಡದಿದ್ದರೆ ರಾಷ್ಟ್ರಪತಿಗಳ ಮೊರೆ ಹೋಗಿ ದಯಾ ಮರಣಕ್ಕೆ ಮನವಿ ಸಲ್ಲಿಸುತ್ತೇವೆ ಎಂದರು.ಕನ್ನಡಪರ ಸಂಘಟನೆ ಮುಖಂಡ ಚನ್ನು ನಂದಿ ಮಾತನಾಡಿ, 1980ರಲ್ಲಿ ನೀರಿನ ಕರ ವಿರೋಧಿಸಿ ಸರ್ಕಾರದ ವಿರುದ್ಧ ಹೋರಾಟ ಮಾಡುವ ಸಂದರ್ಭದಲ್ಲಿ ಪೊಲೀಸರ ಗುಂಡಿಗೆ ತಾಲೂಕಿನ ಚಿಕ್ಕನರಗುಂದ ಗ್ರಾಮದ ಈರಪ್ಪ ಕಡ್ಲಿಕೊಪ್ಪ ವೀರಮರಣ ಹೊಂದಿ 40 ವರ್ಷ ಗತಿಸಿದರೂ ಸರ್ಕಾರ ಪುತ್ಥಳಿ,ಸ್ಮಾರಕ ಭವನ ನಿರ್ಮಾಣ ಮಾಡದೇ ಈ ಭಾಗದ ರೈತ ಹೋರಾಟಗಾರರಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಪತಹಸೀಲ್ದಾರ್ ಪರಶುರಾಮ ಕಲಾಲ ರೈತರ ಮನವಿ ಸ್ವೀಕರಸಿ ಸರ್ಕಾರಕ್ಕೆ ರವಾನೆ ಮಾಡಲಾಗುವದೆಂದು ಹೇಳಿದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ಎಸ್.ಎಸ್. ಪಾಟೀಲ, ವಿಠಲ ಜಾಧವ, ವೀರಣ್ಣ ಸೊಪ್ಪಿನ, ಡಿ.ಎಂ. ನಾಯ್ಕರ ಸೇರಿದಂತೆ ಮುಂತಾದವರು ಇದ್ದರು.