ಸಾರಾಂಶ
ಚಾಮರಾಜನಗರದ ಸತ್ಯಮಂಗಲ ರಸ್ತೆಯಲ್ಲಿರುವ ಶಿವಕುಮಾರ ಸ್ವಾಮಿ ಭವನದಲ್ಲಿ ಚಾಮರಾಜನಗರ ತಾಲೂಕು ಛಾಯಾಗ್ರಾಹಕರ ಸಂಘದ ೧೫ನೇ ವರ್ಷದ ವಾರ್ಷಿಕೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕಾರ್ಮಿಕ ಅಧಿಕಾರಿ ಸವಿತಾ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮೊಬೈಲ್ ಫೋಟೊಗಳ ಹಾವಳಿಯಿಂದ ಛಾಯಾಗ್ರಹಕರು ಸಂಕಷ್ಟಕ್ಕೆ ಒಳಗಾಗಿ, ಕೆಲವರು ವೃತ್ತಿ ತೊರೆಯುವಂತಾಗಿದೆ ಎಂದು ಜಿಲ್ಲಾ ಛಾಯಾಗ್ರಾಹಕರ ಸಂಘದ ಮಾಜಿ ಅಧ್ಯಕ್ಷ ಗಣೇಶ್ ದೀಕ್ಷಿತ್ ಅವರು ತಿಳಿಸಿದರು.ನಗರದ ಸತ್ಯಮಂಗಲ ರಸ್ತೆಯಲ್ಲಿರುವ ಶಿವಕುಮಾರ ಸ್ವಾಮಿ ಭವನದಲ್ಲಿ ನಡೆದ ಚಾಮರಾಜನಗರ ತಾಲೂಕು ಛಾಯಾಗ್ರಾಹಕರ ಸಂಘದ ೧೫ನೇ ವರ್ಷದ ವಾರ್ಷಿಕೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಛಾಯಾಗ್ರಾಹಣಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಛಾಯಾಗ್ರಾಹಣದಿಂದ ಎಷ್ಟೋ ಕುಟುಂಬಗಳು ಜೀವನ ನಡೆಸುತ್ತಿದೆ. ಇಂದು ಹಲವಾರು ಛಾಯಾಗ್ರಾಹಕರು ತಮ್ಮ ದುಡಿಮೆ ಹಣ ಹಾಕಲಾರದೇ ವೃತ್ತಿ ನಿಲ್ಲಿಸಿದ್ದಾರೆ. ಜಿಲ್ಲೆಯು ಛಾಯಾಗ್ರಾಹಣ ಕ್ಷೇತ್ರದಲ್ಲಿ ಬಹಳಷ್ಟು ಹಿಂದುಳಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಮಿಕ ಅಧಿಕಾರಿ ಸವಿತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಛಾಯಾಗ್ರಾಹಕರಿಗೆ ಕಾರ್ಮಿಕ ಇಲಾಖೆಯಿಂದ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ. ವೃತ್ತಿಯಲ್ಲಿ ಇರುವ ಛಾಯಾಗ್ರಾಹಕರು ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಇದರಿಂದ ಬಹಳಷ್ಟು ಉಪಯೋಗವಿದೆ. ಈ ಬಾರಿ ತಾಲೂಕು ಸಂಘದಿಂದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಂದಿರುವ ಸದಸ್ಯರಿಗೆ ನೋಂದಣಿ ಮಾಡಲಾಗಿದೆ. ಉಳಿದ ಸದಸ್ಯರು ಕಚೇರಿಗೆ ಬಂದು ನೋಂದಣಿ ಮಾಡಿಕೊಳ್ಳಬಹುದು ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚಾಮರಾಜನಗರ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ವ್ಯವಸ್ಥಾಪಕ ಮನೋಪ್ರದೀಪ್ ಮಾತನಾಡಿ, ಸಾರ್ವಜನಿಕರಿಗೆ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಅನುಕೂಲವಾಗುವಂತೆ ಅಂಚೆ ಇಲಾಖೆಯಲ್ಲಿ ಬ್ಯಾಂಕ್ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಬಡವರಿಗೆ, ವೃತ್ತಿಪರರಿಗೆ ಅನುಕೂಲವಾಗುವಂತೆ ವಿಮೆಗಳನ್ನು ಜಾರಿಗೆ ತಂದಿದೆ. ಛಾಯಾಗ್ರಾಹಕ ವೃತ್ತಿಯಲ್ಲಿ ಇರುವವರು ಪ್ರತಿಯೊಬ್ಬರು ವಿಮೆ ಮಾಡಿಸಿಕೊಳ್ಳಬೇಕು. ಎಂದರು.ತಾಲೂಕು ಛಾಯಾಗ್ರಹಕ ಸಂಘದ ಅಧ್ಯಕ್ಷ ಡಿ.ಸ್ವಾಮಿ ಅಮಚವಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ಪ್ರತಿಯೊಬ್ಬ ಛಾಯಾಗ್ರಾಹಕನು ಸಂಘದ ಸದಸ್ಯರಾಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾದರೆ ಸಂಘಕ್ಕೆ ಶಕ್ತಿ ಬರುತ್ತದೆ. ನಮ್ಮ ಸಂಘದ ಸದಸ್ಯರು ಸಂಘದ ಏಳಿಗೆಗೆ ದುಡಿಯುತ್ತಿದ್ದಾರೆ ಅವರಿಗೆ ಅಭಿನಂದನೆ ಎಂದರು.ಹಲವಾರು ವರ್ಷಗಳಿಂದ ಛಾಯಾಗ್ರಹಣದಲ್ಲಿ ಸೇವೆ ಸಲ್ಲಿಸಿದ ಬಿಳಿಗಿರಿ ಶ್ರೀನಿವಾಸ್, ಬದನಗುಪ್ಪೆ ಎಂ.ಎಸ್.ಮಲ್ಲಣ್ಣ, ಸಿ.ಆರ್.ಕೃಷ್ಣಕುಮಾರ್, ನಾಗರಾಜು, ತಾಳವಾಡಿ ಶಿವ, ಎಂ.ಸಿ.ಬಸವಣ್ಣ, ಸ್ವಾಮಿ (ಆಥೋನಿ), ಮತಿಹಾಸ್.ಟಿ, ಕೆ.ನಾಗರಾಜು, ಮಹದೇವನಾಯಕ, ನಾಗರಾಜು ,ಜಲೇಂದ್ರ, ನೇಸರ ನಾಗೇಂದ್ರ, ಆರ್.ಜಗದೀಶ್, ಎಲ್.ವೀರಭದ್ರಸ್ವಾಮಿ, ರಾಚನಾಯಕ, ಶಾಂತಮಲ್ಲಪ್ಪ ಹಿರಿಯ ಛಾಯಾಗ್ರಹಕರಿಗೆ ಚಾಮರಾಜನಗರ ಛಾಯಾರತ್ನ ಪ್ರಶಸ್ತಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಎಂ.ಕೆ. ಅನಂತನಾರಾಯಣ, ಉಪಾಧ್ಯಕ್ಷ ಸಂತೋಷ್‌ಕುಮಾರ್, ಕಾರ್ಯದರ್ಶಿ ಲೋಕೇಶ್ ಗಾಳಿಪುರ, ಸಹ ಕಾರ್ಯದರ್ಶಿ ಬಂಗಾರನಾಯಕ, ಖಜಾಂಚಿ ಪ್ರದೀಪ್, ಸಂಘಟನಾ ಕಾರ್ಯದರ್ಶಿ ಸ್ವಾಮಿ ಗಾಳಿಪುರ, ನಿರ್ದೇಶಕರಾದ ಮಲ್ಲು, ಮಂಜೇಶ್, ಎಂ.ಜಿ. ಶ್ರೀಕಾಂತ್, ಕೆ.ಎಂ.ಕುಮಾರ್(ಕಂಠಿ), ಎಂ.ಸಿ.ನಾಗರಾಜು, ಸತೀಶ್, ಶಿವಪ್ಪ, ಆನಂದಕುಮಾರ್.ಕೆ, ಬಾಲರಾಜು, ಮನು, ಸಿದ್ದರಾಜು, ಬಸವ ಉಪಸ್ಥಿತರಿದ್ದರು.