ರಾಮನಗರ: ಏಳು ಮಲೆ ಬೆಟ್ಟದ ಒಡೆಯ ಶ್ರೀ ಮಲೈಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಆರಂಭವಾಗಿದ್ದು, ಎಲ್ಲಿ ನೋಡಿದರು ಭಕ್ತಾದಿಗಳ ದಂಡೇ ಕಾಣಿಸುತ್ತಿದೆ.
ಶಿವರಾತ್ರಿ ಹಬ್ಬದ ಆರಂಭಕ್ಕೂ ಮುನ್ನ ಶ್ರೀ ಮಲೈಮಹದೇಶ್ವರ ಸ್ವಾಮಿ ದರ್ಶನಕ್ಕೆ ತೆರಳುತ್ತಿರುವವರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಬೆಂಗಳೂರು ದಕ್ಷಿಣ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮಂಡ್ಯ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಹುತೇಕ ಭಕ್ತರು ಕನಕಪುರ ತಾಲೂಕಿನ ಏಳಗಳ್ಳಿಯಿಂದ ಪಾದಯಾತ್ರೆ ಆರಂಭಿಸುವ ಪ್ರತೀತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.ಕಾಲ್ನಡಿಗೆಯಲ್ಲಿ ಸಾಗಲು ಇಲ್ಲಿಗೆ ಬರುವವರ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಆ ಮೂಲಕ ಏಳಗಳ್ಳಿ ಗ್ರಾಮ ಪಾದಯಾತ್ರೆಯ ಆರಂಭದ ಶಕ್ತಿ ಸ್ಥಳವಾಗಿ ಮಾರ್ಪಟ್ಟಿದೆ.ಮಂಗಳವಾರ ಆರಂಭವಾದ ಕಾಲ್ನಡಿಗೆಯಲ್ಲಿ ಮಕ್ಕಳು, ಹಿರಿಯರು, ಕಿರಿಯರು ಎಂಬ ಬೇದಭಾವವಿಲ್ಲದೆ ಎಲ್ಲರೂ ಅರೆಕೆ ಹೊತ್ತು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾರೆ. ಏಳಗಳ್ಳಿ ಗ್ರಾಮದ ಪುರದರಸಿ ಮುದ್ದಮ್ಮ, ಮಾರಮ್ಮ ಮತ್ತು ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಈಡುಗಾಯಿ ಒಡೆದು ಪಾದಯಾತ್ರೆ ಆರಂಭಿಸುತ್ತಾರೆ. ಮುಂದೆ ಕಾವೇರಿ ನದಿ ದಾಟುವ ಮುಖೇನ ಸಂಗಮ ವನ್ಯ ಜೀವಿ ಪ್ರದೇಶದ ಕಾನನದ ಮಣ್ಣು ರಸ್ತೆಯಲ್ಲಿ ತೆರಳಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲ್ಲಯ್ಯನಪುರ, ಕೌದಳ್ಳಿ, ವಡಕೆಹಳ್ಳ, ತಾಳು ಬೆಟ್ಟದ ಮೂಲಕ ಬೆಟ್ಟದ ಬಸವದಾರಿಯಲ್ಲಿ ಬೆಟ್ಟ ಹತ್ತಿ ಪ್ರಸಿದ್ಧ ಮಾದಯ್ಯನಗಿರಿಗೆ ತಲುಪುತ್ತಾರೆ.
ಹರಕೆ ಹೊತ್ತ ಭಕ್ತರು ಕಾಲ್ನಡಿಗೆ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಸಂಘ ಸಂಸ್ಥೆಗಳು ಬೃಹತ್ ಪೆಂಡಾಲ್‌ಗಳನ್ನು ಹಾಕಿದ್ದು ಬೆಟ್ಟಕ್ಕೆ ತೆರಳುವ ಭಕ್ತರಿಗೆ ಕುಡಿಯುವ ನೀರು, ಕಲ್ಲಂಗಡಿ ಹಣ್ಣು, ಬಿಸ್ಕೆಟ್, ಟೀ, ಪಾನಕ, ಮಜ್ಜಿಗೆ, ಕಡಲೆಕಾಯಿ, ಬಜ್ಜಿ ಬೋಂಡಾ, ಹೋಳಿಗೆ ಊಟ, ವಿವಿಧ ತಂಪು ಪಾನಿಯಗಳು, ಶೌಚಾಲಯಗಳು, ತಾತ್ಕಾಲಿಕ ಆಸ್ಪತ್ರೆಗಳು, ತಂಗಲು ವ್ಯವಸ್ಥೆಗಳನ್ನು ಮಾಡಿದ್ದಾರೆ. ಇನ್ನು ದಾರಿಯುದ್ದಕ್ಕೂ ತಮಟೆ, ಕಂಸಾಳೆ ಸದ್ದುಗಳು ಭಕ್ತರಿಗೆ ಸ್ಫೂರ್ತಿ ತುಂಬುತ್ತಿದ್ದರೆ, ಭಕ್ತರು ಪಠಿಸುತ್ತಿರುವ ಮಹದೇಶ್ವರ ಸ್ವಾಮಿಯ ಭಕ್ತಿಗೀತೆಗಳಿಗೆ ಪಾರವೇ ಇಲ್ಲದಂತಾಗಿದೆ.ಪಾದಯಾತ್ರೆ ಸಮಯದಲ್ಲಿ ಯಾವುದೇ ಅವಘಡಗಳು ನಡೆಯದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ ಬೆನ್ನಲ್ಲೆ ಜಿಲ್ಲಾಡಳಿತ ಎಚ್ಚೆತ್ತು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೖಗೊಂಡಿದೆ. ಪಾದಯಾತ್ರಿಗಳ ಕಾವೇರಿ ನದಿ ದಾಟಲು ಅನುಕೂಲವಾಗುವಂತೆ ನದಿಯಲ್ಲಿ ನೀರಿನ ಹರಿವು ಕಡಿಮೆ ಮಾಡಿದ್ದು, ಹಗ್ಗ ಹಿಡಿದು ನದಿ ದಾಟಲು ಎನ್‌ಡಿಆರ್‌ಎಫ್ ತಂಡ ನೆರವಿಗೆ ನಿಂತಿದೆ.
ಪೋಲೀಸ್ ಹಾಗೂ ಅರಣ್ಯ ಸಿಬ್ಬಂದಿಗಳ ನೇಮಕ ಮಾಡಿದೆ. ದ್ರೋಣ್ ಕ್ಯಾಮೆರಾ ಅಳವಡಿಕೆ ಮಾಡಿದ್ದಾರೆ. ಅಲ್ಲದೆ ಅರಣ್ಯ ಪ್ರದೇಶದಲ್ಲಿ ಹಗಲು ಸಮಯದಲ್ಲಿ ಮಾತ್ರ ಗುಂಪಿನಲ್ಲಿ ಪಾದಯಾತ್ರೆ ಮಾಡುವ ಬಗ್ಗೆ ಹಲವು ಸುರಕ್ಷತಾ ಸೂಚನೆಗಳ ಬಗ್ಗೆ ಬೆಂಗಳೂರು ದಕ್ಷಿಣ ಮತ್ತು ಚಾಮರಾಜನಗರ ಜಿಲ್ಲೆಗಳ ಅಧಿಕಾರಿಗಳು ಭಕ್ತಾಧಿಗಳಿಗೆ ಅರಿವು ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಕೋಟ್...............
ಕಳೆದ ಏಳು ವರ್ಷಗಳಿಂದ ರಾಮನಗರದ ರೋಟರಿ ಸಿಲ್ಕ್ ಸಿಟಿಯ ಎಲ್ಲ ಪದಾಧಿಕಾರಿಗಳ ಸಹಕಾರದಲ್ಲಿ ಮಲೈ ಮಹದೇಶ್ವರ ಬೆಟ್ಟಕ್ಕೆ ತೆರಳುವ ಪಾದಯಾತ್ರಿಗಳಿಗೆ ಮಲ್ಲಯ್ಯನಪುರದ ರಾಮಯ್ಯನವರ ಸ್ಥಳದಲ್ಲಿ ನಾಲ್ಕು ದಿನಗಳ ಕಾಲ ಅಡಿಗೆಗೆ ಹಚ್ಚಿದ ಒಲೆಯನ್ನು ಆರಿಸುವುದಿಲ್ಲ. ದಿನದ 24 ಗಂಟೆ ಟೀ, ಕಾಫಿ, ಊಟೋಪಚಾರ, ವೀಳ್ಯದೆಲೆ ಅಡಿಕೆ, ಔಷಧಿಗಳ ವಿತರಣೆ, ತಂಗಲು ವ್ಯವಸ್ಥೆ ಮಾಡುತ್ತೇವೆ.-ಎಂ.ಬಿ.ಪರಮೇಶ್, ಕಾರ್ಯದರ್ಶಿ, ರೋಟರಿ ಸಿಲ್ಕ್ ಸಿಟಿ
ಕೋಟ್.................ಶ್ರೀ ಮಲೈಮಹದೇಶ್ವರ ಬೆಟ್ಟಕ್ಕೆ ಏಳಗಳ್ಳಿಯಿಂದ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರಿಗೆ ತಾಳು ಬೆಟ್ಟದಲ್ಲಿ ಬಮೂಲ್ ನಂದಿನಿ ಗ್ರೂಪ್ ಮತ್ತು ಎಂಪಿಸಿಎಸ್‌ಗಳ ಸಹಕಾರದಲ್ಲಿ 16ನೇ ವರ್ಷದ ದಾಸೋಹ ಸೇವೆ ಮತ್ತು ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ನೀಡುತ್ತಿದ್ದೇವೆ, ಮಾದಪ್ಪನ ಸೇವೆ ಮಾಡಲು ಸಿಕ್ಕಿರುವ ಅವಕಾಶ ಪುಣ್ಯದ ಕೆಲಸವಾಗಿದೆ.
- ಎಚ್.ಎಸ್.ಹರೀಶ್ ಕುಮಾರ್, ನಿರ್ದೇಶಕರು, ಬಮೂಲ್(ಸಂಘ್ರಹ ಚಿತ್ರ)
