ಸಾರಾಂಶ
ಬೇಲೂರು : ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಹಗರಣ ಮುಂದಿಟ್ಟುಕೊಂಡು ಜೆಡಿಎಸ್ ಪಕ್ಷವನ್ನು ಮುಗಿಸಲು ಕಾಂಗ್ರೆಸ್ ಪಕ್ಷ ಹೊಂಚು ಹಾಕುತ್ತಿದೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ತೊ.ಚ ಅನಂತಸುಬ್ಬರಾವ್ ಆರೋಪಿಸಿದರು,
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ಹಗರಣದಲ್ಲಿ ಕಾರು ಚಾಲಕ ಕಾರ್ತಿಕ್, ಬೇಲೂರು ತಾಲೂಕಿನ ವಿನಯಗೌಡ, ಚೇತನ್‌ಗೆ ನ್ಯಾಯಾಲಯ ಜಾಮೀನು ನಿರಾಕರಿದ್ದರೂ ಅವರನ್ನು ಎಸ್‌ಐಟಿ ಸಂಸ್ಥೆ ವಶಕ್ಕೆ ಪಡೆಯುತ್ತಿಲ್ಲ, ಕೇವಲ ಜೆಡಿಎಸ್ ಪಕ್ಷವನ್ನೇ ಗುರಿಯಾಗಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಡಿ.ಕೆ.ಸುರೇಶ್ ವಿರುದ್ಧ ಸ್ಪರ್ಧಿಸಿದ್ದು ನಮ್ಮ ಪಕ್ಷವನ್ನು ಬಲಹೀನಗೊಳಿಸಲು ಪೆನ್‌ಡ್ರೈವ್ ಹಂಚಿಕೆ ಮಾಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ’ ಎಂದು ಕಿಡಿಕಾರಿದರು.
‘ಯಾವುದೇ ದಾಖಲೆ ಇಲ್ಲದೇ ಇದ್ದರೂ ಎಸ್‌ಐಟಿ ರೇವಣ್ಣ ಅವರನ್ನು ಬಂಧಿಸಿದ ಪರಿಣಾಮ ಜೆಡಿಎಸ್ ಕಾರ್ಯಕರ್ತರ ಶಕ್ತಿ ಕುಗ್ಗಿ ಪಕ್ಷ ಕುಸಿಯುತ್ತದೆ ಎಂದು ಭಾವಿಸಿದ್ದಾರೆ. ಆದರೆ ಹಗರಣದ ತಿರುವನ್ನು ಕರ್ನಾಟಕದ ಜನತೆ ನೋಡಿದೆ, ಕಾನೂನಿಗೆ ಎಲ್ಲರೂ ಒಂದೇ ಆಗಿದ್ದು ಪ್ರಜ್ವಲ್ ಭಾರತಕ್ಕೆ ಬಂದು ತನಿಖೆಗೆ ಸ್ಪಂದಿಸಬೇಕು ಎಂದು ಹೈಕಮಾಂಡ್ ಹೇಳಿದೆ, ಶಿವಲಿಂಗೇಗೌಡ ಮಂತ್ರಿಯಾಗಬೇಕೆಂದು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರನ್ನು ಓಲೈಕೆ ಮಾಡಲು ಮಾತನಾಡುತ್ತಿದ್ದಾರೆ, ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ಸಿಬಿಐಗೆ ವಹಿಸಬೇಕೆಂಬುದು ನಮ್ಮ ಅಗ್ರಹವಾಗಿದೆ’ ಎಂದು ಹೇಳಿದರು.
ಜೆಡಿಎಸ್ ಮುಖಂಡ ಲೋಕಪ್ಪಗೌಡ ಮಾತನಾಡಿ, ‘ಜೂ.3 ರಂದು ನಡೆಯಲಿರುವ ದಕ್ಷಿಣ ಪದವಿ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮೈತ್ರಿ ಅಭ್ಯರ್ಥಿ ವಿವೇಕಾನಂದ ಅಭ್ಯರ್ಥಿಯಾಗಿದ್ದಾರೆ. ಒಟ್ಟು ನಾಲ್ಕು ಜಿಲ್ಲೆ ಈ ಚುನಾವಣೆಗೆ ಸೀಮಿತವಾಗಿದ್ದು ಹಾಸನ ಜಿಲ್ಲೆಯಲ್ಲಿ ಮೂರು ಸಾವಿರ ಶಿಕ್ಷಕ ಮತದಾರರು, ಬೇಲೂರು ತಾಲೂಕಿನಲ್ಲಿ 450 ಇದ್ದಾರೆ. ಅದರಲ್ಲಿ 250 ಶಿಕ್ಷಕ ಮತದಾರರು ಸ್ಥಳೀಯರಿದ್ದು ಹಾಸನ ಜಿಲ್ಲೆಯಲ್ಲಿ ನಮ್ಮ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ. ಪೆನ್‌ಡ್ರೈವ್ ಹಗರಣ ಶಿಕ್ಷಕರ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಜೆಡಿಎಸ್ ಪಕ್ಷ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ, ಅದನ್ನು ಮನಗಂಡು ಮತದಾರರು ನಮ್ಮ ಅಭ್ಯರ್ಥಿ ಗೆಲುವಿಗೆ ಸಹಕರಿಸಲಿದ್ದಾರೆ’ ಎಂದರು.
ಜಿಲ್ಲಾ ಪಂಚಾಯತಿ ಮಾಜಿ ಜಿಲ್ಲಾಧ್ಯಕ್ಷ ಚಂದ್ರೆಗೌಡ, ತಾಲೂಕು ಜೆಡಿಎಸ್ ಪ್ರದಾನ ಕಾರ್ಯದರ್ಶಿ ಸಿ.ಎಚ್.ಮಹೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಅದ್ಧೂರಿ ಕುಮಾರ್, ತಾಲೂಕು ಪಂಚಾಯತಿ ಮಾಜಿ ಸದಸ್ಯ ಬೆಲ್ಲೇನಹಳ್ಳಿ ರವಿಕುಮಾರ್ ಇದ್ದರು.
ದೇವರಾಜೇಗೌಡ ನ್ಯಾಯಾಂಗ ಬಂಧನ ಮುಂದುವರಿಕೆ
ಹಾಸನ: ಅತ್ಯಾಚಾರ ಆರೋಪ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಜೂ.7 ವರೆಗೆ ಮುಂದುವರಿಸಲಾಗಿದೆ.ದೇವರಾಜೇಗೌಡ ನ್ಯಾಯಾಂಗ ಬಂಧನದ ಅವಧಿ ಶುಕ್ರವಾರ ಮುಗಿದ ಹಿನ್ನೆಲೆಯಲ್ಲಿ ಪೊಲೀಸರು ದೇವರಾಜೇಗೌಡರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಜೂ.7ರ ವರೆಗೆ ಮತ್ತೆ 14 ದಿನ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಹಾಸನ ಎರಡನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.ಇದೇ 28ಕ್ಕೆ ದೇವರಾಜೇಗೌಡರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.