ಸಾರಾಂಶ
ಹಂಪಿಯ ತುಂಗಭದ್ರಾ ನದಿ ತಟದಲ್ಲಿ ಶನಿವಾರ ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪಿತೃಗಳಿಗೆ ತರ್ಪಣ ನೀಡಲಾಯಿತು. ಐತಿಹಾಸಿಕ ಹಂಪಿಯ ತುಂಗಭದ್ರಾ ತಟದಲ್ಲಿ ಕುಟುಂಬ ಸಮೇತರಾಗಿ ಬಂದು ಹಿರಿಯರಿಗೆ ವಸ್ತ್ರ ಸಮರ್ಪಣೆ, ತರ್ಪಣಾದಿಗಳನ್ನು ನೀಡುವುದು ಹಿಂದೂ ಧರ್ಮದ ಭಾಗವಾಗಿದೆ.
ಕನ್ನಡಪ್ರಭ ವಾರ್ತೆ ಹೊಸಪೇಟೆ
ಹಂಪಿಯ ತುಂಗಭದ್ರಾ ನದಿ ತಟದಲ್ಲಿ ಶನಿವಾರ ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪಿತೃಗಳಿಗೆ ತರ್ಪಣ ನೀಡಲಾಯಿತು.ಪ್ರತಿ ವರ್ಷ ಭಾದ್ರಪದ ಮಾಸದಲ್ಲಿ ಬರುವ ಕೃಷ್ಣಪಕ್ಷವನ್ನು ಪಿತೃಪಕ್ಷ ಎನ್ನಲಾಗುತ್ತದೆ. ಇದು ಪಿತೃಪಕ್ಷದ ಕೊನೆಯಲ್ಲಿ ಬರುವುದರಿಂದ ಸರ್ವಪಿತೃ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಅ. 15ರಿಂದ ನವರಾತ್ರಿ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಅಗಲಿದ ಪಿತೃಗಳನ್ನು ನೇರವಾಗಿ ಸ್ಮರಿಸಲು ವರ್ಷದಲ್ಲೊಮ್ಮೆ ಪಿತೃಪಕ್ಷದಲ್ಲಿ ಅಥವಾ ಮಹಾಲಯ ಅಮಾವಾಸ್ಯೆಯನ್ನು ಆಚರಿಸುವುದು ರೂಢಿ. ಆ ದಿನ, ಅಗಲಿದವರನ್ನು ಸ್ಮರಿಸಿ, ತಿಲತರ್ಪಣ, ಜಲತರ್ಪಣ, ಬಲಿ ಹಾಗೂ ಪಿಂಡ ನೀಡಿ ಸ್ಮರಿಸಲಾಗುತ್ತದೆ.
ಐತಿಹಾಸಿಕ ಹಂಪಿಯ ತುಂಗಭದ್ರಾ ತಟದಲ್ಲಿ ಕುಟುಂಬ ಸಮೇತರಾಗಿ ಬಂದು ಹಿರಿಯರಿಗೆ ವಸ್ತ್ರ ಸಮರ್ಪಣೆ, ತರ್ಪಣಾದಿಗಳನ್ನು ನೀಡುವುದು ಹಿಂದೂ ಧರ್ಮದ ಭಾಗವಾಗಿದೆ. ಹಂಪಿಯಲ್ಲಿ ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಗಳು ಹಾಗೂ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದಲೂ ಜನರು ಆಗಮಿಸಿ ಪಿತೃಗಳಿಗೆ ತರ್ಪಣ ನೀಡಿದರು. ತುಂಗಭದ್ರಾ ತಟದಲ್ಲಿ ಈ ಧಾರ್ಮಿಕ ನಂಬಿಕೆಯ ಕಾರ್ಯಕ್ಕೆ ಸ್ಥಳೀಯ ಪುರೋಹಿತರು ವ್ಯವಸ್ಥೆ ಕಲ್ಪಿಸಿದರು.