ಸಾರಾಂಶ
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಜ್ಯಮಟ್ಟದ ಜಂಪ್ ರೋಪ್ ಪಂದ್ಯಾವಳಿ ನಡೆಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯವಾಗಿದ್ದು, ಇದರಿಂದ ಉತ್ತಮ ಅನುಭವ, ದೇಹದಾರ್ಢ್ಯತೆ ಹೆಚ್ಚಾಗಲಿದೆ ಎಂದು ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಅಭಿಪ್ರಾಯಪಟ್ಟರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಇವರ ಸಂಯುಕ್ತಾಶ್ರಯದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಕಾಲೇಜುಗಳ ರಾಜ್ಯಮಟ್ಟದ ಜಂಪ್ ರೋಪ್ ಪಂದ್ಯಾವಳಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಾನಪದ ಕಲೆಗಳ ತವರೂರು ಚಾಮರಾಜನಗರ. ವಿವಿಧತೆಯಲ್ಲಿ ಏಕತೆ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ರಾಜ್ಯಮಟ್ಟದ ಜಂಪ್ ರೋಪ್ ಕ್ರೀಡೆ ಆಯೋಜಿಸಿರುವುದು ಹೆಮ್ಮೆಯ ವಿಷಯವಾಗಿದೆ. ಹಗ್ಗದೊಂದಿಗೆ ಕೂಡಿ ಆಡುವ ತಳಮಟ್ಟದ ಕ್ರೀಡೆಯಾಗಿದ್ದ ಜಂಪ್ ರೋಪ್ (ಸ್ಕಿಪ್ಪಿಂಗ್) ಇಂದು ಒಲಂಪಿಕ್ ಕ್ರೀಡೆಯಾಗಿ ಗುರುತಿಸಿಕೊಂಡಿದೆ. ಸರ್ಕಾರವು ಸಹ ಪ್ರೋತ್ಸಾಹ ನೀಡುತ್ತಿದೆ. ಜಂಪ್ ರೋಪ್ ಆಟದಿಂದ ವಿದ್ಯಾರ್ಥಿಗಳಲ್ಲಿ ದೈಹಿಕ, ಮಾನಸಿಕ ಸ್ವಾಸ್ತ್ಯತೆ ಉಂಟಾಗಲಿದೆ. ದೇಹ ಸದೃಢಗೊಳ್ಳಲಿದೆ. ರಾಜ್ಯಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಆಯ್ಕೆಯಾಗುವ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತರಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ಆರ್.ಮಂಜುನಾಥ್, ಜಂಪ್ ರೋಪ್ ಆಟ ಹಳೇಯದಾದರೂ ಇತ್ತೀಚೆಗೆ ಹೆಚ್ಚು ಮಹತ್ವ ಪಡೆದಿರುವ ಕ್ರೀಡೆಯಾಗಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಸೂಸಲು ಇದು ಉತ್ತಮ ವೇದಿಕೆಯಾಗಿದೆ. ಒಳಾಂಗಣ ಕ್ರೀಡೆಯಾಗಿರುವ ಜಂಪ್ ರೋಪ್ ಕ್ರೀಡೆಯಲ್ಲಿ ಪಾಲ್ಗೊಳ್ಳಲು, ಗುರಿ ಮುಟ್ಟಲು ವಿದ್ಯಾರ್ಥಿಗಳಿಗೆ ಮಾನಸಿಕ ಏಕಾಗ್ರತೆ ಮುಖ್ಯ ಎಂದರು. ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಮಾತನಾಡಿ, ಚಾಮರಾಜನಗರ ಕಲೆಗೆ ಹೆಸರಾಗಿರುವಂತೆ ಕ್ರೀಡೆಯಲ್ಲಿಯೂ ಮುಂದಿದೆ. ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಪ್ರಸನ್ನ, ಸರ್ಕಾರವು ಎಲ್ಲಾ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿವರ್ಷ ಒಂದೊಂದು ಜಿಲ್ಲೆಗೆ ಒಂದೊಂದು ಕ್ರೀಡೆಗಳನ್ನು ನೀಡುತ್ತಿದೆ. ಕಳೆದ ಬಾರಿ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ಈ ಬಾರಿ ಜಿಲ್ಲೆಗೆ ಜಂಪ್ ರೋಪ್ ಕ್ರೀಡೆ ನೀಡಿದೆ. ಕ್ರೀಡೆಯ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದರು. ಜಂಪ್ ರೋಪ್ ಕ್ರೀಡೆಯ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಜಾಕ್ ಕಾರ್ಯಕ್ರಮದಲ್ಲಿ ಕ್ರೀಡೆಯ ಮಹತ್ವದ ಬಗ್ಗೆ ಮಾತನಾಡಿದರು. ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ನಗರಸಭೆ ಅಧ್ಯಕ್ಷ ಎಸ್.ಸುರೇಶ್, ನಗರಸಭಾ ಉಪಾಧ್ಯಕ್ಷೆ ಮಮತ, ಜಿಪಂ ಸಿಇಒ ಮೋನಾರೋತ್, ಎಸ್ಪಿ ಡಾ.ಬಿ.ಟಿ. ಕವಿತ, ನಗರಸಭಾ ಸದಸ್ಯ ಎಂ.ಮಹೇಶ್, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಣ್ಣ, ಪದವಿಪೂರ್ವ ಶಿಕ್ಷಣ ಇಲಾಖೆಯ ನವೀನ್‌ಕುಮಾರ್, ಗೋಪಾಲ್ ಇದ್ದರು.