ಬಸವಣ್ಣ ಸಮಾನತೆಯ ಹರಿಕಾರ: ಸಚಿವ ಶಿವರಾಜ ತಂಗಡಗಿ

| Published : Feb 18 2024, 01:34 AM IST

ಸಾರಾಂಶ

ಬಸವಣ್ಣನವರು 12ನೇ ಶತಮಾನದಲ್ಲಿಯೇ ಸಮಾಜದಲ್ಲಿನ ಜಾತಿ ವ್ಯವಸ್ಥೆ, ಮಹಿಳಾ ಅಸಮಾನತೆ, ಮೂಢನಂಬಿಕೆಗಳ ವಿರುದ್ಧ ಕ್ರಾಂತಿಕಾರಿ ಪ್ರಯೋಗಗಳನ್ನು ಮಾಡಿದರು.

ಕೊಪ್ಪಳ: ವಿಶ್ವಗುರು ಬಸವಣ್ಣನವರು ಸಮಾನತೆಯ ಹರಿಕಾರರಾಗಿ ಸಮಾಜ ಸುಧಾರಣೆಗೆ ಶ್ರಮಿಸಿದರು. ತಾವು ರಚಿಸಿದ ವಚನಗಳಂತೆಯೇ ಆದರ್ಶವಾಗಿ ಜೀವಿಸಿದರು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.ಶನಿವಾರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣ ಸಮಾರಂಭದಲ್ಲಿ ಭಾವಚಿತ್ರ ಅನಾವರಣಗೊಳಿಸಿ ಅವರು ಮಾತನಾಡಿದರು.ಬಸವಣ್ಣನವರು 12ನೇ ಶತಮಾನದಲ್ಲಿಯೇ ಸಮಾಜದಲ್ಲಿನ ಜಾತಿ ವ್ಯವಸ್ಥೆ, ಮಹಿಳಾ ಅಸಮಾನತೆ, ಮೂಢನಂಬಿಕೆಗಳ ವಿರುದ್ಧ ಕ್ರಾಂತಿಕಾರಿ ಪ್ರಯೋಗಗಳನ್ನು ಮಾಡಿದರು. ತಾವು ರಚಿಸಿದ ಅನುಭವ ಮಂಟಪದಲ್ಲಿ ಎಲ್ಲ ಜಾತಿಯ ಶರಣರಿಗೆ, ವಚನಕಾರರಿಗೆ ಅವಕಾಶ ನೀಡಿದರು. ಮಹಿಳಾ ಸಬಲೀಕರಣ, ಸಮಾನತೆಗಾಗಿ ಧ್ವನಿ ಎತ್ತಿದರು. ಬಸವಣ್ಣನವರ ವಚನಗಳು ಹಾಗೂ ಡಾ.ಅಂಬೇಡ್ಕರ್ ಸಂವಿಧಾನದಲ್ಲಿ ಹೆಚ್ಚಿನ ವ್ಯತ್ಯಾಸವೇನಿಲ್ಲ. ಬಸವಣ್ಣನವರು ವಚನಗಳ ಮೂಲಕ ಪ್ರದಿಪಾದಿಸಿದ ವಾಸ್ತವಾಂಶಗಳನ್ನು, ಸಮಾಜ ಸುಧಾರಣಾ ಕ್ರಮಗಳಿಗೆ ಕಾನೂನಿನ ಚೌಕಟ್ಟು ಒದಗಿಸಿ ಅಂಬೇಡ್ಕರ್ ಸಂವಿಧಾನದ ಮೂಲಕ ನಮಗೆ ನೀಡಿದರು. ಬಸವಣ್ಣನವರ ಸಮಾನತೆಯ ದೃಷ್ಟಿಕೋನ, ಅವರು ಜೀವನ ನಡೆಸಿದ ರೀತಿ, ಅವರು ವಚನಗಳ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಪರಿಗಣಿಸಿ ರಾಜ್ಯ ಸರ್ಕಾರ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಇದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.ಬಸವಣ್ಣನವರು ಸೇರಿದಂತೆ ನಮ್ಮ ನಾಡಿನ ಶರಣರ ಸ್ಮರಣೆಗಾಗಿ ಕಲಬುರಗಿಯಲ್ಲಿ ವಚನ ಮಂಟಪ ನಿರ್ಮಿಸಲಾಗುತ್ತಿದೆ. ಬಸವನ ಬಾಗೇವಾಡಿಯಲ್ಲಿ ಪ್ರಾಧಿಕಾರವನ್ನು ಈಗಾಗಲೇ ರಚಿಸಲಾಗಿದ್ದು, ಕಾರ್ಯಾರಂಭಗೊಂಡಿದೆ. ವಚನ ಜಾತ್ರೆ ಕೈಗೊಳ್ಳುವ ಕುರಿತು ಚರ್ಚೆಗಳ ನಡೆದಿದೆ. ಮುಂದಿನ ದಿನಗಳಲ್ಲಿ ಅಂತಿಮ ತೀರ್ಮಾನ ತಿಳಿಸಲಾಗುವುದು ಎಂದು ಸಚಿವರು ತಿಳಿಸಿದರು.ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ರಾಜಶೇಖರ ಸಸಿಮಠ ಮಾತನಾಡಿ, ಬಸವಣ್ಣನವರು ಶ್ರಮಿಕ ವರ್ಗದ ನಾಯಕರಾಗಿದ್ದರು. ಯಾವುದೇ ಜಾತಿಯ ಶ್ರಮಜೀವಿಯನ್ನು ಅವರು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಜಾತಿ ಆಧಾರದಲ್ಲಿ ಎಂದಿಗೂ ಭೇದ ತೋರದೇ ತಮ್ಮ ಅನುಭವ ಮಂಟಪದಲ್ಲಿ ಎಲ್ಲ ಜಾತಿಯ ವಚನಕಾರರಿಗೆ ಅವಕಾಶ ನೀಡಿದರು. ಸಾರ್ವತ್ರಿಕ ಶಿಕ್ಷಣಕ್ಕೆ, ಸಮಾನತೆಯ ದೃಷ್ಟಿಯ ರಾಜಕಾರಣಕ್ಕೆ, ಮಹಿಳಾ ಸಮಾನತೆಗೆ ಆದ್ಯತೆ ನೀಡಿದರು. ಅವರು ಇಂದು ವಿಶ್ವಗುರು ಎನಿಸಿಕೊಂಡರು ಎಂದರು.ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಸಿ.ವಿ. ಜಡಿಯವರ ನಿರೂಪಿಸಿದರು. ಕಿನ್ನಾಳನ ಭಾಷಾ ಹಿರೇಮನಿ ಹಾಗೂ ಸಂಗಡಿಗರು ವಚನ ಗಾಯನ ಹಾಗೂ ನಾಡಗೀತೆ ನಡೆಸಿಕೊಟ್ಟರು.ಪೌರ ಕಾರ್ಮಿಕರಿಗೆ ಖಾಯಂ ನೇಮಕ ಪತ್ರ ವಿತರಣೆ:ಇದೇ ಸಮಾರಂಭದಲ್ಲಿ ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಪಂಗಳಲ್ಲಿ ತಾತ್ಕಾಲಿಕವಾಗಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದ ಪೌರಕಾರ್ಮಿಕರಿಗೆ ಖಾಯಂ ನೇಮಕಾತಿ ಪ್ರಮಾಣಪತ್ರ ವಿತರಿಸಲಾಯಿತು.ಜಿಲ್ಲೆಯಲ್ಲಿ ಕೊಪ್ಪಳ ನಗರಸಭೆಯ 18, ಕುಷ್ಟಗಿ ಪುರಸಭೆಯ 15, ಕಾರಟಗಿ ಪುರಸಭೆಯ 19, ಕನಕಗಿರಿ ಪಪಂ 12, ಕುಕನೂರು ಪಪಂ 8, ತಾವರಗೇರಾ ಪಪಂ 13 ಸೇರಿದಂತೆ ಒಟ್ಟು 85 ಪೌರಕಾರ್ಮಿಕರನ್ನು ಖಾಯಂಗೊಳಿಸಿ ಆದೇಶ ಹೊರಡಿಸಿದ್ದು, ಅವರಲ್ಲಿ 6 ಪೌರಕಾರ್ಮಿಕರಿಗೆ ಸಾಂಕೇತಿಕವಾಗಿ ಸಚಿವರು ಖಾಯಂ ನೇಮಕಾತಿ ಪ್ರಮಾಣಪತ್ರ ವಿತರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಳಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ, ಎಸ್ಪಿ ಯಶೋದಾ ವಂಟಿಗೋಡಿ, ಎಸಿ ಕ್ಯಾ.ಮಹೇಶ್ ಮಾಲಗಿತ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಕನ್ನಡ-ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಬಸವ ಸಮಿತಿಯ ರಾಜಶೇಖರ ಸಸಿಮಠ, ಬಸವರಾಜ ಬೆಳ್ಳುಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಪೌರ ಕಾರ್ಮಿಕರು, ಶಾಲಾ ಮಕ್ಕಳು, ಜಿಲ್ಲಾ ಬಸವ ಸಮಿತಿಯ ಸದಸ್ಯರು ಇತರರು ಉಪಸ್ಥಿತರಿದ್ದರು.