23 ಅಸಂಘಟಿತ ವರ್ಗಗಳ ಕಾರ್ಮಿಕರ ಪಟ್ಟಿಯಲ್ಲಿ ಛಾಯಾಗ್ರಾಹಕರು ಸೇರ್ಪಡೆ : ಸರ್ಕಾರ

| N/A | Published : Mar 15 2025, 01:07 AM IST / Updated: Mar 15 2025, 05:34 AM IST

ಸಾರಾಂಶ

23 ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಸರ್ಕಾರ ಗುರುತಿಸಿದ್ದು ಇದರಲ್ಲಿ ಛಾಯಾಗ್ರಹಕರನ್ನು ಸಹಿತ ಅಸಂಘಟಿತ ಕಾರ್ಮಿಕರಲ್ಲಿ ಸೇರ್ಪಡೆ

  ಹುಕ್ಕೇರಿ :  ಡಾ.ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಸುಮಾರು 23 ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಸರ್ಕಾರ ಗುರುತಿಸಿದ್ದು ಇದರಲ್ಲಿ ಛಾಯಾಗ್ರಹಕರನ್ನು ಸಹಿತ ಅಸಂಘಟಿತ ಕಾರ್ಮಿಕರಲ್ಲಿ ಸೇರ್ಪಡೆ ಮಾಡಿದೆ ಎಂದು ಹಿರಿಯ ಕಾರ್ಮಿಕ ನಿರೀಕ್ಷಕ ಸಂಜೀವ ಬೋಸಲೆ ಹೇಳಿದರು.

ತಾಲೂಕಿನ ಹಿಡಕಲ್ ಡ್ಯಾಮದಲ್ಲಿ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ, ತಾಲೂಕ ವೃತ್ತಿನಿರತ ಛಾಯಾಗ್ರಾಹಕರ ಸಂಘ ಹಾಗೂ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಕಾರ್ಮಿಕ ಕಾರ್ಡ್ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಯೋಜನೆಯು ಕರ್ನಾಟಕ ನಿವಾಸಿಗಳಿಗೆ ಮಾತ್ರ ಸೀಮಿತವಾಗಿದೆ. ಫಲಾನುಭವಿಯು ವಯೋ ಸಹಜ ಮರಣ, ಯಾವುದೇ ಕಾಯಿಲೆಯಿಂದ ಮರಣ, ಅಥವಾ ಅಕಾಲಿಕ ಮರಣ ಸೇರಿದಂತೆ ಇನ್ನಿತರ ಕಾರಣಗಳಿಂದ ಮರಣ ಹೊಂದಿದ್ದಲ್ಲಿ ಫಲಾನುಭವಿ ಕುಟುಂಬದವರಿಗೆ ಅಂತ್ಯಕ್ರಿಯೆ ವೆಚ್ಚಕ್ಕಾಗಿ ₹10,000 ಸಹಾಯಧನ ಸಿಗಲಿದೆ. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಅಸಂಘಟಿತ ಕಾರ್ಮಿಕರಿಗಾಗಿ ಇಂತಹ ಯೋಜನೆಗಳನ್ನು ಜಾರಿಗೊಳಿಸಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ತಾಲೂಕು ವೃತ್ತಿನಿರತ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಅಪ್ಪು ಹುಕ್ಕೇರಿ ಅಧ್ಯಕ್ಷತೆ ವಹಿಸಿದ್ದರು. ಕೆಪಿಎ ನಿರ್ದೇಶಕ ಮಲ್ಲಿಕಾರ್ಜುನ್ ಕೆ. ಆರ್ ಮಾತನಾಡಿದರು.ಅಧಿಕಾರಿ ಶಾಂತಾ ಕಾಂತಾ, ಜಿಲ್ಲಾ ಸಮಗ್ರ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಲಕ್ಷ್ಮಣ ಯಮಕನಮರಡಿ, ಸಹ ಕಾರ್ಯದರ್ಶಿ ಸುರೇಶ ರಜಪುತ, ನಿರ್ದೇಶಕರಾದ ಮಂಜುನಾಥ ಮಜತಿ, ಭೀಮಪ್ಪ ಕಮತಿ, ತಾಲೂಕು ವೃತ್ತಿನಿರತ ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ಶಿವಾನಂದ ಪಾಟೀಲ, ಖಜಾಂಜಿ ಉಮೇಶ ಕರುಗುಪ್ಪಿ, ಕಾರ್ಯದರ್ಶಿ ಬಸವರಾಜ ದಾರೋಜಿ ಮತ್ತಿತರರು ಉಪಸ್ಥಿತರಿದ್ದರು. ಸಹ ಶಿಕ್ಷಕ ಜಗನ್ನಾಥ ಕರೆನ್ನವರ ಸ್ವಾಗತಿಸಿ ನಿರೂಪಿಸಿದರು. ಸುಮಾರು 120 ಕಿಂತ ಅಧಿಕ ಸದಸ್ಯರು ತಮ್ಮ ಕಾರ್ಮಿಕ ಕಾರ್ಡ್ ನೋಂದಣಿ ಮಾಡಿಸಿದರು.