ಹಿಂಗಾರು ಮಳೆಗೆ ಸಂಕಷ್ಟಕ್ಕೀಡಾದ ಅನಾನಸ್‌ ಬೆಳೆಗಾರ

| Published : Oct 25 2024, 01:06 AM IST

ಹಿಂಗಾರು ಮಳೆಗೆ ಸಂಕಷ್ಟಕ್ಕೀಡಾದ ಅನಾನಸ್‌ ಬೆಳೆಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಜೂನ್, ಜುಲೈ ತಿಂಗಳಿನಲ್ಲಿ ಹೂವು ಬಿಡಲು ಔಷಧಿ ಸಿಂಪಡಣೆ ಮಾಡಲಾಗುತ್ತಿತ್ತು. ಧಾರಾಕಾರವಾಗಿ ಸುರಿದ ಮಳೆಯಿಂದ ಔಷಧಿ ಸಿಂಪಡಣೆ ಮಾಡಲು ಸಾಧ್ಯವಾದ ಕಾರಣ ಬೆಳೆ ಕುಂಠಿತವಾದರೆ, ಈಗ ಮಳೆಯಿಂದ ಹಣ್ಣುಗಳು ಕೊಳೆಯುತ್ತಿವೆ.

ಪ್ರವೀಣ ಹೆಗಡೆ ಕರ್ಜಗಿ

ಶಿರಸಿ: ಅರೆಮಲೆನಾಡು ಪ್ರದೇಶವಾದ ಬನವಾಸಿ ಭಾಗದಲ್ಲಿ ಪ್ರಸಕ್ತ ಸಾಲಿನಲ್ಲಿ ಅತಿಯಾದ ಮಳೆಯಿಂದ ಅನಾನಸ್ ಬೆಳೆ ಕುಂಠಿತವಾದರೆ, ಕಟಾವಿಗೆ ಬಂದ ಅನಾನಸ್ ಹಣ್ಣು ಹಿಂಗಾರು ಮಳೆಯಿಂದ ಕೊಳೆಯಲು ಶುರುವಾಗಿದೆ. ಉತ್ತಮ ದರವಿದ್ದರೂ ಇಳುವರಿ ಕುಸಿತವಾದುದರಿಂದ ಬೆಳೆಗಾರರಿಗೆ ಬಾಯಿಗೆ ಬಂದ ತುತ್ತು ಕೈಗೆ ಬಾರದಂತಾಗಿದೆ.ತಾಲೂಕಿನ ಬನವಾಸಿ ಹೋಬಳಿಯಲ್ಲಿ ಸುಮಾರು ೨೫೦ ಹೆಕ್ಟೇರ್ ಪ್ರದೇಶದಲ್ಲಿ ಅನಾನಸ್‌ ಬೆಳೆಯಲಾಗುತ್ತಿದೆ. ಶುಂಠಿ, ಬಾಳೆಯ ದರ ಕುಸಿತವಾದ ಸಂದರ್ಭದಲ್ಲಿ ರೈತರು ಅನಾನಸ್ ಬೆಳೆದು ಲಾಭ ಪಡೆದುಕೊಂಡಿದ್ದರು. ಆದರೆ ಈ ಬಾರಿ ಸುರಿದ ಭಾರೀ ಮಳೆಯಿಂದ ಇಳುವರಿ ಕಡಿಮೆಯಾಗಿದೆ. ಜೂನ್, ಜುಲೈ ತಿಂಗಳಿನಲ್ಲಿ ಹೂವು ಬಿಡಲು ಔಷಧಿ ಸಿಂಪಡಣೆ ಮಾಡಲಾಗುತ್ತಿತ್ತು. ಧಾರಾಕಾರವಾಗಿ ಸುರಿದ ಮಳೆಯಿಂದ ಔಷಧಿ ಸಿಂಪಡಣೆ ಮಾಡಲು ಸಾಧ್ಯವಾದ ಕಾರಣ ಬೆಳೆ ಕುಂಠಿತವಾದರೆ, ಈಗ ಮಳೆಯಿಂದ ಹಣ್ಣುಗಳು ಕೊಳೆಯುತ್ತಿವೆ. ಈವರೆಗೆ ೨ ಕೆಜಿ ತೂಗುವಷ್ಟು ಬೆಳೆದು ಪ್ರಥಮ ದರ್ಜೆಯ ಹಂತಕ್ಕೆ ಬರುತ್ತಿದ್ದ ಕಾಯಿಗಳೆಲ್ಲ ಸುಮಾರು ೧ ಕೆಜಿಯಷ್ಟು ಮಾತ್ರ ತೂಗುತ್ತಿವೆ. ಮಳೆ ಹೆಚ್ಚಾಗಿರುವುದರಿಂದ ಅನಾನಸ್ ಗಿಡಕ್ಕೆ ಔಷಧಿ ಸಿಂಪಡಣೆ ಮಾಡಲು ಆಗದಿರುವ ಕಾರಣ ಇಳುವರಿ ಇಲ್ಲ. ಹೀಗಾಗಿ ಶೇ. 30ರಷ್ಟು ಗಿಡಗಳು ಹೂವು ಬಿಟ್ಟಿರುವುದರಿಂದ ಇಳುವರಿ ಜತೆ ಅನಾನಸ್ ಕಾಯಿಯ ಗಾತ್ರವೂ ಕಡಿಮೆಯಾಗಿದೆ. ಕಳೆದ ವರ್ಷ ಪ್ರತಿ ಕೆಜಿಗೆ ಸರಾಸರಿ ₹೧೫ರಿಂದ ₹೨೦ ದರವಿತ್ತು. ಈ ಸಲ ೧ ಕೆಜಿಗೆ ₹೨೫ರಿಂದ ₹೨೮ರ ವರೆಗೆ ಧಾರಣೆ ಇದೆ. ಒಂದು ಗಿಡಕ್ಕೆ ೨ರಿಂದ ೩ ಕೆಜಿಯವರೆಗೆ ತೂಗುವ ಕಾಯಿ ಮಳೆಯಿಂದ ೧ ಕೆಜಿ ಮಾತ್ರ ತೂಗುತ್ತಿದೆ. ದರ ಉತ್ತಮವಿದ್ದು, ಬೆಳೆ ಮಾತ್ರ ಇಲ್ಲದಂತಾಗಿದೆ. ಔಷಧಿ ಸಿಂಪಡಣೆ ಮಾಡಿದ ೪೫ ದಿನಗಳ ನಂತರ ಹೂವು ಬಿಟ್ಟು ೫ ತಿಂಗಳಿಗೆ ಬೆಳೆ ಕೈ ಸೇರುತ್ತಿತ್ತು. ಮಳೆಯು ಜಾಸ್ತಿಯಾದ ಕಾರಣ ಹೂವು ಬಿಟ್ಟಿರುವುದು ತಡವಾಗಿರುವುದರಿಂದ ಕಾಯಿಯ ಗಾತ್ರ ಕುಂಠಿತವಾಗಿದೆ ಎನ್ನುತ್ತಾರೆ ಬನವಾಸಿ ಭಾಗದ ಅನಾನಸ್ ಬೆಳೆಗಾರ ಚಂದ್ರಶೇಖರ ಗೌಡ.ಕೊರೋನಾ ನಂತರ ಹಿಂದೇಟು: ನಾಡಿನಲ್ಲೇ ಗರಿಷ್ಠ ಪ್ರಮಾಣದಲ್ಲಿ ಅನಾನಸ್ ಬೆಳೆಯುವ ಪ್ರದೇಶವೆಂದು ಬನವಾಸಿ ಪ್ರಸಿದ್ಧಿ ಪಡೆದಿತ್ತು. ಈ ಭಾಗದಿಂದ ಪ್ರತಿದಿನ ೧೫ರಿಂದ ೨೦ ಲಾರಿಗಳಲ್ಲಿ ನೂರಾರು ಟನ್ ಅನಾನಸ್ ಹೊರ ರಾಜ್ಯಗಳಾದ ದೆಹಲಿ, ಮುಂಬೈ, ಪಂಜಾಬ್, ಹರಿಯಾಣ ಸೇರಿದಂತೆ ಉತ್ತರ ಭಾಗದ ಪ್ರಮುಖ ರಾಜ್ಯಗಳಿಗೆ ರವಾನೆಯಾಗುತ್ತಿತ್ತು. ಕೊರೋನಾ ವಕ್ಕರಿಸಿಕೊಂಡಾಗ ಅನಾನಸ್‌ ದರ ಇಳಿಮುಖವಾಗಿ ಮಾರುಕಟ್ಟೆ ಇಲ್ಲದೇ ಸಾವಿರಾರು ಟನ್‌ಗಳಷ್ಟು ಅನಾನಸ್ ಹಣ್ಣು ತೋಟದಲ್ಲಿಯೇ ಕೊಳೆತು ಹೋಗಿತ್ತು. ಆ ನಂತರ ಬನವಾಸಿ ಭಾಗದ ರೈತರು ಅನಾನಸ್ ಬೆಳೆಯಿಂದ ವಾಣಿಜ್ಯ ಬೆಳೆಗಳಾದ ಅಡಕೆ, ಬಾಳೆ ಬೆಳೆಯನ್ನು ಪ್ರಮುಖವಾಗಿ ಬೆಳೆಯಲು ಪ್ರಾರಂಭಿಸಿದರು. ಈ ಕಾರಣದಿಂದಲೂ ದರ ಏರಿಕೆಯಾಗಿದೆ ಎನ್ನುವುದು ರೈತರ ಅಭಿಪ್ರಾಯವಾಗಿದೆ.

ಕಡಿಮೆಯಾಗುತ್ತಿರುವ ಅನಾನಸ್ ಕ್ಷೇತ್ರಕಳೆದ ಒಂದು ದಶಕದ ಹಿಂದೆ ತಾಲೂಕಿನ ಪೂರ್ವಭಾಗದಲ್ಲಿ ಶುಂಠಿ, ಅನಾನಸ್, ಜೋಳ, ಬಾಳೆ ಬೆಳೆಯನ್ನು ಪ್ರಮುಖ ಬೆಳೆಯನ್ನಾಗಿ ನಂಬಿಕೊಂಡಿದ್ದರು. ಐದಾರು ವರ್ಷಗಳಿಂದ ಅಡಕೆ ಬೆಳೆಯನ್ನು ಪ್ರಮುಖ ಬೆಳೆಯನ್ನಾಗಿ ಬೆಳೆಯುತ್ತಿರುವುದರಿಂದ ಅನಾನಸ್ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಸದ್ಯ ೨೫೦ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಅನಾನಸ್ ಬೆಳೆಯಲಾಗುತ್ತಿದ್ದು, ಮಾರುಕಟ್ಟೆ ಹಾಗೂ ಕೂಲಿ ಕಾರ್ಮಿಕರ ಕೊರತೆಯಿಂದ ಅನಾನಸ್ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ.

ಇಳುವರಿ ಕುಂಠಿತ: ಕೊರೋನಾ ಸಂದರ್ಭದಲ್ಲಿ ಅನಾನಸ್ ಕೇಳುವವರಿಲ್ಲದ ಕಾರಣ ರೈತರು ಅನಾನಸ್ ಬೆಳೆಯಿಂದ ದೂರ ಸರಿದಿದ್ದರು. ಈಗ ಉತ್ತಮ ದರವಿದೆ. ಆದರೆ ಅಧಿಕವಾಗಿ ಮಳೆಯಾದ ಪರಿಣಾಮ ಔಷಧಿ ಹಾಕಲು ಸಾಧ್ಯವಾಗದೆ ಸರಿಯಾಗಿ ಹೂವು ಬಿಡದ ಕಾರಣ ಅನಾನಸ್ ಇಳುವರಿ ಕುಂಠಿತವಾಗಿದೆ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಗಣೇಶ ಹೆಗಡೆ ತಿಳಿಸಿದರು.