ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಜಿಲ್ಲಾ ಬಿಜೆಪಿ ಹಾಗೂ ಜೆಡಿಎಸ್ ವತಿಯಿಂದ ಸೋಮವಾರ ಬೀದರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ನಗರದ ಡಾ.ಅಂಬೇಡ್ಕರ್ ವೃತ್ತದ ಸಮೀಪದ ಪ್ರವಾಸಿ ಮಂದಿರದಿಂದ ಶಿವಾಜಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮೆರವಣಿಗೆಯಲ್ಲಿ ಬೈಕ್‌ನ್ನು ತಳ್ಳುತ್ತ ತರುವ ಮೂಲಕ ತೈಲ ಬೆಲೆ ಹೆಚ್ಚಿಸಿರುವ ಸರ್ಕಾರಕ್ಕೆ ಹಿಡಿ ಶಾಪ ಹಾಕಲಾಯಿತು.
ನಂತರ ಬೈಕ್ ಶವಯಾತ್ರೆ ಸಹ ನಡೆಸಿದ ಪ್ರತಿಭಟನಾಕಾರರು, ಬಳಿಕ ಇದಕ್ಕೆ ಡಾ.ಅಂಬೇಡ್ಕರ್ ವೃತ್ತದ ಬಳಿ ಬೆಂಕಿ ಹಚ್ಚುವ ಮೂಲಕ ರಾಜ್ಯ ಸರ್ಕಾರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. ಮೆರವಣಿಗೆಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಬಿಜೆಪಿ ರಾಜ್ಯ ಕಾರ್ಯದರ್ಶಿ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಪ್ರತಿಭಟನಾ ಕಾರರನ್ನುದ್ದೇಶಿಸಿ ಮಾತನಾಡಿ, ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಹಾಕುತ್ತಿದೆ. ನಿರಂತರ ಬೆಲೆ ಏರಿಕೆ ಮಾಡುತ್ತ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿರುವುದು ನೋಡಿದರೆ ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯಾಗಿರುವುದು ಸ್ಪಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನಗರಾಧ್ಯಕ್ಷ ಶಶಿಧರ ಹೊಸಳ್ಳಿ ಮಾತನಾಡಿ, ಜನರ ಜೇಬಿಗೆ ಕತ್ತರಿ ಹಾಕುತ್ತಿರುವ ರಾಜ್ಯ ಸರ್ಕಾರ ಹಗಲು ದರೋಡೆ, ಸುಲಿಗೆಗೆ ಇಳಿದಿದೆ. ಗ್ಯಾರಂಟಿ ಯೋಜನೆ ಜಾರಿಯ ಹೆಸರಿನಲ್ಲಿ ಮನಸ್ಸಿಗೆ ಬಂದಂತೆ ತೆರಿಗೆ ಹಾಕುತ್ತ ಜನಸಾಮಾನ್ಯರ ಮೇಲೆ ಬರೆ ಎಳೆಯುತ್ತಿದೆ. ಐದು ಗ್ಯಾರಂಟಿ ಕೊಟ್ಟು ಆರು ತರಹದ ಬೆಲೆ ಏರಿಸಿ ಇದೇ ಹಣ ಜನರಿಂದ ವಸೂಲಿ ಮಾಡುತ್ತಿದೆ. ಯಾವ ಪುರುಷಾರ್ಥಕ್ಕೆ ಸರ್ಕಾರ ನಡೆಸಲಾಗುತ್ತಿದೆ? ರಾಜ್ಯವನ್ನೇ ಆರ್ಥಿಕವಾಗಿ ಅಧೋಗತಿಗೆ ತಂದು ನಿಲ್ಲಿಸಿದ ಶ್ರೇಯ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್‌ಗೆ ಸಲ್ಲುತ್ತದೆ ಎಂದು ಕಿಡಿಕಾರಿದರು.ಬಿಜೆಪಿ ವಿಭಾಗ ಸಹ ಉಸ್ತುವಾರಿ ಈಶ್ವರಸಿಂಗ್ ಠಾಕೂರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಆದರೆ ಜನರ ಮೇಲೆ ಬೆಲೆ ಹೆಚ್ಚಳದ ಹೊರೆ ಹಾಕಲಾಗುತ್ತಿದೆ. ಸಾಲದ ಮಿತಿ 2 ಲಕ್ಷ ಕೋಟಿಗಳಿಗೆ ಏರಿದೆ. ಸರ್ಕಾರ ಆರ್ಥಿಕ ಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.
ಜೆಡಿಎಸ್ ಜಿಲ್ಲಾ ಅಧ್ಯಕ್ಷ ರಮೇಶ ಪಾಟೀಲ್ ಸೋಲಪುರ, ಪ್ರಮುಖರಾದ ಗುರುನಾಥ ಜ್ಯಾಂತಿಕರ್, ಪೀರಪ್ಪ ಯರನಳ್ಳಿ, ಕಿರಣ್ ಪಾಟೀಲ್ ಹಕ್ಯಾಳ್, ಮಾಧವ ಹಸೂರೆ, ಅರಹಂತ ಸಾವಳೆ, ಸದಾನಂದ ಜೋಶಿ, ಅಶೋಕ ಹೊಕ್ರಾಣೆ, ರಾಜೇಂದ್ರ ಪೂಜಾರಿ, ಸುರೇಶ ಮಾಶೆಟ್ಟಿ, ರಾಮಶೆಟ್ಟಿ ಪನ್ನಾಳೆ, ವೀರಣ್ಣಾ ಕಾರಬಾರಿ, ಬಸವರಾಜ ಪವಾರ್, ಸಂಜುಕುಮಾರ ಜ್ಯಾಂತೆ, ಜಗನ್ನಾಥ ಸಿರಕಟನಳ್ಳಿ, ವೀರು ದಿಗ್ವಾಲ್, ಜಗನ್ನಾಥ ಜಮಾದಾರ, ಸಂಗಮೇಶ ನಾಸಿಗಾರ, ಮಹೇಶ್ವರ ಸ್ವಾಮಿ, ಚಂದ್ರಶೇಖರ ಗಾದಾ, ಸುರೇಶ ಸಜ್ಜನ್, ಶಿವಕುಮಾರ ಸ್ವಾಮಿ, ಮಾಣಿಕಪ್ಪ ಖಾಶೆಂಪುರ, ಪ್ರಶಾಂತ ಸಿಂದೋಲ, ಗಣೇಶ ಭೋಸ್ಲೆ, ಮಹೇಶ ಪಾಲಂ, ನಿತಿನ್ ಕರ್ಪೂರ, ಸಚ್ಚಿದಾನಂದ ಚಿದ್ರೆ, ವಿರೇಶ ಸ್ವಾಮಿ, ಪ್ರಶಾಂತ ವಿಶ್ವಕರ್ಮ, ಮಹ್ಮದ್ ಅಸಾದೋದ್ದಿನ್, ಐಲಿನ್ ಜಾನ್ ಮಠಪತಿ ಇತರರಿದ್ದರು.