ಸಾರಾಂಶ
ಪ್ರಾಥಮಿಕ ಶಾಲಾ ಶಿಕ್ಷಕರ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಯ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಮಾಗಡಿವ್ಯಕ್ತಿಯನ್ನು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿಡುವಲ್ಲಿ ಕ್ರೀಡೆಯು ಪ್ರಮುಖ ಪಾತ್ರ ವಹಿಸುತ್ತದೆ. ಅದ್ದರಿಂದ ಶಿಕ್ಷಕರು ದೈಹಿಕವಾಗಿ ಸದೃಢರಾಗುವ ಮುಖೇನ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಶನಿವಾರ ಶಿಕ್ಷಕರ ದಿನಾಚರಣೆ ಅಂಗವಾಗಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಆಯೋಜಿಸಿದ್ದ 2024ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಶಿಕ್ಷಕರು ದೈಹಿಕವಾಗಿ ಶಕ್ತಿಯುತವಾಗಿದ್ದರೆ ಮಾತ್ರ ಮಕ್ಕಳಿಗೆ ಸ್ಫೂರ್ತಿದಾಯಕವಾದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಶಿಕ್ಷಕರು ಪ್ರತಿದಿನ ಲವಲವಿಕೆಯಿಂದ ಇರಬೇಕಾದರೆ ದೈಹಿಕ ಕಸರತ್ತು ಬಹಳ ಮುಖ್ಯ. ಶಿಕ್ಷಕರು ಕೇವಲ ಪಠ್ಯದ ಚಟುವಟಿಕೆಗಳಲ್ಲಿ ನಿರತರಾದರೇ ಸಾಲದು, ದೈಹಿಕವಾಗಿ ಆರೋಗ್ಯವಂತರಾಗಿರಲು ಕ್ರೀಡೆ ಅತ್ಯಾವಶ್ಯಕ ಎಂದರು.
ಒಕ್ಕಲಿಗರ ಸರ್ಕಾರಿ ನೌರರ ಸಂಘದ ತಾಲೂಕು ಅಧ್ಯಕ್ಷ ಮಲ್ಲೂರು ಲೋಕೇಶ್ ಮಾತನಾಡಿ, ಸದಾ ವಿದ್ಯಾರ್ಥಿಗಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಯೋಚಿಸುವ ಶಿಕ್ಷಕರಿಗೆ ಶಿಕ್ಷಕರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಿನ ಚೈತನ್ಯ ನೀಡುತ್ತದೆ ಎಂದರು.ಇದೇ ವೇಳೆ ತಾಲ್ಲೂಕಿನ ವಿವಿಧೆಡೆಯಿಂದ ಬಂದಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ ಹಾಗೂ ಶಿಕ್ಷಕಿಯರು 100 ಮೀಟರ್ ಓಟ, ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಗುಂಡು ಎಸೆತ, ಚಕ್ರ ಎಸೆತ ಕ್ರೀಡೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್, ಪ್ರಾಂಶುಪಾಲ ಕಾಂತರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಗುಣಶೇಖರ್, ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಮಂಜುನಾಥ್.ಎಂ, ಗೌರವಾಧ್ಯಕ್ಷ ಮಂಡಿ ನರಸಿಂಹಯ್ಯ, ಮಾಜಿ ಅಧ್ಯಕ್ಷ ಶಿವರಾಮಯ್ಯ, ಬಾಲರಾಜ್, ಬಸವರಾಜ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗಿಯಾಗಿದ್ದರು.