ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಈಗಿನಿಂದಲೇ ಯೋಜನೆ ರೂಪಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ತಹಸೀಲ್ದಾರ್, ಇಓಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದ ಅವರು, ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಪ್ರಸ್ತುತ ಜಿಲ್ಲೆಯಲ್ಲಿ ಅಂತಹ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಈಗಿರುವ ನೀರನ್ನು ಬಳಕೆ ಮಾಡಿಕೊಂಡಲ್ಲಿ ಏಪ್ರಿಲ್ ಅಂತ್ಯದವರೆಗೆ ಯಾವುದೇ ಸಮಸ್ಯೆ ಇಲ್ಲ. ಆದ್ಯಾಗ್ಯೂ ಮುಂದಿನ ಜುಲೈ ಅಂತ್ಯದವರೆಗೆ ಜಿಲ್ಲೆಗೆ ಬೇಕಾಗುವ ನೀರಿನ ಅವಶ್ಯಕತೆಗನುಸಾರವಾಗಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಕೆರೆಗಳಲ್ಲಿ ನೀರು ತುಂಬಿಸಲು ಪ್ರತಿ ೪೫ ದಿನಗಳಿಗೆ ೨.೫ ಟಿಎಂಸಿ ಅವಶ್ಯಕತೆ ಇದ್ದು, ಈಗಿರುವ ನೀರನ್ನು ಸದ್ಭಳಕೆ ಮಾಡಿಕೊಂಡಲ್ಲಿ ಬರುವ ಏಪ್ರಿಲ್ ಅಂತ್ಯದವರೆಗೆ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಯೋಜನೆ ರೂಪಿಸಿಕೊಂಡು ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.ಜಿಲ್ಲೆಯ ೧೫೭ ಕೆರೆಗಳ ಪೈಕಿ ೨೧ ಕೆರೆಗಳಲ್ಲಿ ಶೇ.೧ರಿಂದ ೩೦ರಷ್ಟು, ೨೮ ಕೆರೆಗಳಲ್ಲಿ ಶೇ.೩೧ ರಿಂದ ೫೦ ರಷ್ಟು, ೯೨ ಕೆರೆಗಳಲ್ಲಿ ಶೇ.೫೦ ರಿಂದ ೯೯ ರಷ್ಟು ಅಂದರೆ ೧.೬೮ ಟಿಎಂಸಿ ನೀರು ಲಭ್ಯವಿದೆ. ಈ ಕೆರೆಗಳಲ್ಲಿನ ನೀರು ವ್ಯತ್ಯಯವಾಗದಂತೆ ಹಾಗೂ ನೀರಿನ ಸದ್ಭಳಕೆಯಾಗುವಂತೆ ನೋಡಿಕೊಳ್ಳಬೇಕು. ಕೆರೆಗಳ ಸುತ್ತಲಿನ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸುವಂತೆ ತಿಳಿಸಿದರು.ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿನ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಕೆರೆಗಳಲ್ಲಿನ ನೀರು ವಿನಾಕಾರಣ ಬಳಕೆಯಾಗದಂತೆ ನೋಡಿಕೊಳ್ಳಬೇಕು. ಪ್ರತಿ ಸೋಮವಾರ ನೀರಿನ ಪ್ರಮಾಣದ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದರು. ನಾರಾಯಣಪುರ ಜಲಾಶಯದಿಂದ ೪.೩ ಹಾಗೂ ೧.೭ ಟಿಎಂಸಿ ನೀರನ್ನು ಕುಡಿಯುವ ನೀರಿಗಾಗಿ ಕಾಯ್ದಿರಿಸಲಾಗಿದೆ. ಕಾಲುವೆಗಳ ಮೂಲಕ ೧.೧ ಟಿಎಂಸಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಪಟ್ಟಣ ಪಂಚಾಯತಿಗಳಿಗೆ ಬರುವ ಜೂನ್- ಜುಲೈ ಮಾಹೆವರೆಗೆ ಕುಡಿಯುವ ನೀರು ಪೂರೈಸಲು ೧.೧೩ ಟಿಎಂಸಿ ನೀರು ಬಳಕೆಯಾಗಲಿದ್ದು, ೪.೩ ಟಿಎಂಸಿ ನೀರು ಆಲಮಟ್ಟಿ ಜಲಾಶಯದಲ್ಲಿ ಕಾಯ್ದಿರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಮುಂದಿನ ಬೇಸಿಗೆಯಲ್ಲಿ ಸಿಂದಗಿಯ ಕೆಲವು ವಾರ್ಡ್‌ಗಳಲ್ಲಿ ಮಾತ್ರ ಒಂದು ವಾರಗಳ ಕಾಲ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾದ್ಯತೆ ಇದೆ. ಈ ಸಂದರ್ಭದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾಗುತ್ತದೆ. ಕೆರೆ ತುಂಬುವ ಯೋಜನೆಯಡಿ ೪.೪ ಟಿಎಂಸಿ ನೀರು ಉಳಿದಿದೆ. ತುಬಚಿ-ಬಬಲೇಶ್ವರ ನೀರಾವರಿ ಯೋಜನೆಯಲ್ಲಿ ೦.೫ ಟಿಎಂಸಿ ನೀರು ಕಾಯ್ದಿರಿಸಲಾಗಿತ್ತು. ಆದರೆ ೧.೬ ಟಿಎಂಸಿ ನೀರು ಹೆಚ್ಚುವರಿಯಾಗಿ ಬಳಕೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಜಿಪಂ ಸಿಇಒ ರಿಷಿ ಆನಂದ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಬದ್ರೂದ್ದಿನ ಸೌದಾಗರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.