53 ಟಿಎಂಸಿ ಬದಲಿಗೆ 65 ಟಿಎಂಸಿ ನೀರು ಉಳಿಸಲು ಪ್ಲಾನ್‌!

| Published : Aug 14 2024, 01:02 AM IST

ಸಾರಾಂಶ

ಜಲಾಶಯದ ಹೊರ ಹರಿವಿನ ವೇಳೆಯಲ್ಲೇ ಜಲಾಶಯದ ಕ್ರಸ್ಟ್‌ ಗೇಟ್‌ 19ಕ್ಕೆ ಸ್ಟಾಪ್‌ ಲಾಗ್ ಗೇಟ್‌ ಅಳವಡಿಸುವ ಸೂತ್ರ ಹೆಣೆಯಲಾಗಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ 65 ಟಿಎಂಸಿ ನೀರು ಉಳಿಸಲು ಪರಿಣಿತ ಕನ್ನಯ್ಯ ನಾಯ್ಡು ಸಲಹೆ ಮೇರೆಗೆ ಮೂರು ರಾಜ್ಯಗಳ ತಜ್ಞರು ಕಾರ್ಯಪ್ರವೃತ್ತರಾಗಿದ್ದಾರೆ. ಜಲಾಶಯದ ಹೊರ ಹರಿವಿನ (ಪ್ರವಾಹ) ವೇಳೆಯಲ್ಲೇ ಜಲಾಶಯದ ಕ್ರಸ್ಟ್‌ ಗೇಟ್‌ 19ಕ್ಕೆ ಸ್ಟಾಪ್‌ ಲಾಗ್ ಗೇಟ್‌ ಅಳವಡಿಸುವ ಸೂತ್ರ ಹೆಣೆಯಲಾಗಿದೆ. ಇದರಿಂದ 53 ಟಿಎಂಸಿ ಬದಲಿಗೆ ಜಲಾಶಯದಲ್ಲಿ 65 ಟಿಎಂಸಿ ನೀರು ಉಳಿಯಲಿದೆ. ಆಗ ಜಲಾಶಯ ನೆಚ್ಚಿರುವ ರೈತರು ನಿರಾಳರಾಗಲಿದ್ದಾರೆ.

ಆರಂಭದಲ್ಲಿ 5 ಅಡಿ ಎತ್ತರದ ಒಂದು ಪೀಸ್‌ ಅನ್ನು 1625 ಅಡಿಗೆ (76.48 ಟಿಎಂಸಿ) ಅಳವಡಿಕೆ ಮಾಡಲು ಪರಿಣಿತ ಕನ್ನಯ್ಯ ನಾಯ್ಡು ಅವರು ಸಲಹೆ ನೀಡಿದ್ದಾರೆ. ಇದಕ್ಕಾಗಿ ಈಗಾಗಲೇ ತಾಲೀಮು ನಡೆದಿದೆ. ಈ ಪ್ರಯೋಗ ಯಶಸ್ವಿಯಾದರೆ, ಜಲಾಶಯದಲ್ಲಿ 76.48 ಟಿಎಂಸಿ ನೀರು ಸಿಗಲಿದೆ. ಆಗ ಮೂರು ರಾಜ್ಯಗಳಿಗೂ ಕುಡಿಯುವ ನೀರು ಹಾಗೂ ಎರಡನೇ ಬೆಳೆಗೂ ಸಮಸ್ಯೆ ಉಂಟಾಗುವುದಿಲ್ಲ. ಈ ಪ್ರಯತ್ನ ಕಷ್ಟ ಸಾಧ್ಯ ಎಂದೇ ಎಣಿಕೆ ಮಾಡಲಾಗಿದ್ದು, ಪ್ರಯೋಗ ನಡೆಸಲು ಸಿದ್ಧತೆ ನಡೆದಿದೆ. ಈ ಪ್ರಯೋಗ ಯಶಸ್ವಿ ಆದರೆ, ರಾಜ್ಯದ 10 ಲಕ್ಷ ಎಕರೆ ಬೆಳೆ ಸೇರಿ ಮೂರು ರಾಜ್ಯಗಳ 13 ಲಕ್ಷ ಎಕರೆಗೆ ನೀರು ಸಿಗಲಿದೆ

65 ಟಿಎಂಸಿ ನೀರು ಉಳಿಸಲು ಪ್ಲಾನ್‌

ಜಲಾಶಯ ಗೇಟ್‌ಗಳ ವಿನ್ಯಾಸ ತಜ್ಞರೂ ಆಗಿರುವ ಕನ್ನಯ್ಯ ನಾಯ್ಡು ಜಲಾಶಯದ ನೀರು 1621 ಅಡಿಗೆ (64.16 ಟಿ.ಎಂ.ಸಿ) ಇಳಿದಾಗ ಸ್ಟಾಪ್‌ ಲಾಗ್ ಗೇಟ್‌ ಅಳವಡಿಸುವ ಪ್ಲಾನ್‌ ರೂಪಿಸಿದ್ದಾರೆ. ಈ ಸೂತ್ರ ಯಶಸ್ವಿ ಆಗುವ ವಿಶ್ವಾಸದಲ್ಲೂ ಅವರಿದ್ದಾರೆ. ಸ್ವತಃ ತಮ್ಮ ನೇತೃತ್ವದ ತಂಡದ ಜೊತೆಗೆ ಸುದೀರ್ಘ ಚರ್ಚೆ ನಡೆಸಿರುವ ಅವರು, ಜಲಾಶಯದಲ್ಲಿ 53 ಟಿಎಂಸಿ ನೀರು ಉಳಿಸುವ ಬದಲಿಗೆ 65 ಟಿಎಂಸಿ ನೀರು ಉಳಿಸೋಣ. ಈ ಮೂಲಕ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ರೈತರಿಗೆ ಅನುಕೂಲ ಮಾಡೋಣ. ಹರಿಯುವ ನೀರಿನಲ್ಲೇ ಈ ಕಾರ್ಯ ಸಾಧಿಸಿದರೆ, ಖಂಡಿತ ಜಲಾಶಯದಲ್ಲಿ 65 ಟಿಎಂಸಿ ನೀರು ಲಭ್ಯವಾಗಲಿದೆ ಎಂದು ನೀಲನಕ್ಷೆ ತಯಾರಿಸಿ ತುಂಗಭದ್ರಾ ಮಂಡಳಿಗೂ ವಿವರಣೆ ನೀಡಿದ್ದಾರೆ.

ಜಲಾಶಯದಲ್ಲಿ 65 ಟಿಎಂಸಿ ನೀರು ಉಳಿಸಲು ಈಗಾಗಲೇ ಅಧ್ಯಯನ ನಡೆಸಿರುವ ಅವರು, ಸ್ವತಃ ನೀರಿನ ರಭಸವನ್ನು ಮಾಪನ ಮಾಡಿದ್ದಾರೆ. ಜಲಾಶಯದಲ್ಲಿ ಒಂದು ಸುತ್ತು ಹಾಕಿರುವ ಅವರು, ಮುಳುಗು ತಜ್ಞರೊಂದಿಗೂ ಚರ್ಚಿಸಿದ್ದಾರೆ. ಈ ಕುರಿತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೂ ಚರ್ಚಿಸಿದ್ದು, ಮೂರು ರಾಜ್ಯಗಳ ಸಚಿವರ ಒಪ್ಪಿಗೆಯೂ ಪಡೆದಿದ್ದಾರೆ. ಇನ್ನು ತುಂಗಭದ್ರಾ ಮಂಡಳಿ, ಕೇಂದ್ರ ಜಲ ಆಯೋಗದ ಜತೆಗೂ ಚರ್ಚಿಸಿದ್ದಾರೆ. ಈ ಕಾರ್ಯಕ್ಕೆ ಗ್ರೀನ್‌ ಸಿಗ್ನಲ್‌ ದೊರೆತರೆ, ಸ್ಟಾಪ್‌ ಲಾಗ್ ಗೇಟ್‌ ಅಳವಡಿಕೆ ಕಾರ್ಯ ಪೂರ್ಣಗೊಳಿಸಲು ಹೊಸಪೇಟೆಯ ನಾರಾಯಣ ಎಂಜಿನಿಯರಿಂಗ್‌ ವರ್ಕ್ಸ್‌ ಹಾಗೂ ಕೊಪ್ಪಳದ ಹೊಸಹಳ್ಳಿಯ ಹಿಂದೂಸ್ತಾನ ಎಂಜಿನಿಯರಿಂಗ್‌ನ ತಂಡವೂ ಸಾಥ್‌ ನೀಡಲಿದೆ.

16 ಎಂಎಂ ದಪ್ಪ

ತುಂಗಭದ್ರಾ ಜಲಾಶಯದಲ್ಲಿ ಹೊರ ಹರವಿನ ರಭಸದಲ್ಲೇ ಕಳಚಿ ಬಿದ್ದಿರುವ ಗೇಟ್‌ ನಂಬರ್‌ 19ಕ್ಕೆ ಸ್ಟಾಪ್‌ ಲಾಗ್ ಗೇಟ್‌ ನಿರ್ಮಾಣ ಮಾಡಲಾಗುತ್ತಿದೆ. ನಾರಾಯಣ ಎಂಜಿನಿಯರಿಂಗ್‌ ವರ್ಕ್ಸ್‌, ಹಿಂದೂಸ್ತಾನ್ ಎಂಜಿನಿಯರಿಂಗ್ಸ್‌ನಲ್ಲಿ 60 ಅಡಿ ಅಗಲ, 20 ಅಡಿ ಎತ್ತರದ ಸ್ಟಾಪ್‌ ಲಾಗ್ ಗೇಟ್‌ ನಿರ್ಮಾಣಕ್ಕೆ ಭರದ ಸಿದ್ಧತೆಯೂ ನಡೆದಿದೆ. 5 ಅಡಿ ಎತ್ತರದ 16 ಎಂಎಂ ದಪ್ಪ ಇರುವ 8 ಪೀಸ್‌ ಗೇಟ್‌ಗಳನ್ನು ತಯಾರಿಸಲಾಗುತ್ತಿದೆ. ಸ್ಟಾಪ್‌ ಲಾಗ್‌ ಗೇಟ್‌ಗೆ 5 ಅಡಿ ಎತ್ತರದ ನಾಲ್ಕು ಪೀಸ್‌ಗಳನ್ನು ಅಳವಡಿಕೆ ಮಾಡಿದರೆ ಸಾಕು, ಆದರೆ, ಪ್ರಾಯೋಗಿಕವಾಗಿ ಅಳವಡಿಕೆ ಮಾಡಲು ಇನ್ನೂ ನಾಲ್ಕು ಪೀಸ್‌ಗಳನ್ನು ಹೆಚ್ಚುವರಿಯಾಗಿ ತಯಾರು ಮಾಡಲಾಗುತ್ತಿದೆ.

ನಾರಾಯಣ ಎಂಜಿನಿಯರಿಂಗ್‌ ವರ್ಕ್ಸ್‌ ಆಲಮಟ್ಟಿ, ಕೆಆರ್‌ಎಸ್‌ನಲ್ಲೂ ಗೇಟ್‌ಗಳ ತಯಾರಿಕೆ ಕೆಲಸ ಮಾಡಿದ ಅನುಭವ ಹೊಂದಿದೆ. ಇನ್ನೂ ಹಿಂದೂಸ್ತಾನ್ ಎಂಜಿನಿಯರಿಂಗ್‌ ಚೆನ್ನೈ, ಕೋಲ್ಕತ್ತಾ ಸೇರಿದಂತೆ ವಿವಿಧೆಡೆ ಡ್ಯಾಂಗಳಿಗೆ ಗೇಟ್‌ಗಳನ್ನು ಅಳವಡಿಕೆ ಮಾಡಿದ ಅನುಭವ ಹೊಂದಿದೆ.

ಈಗ ಕಳಚಿ ಬಿದ್ದಿರುವ ಕ್ರಸ್ಟ್‌ ಗೇಟ್‌ ನಂಬರ್ 19ರ ಒಟ್ಟು ತೂಕ 48 ಟನ್‌ ಆಗಿದ್ದು, 50 ಟನ್‌ ಮೀರಿದ ಸ್ಟಾಪ್‌ ಲಾಗ್‌ ಗೇಟ್‌ ನಿರ್ಮಾಣ ಮಾಡಲು ತಜ್ಞರು ನಿರ್ಧರಿಸಿದ್ದಾರೆ. ಇದಕ್ಕಾಗಿ ಕಾರ್ಯವೂ ಭರದಿಂದ ಸಾಗಿದೆ.

50 ಟಿಎಂಸಿ ನೀರು ಬಿಟ್ಟ ಬಳಿಕ ಅಳವಡಿಕೆ

ಇನ್ನೂ ಪ್ಲಾನ್‌ ಬಿ ಪ್ರಕಾರ ಜಲಾಶಯದಿಂದ 50 ಟಿಎಂಸಿ ನೀರು ಬಿಟ್ಟ ಬಳಿಕವೇ ಸ್ಟಾಪ್‌ ಲಾಗ್‌ ಗೇಟ್‌ ಅಳವಡಿಸುವ ಕಾರ್ಯದ ಬಗ್ಗೆಯೂ ಚರ್ಚಿಸಲಾಗಿದೆ. ಆದರೆ, ಇದಕ್ಕಿಂತಲೂ 65 ಟಿಎಂಸಿ ನೀರು ಉಳಿಸುವುದರಲೇ ಈಗ ತಜ್ಞರು ಚಿತ್ತ ಹರಿಸಿದ್ದಾರೆ. ಪರಿಣತ ಕನ್ನಯ್ಯ ನಾಯ್ಡು ಅವರು ಈ ಕುರಿತು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಒ.ಆ‌ರ್.ಕೆ. ರೆಡ್ಡಿ, ಇನ್ನೊಬ್ಬ ತಜ್ಞ ಟಿವಿಎನ್ ರತ್ನಕುಮಾ‌ರ್, ನೀರಾವರಿ ಇಲಾಖೆ ಕಾರ್ಯದರ್ಶಿ ಸಾಯಿ ಪ್ರಸಾದ್ ಹಾಗೂ ರಾಜ್ಯದ ನೀರಾವರಿ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ ಕುಲಕರ್ಣಿ ಜತೆಗೂ ಚರ್ಚಿಸಿದ್ದಾರೆ.

90 ಟಿಎಂಸಿ ನೀರು ಸಂಗ್ರಹ

ಜಲಾಶಯದಿಂದ ಈಗಾಗಲೇ 15 ಟಿಎಂಸಿ ನೀರು ಹರಿಸಲಾಗಿದೆ. ಈಗ ಜಲಾಶಯದ ನೀರಿನ ಮಟ್ಟ 1629.01 ಅಡಿ ಇದ್ದು, 90.383 ಟಿಎಂಸಿ ನೀರು ಸಂಗ್ರಹ ಇದೆ. ಜಲಾಶಯದಿಂದ ನದಿಗೆ 1,09, 506 ಕ್ಯುಸೆಕ್‌ ನೀರು ಹರಿಬಿಡಲಾಗುತ್ತಿದೆ. 24 ಗೇಟ್‌ಗಳನ್ನು 2.5 ಅಡಿ ಎತ್ತರಿಸಿ ಮತ್ತು 4 ಗೇಟ್‌ಗಳನ್ನು 1.5 ಅಡಿ ಎತ್ತರಿಸಿ ಜಲಾಶಯಕ್ಕೆ ನೀರು ಹರಿಯಬಿಡಲಾಗುತ್ತಿದೆ. ಇನ್ನೂ ಕಳಚಿ ಬಿದ್ದಿರುವ 19ನೇ ಗೇಟ್‌ನಿಂದಲೂ 35 ಸಾವಿರ ಕ್ಯುಸೆಕ್ ನೀರು ನದಿ ಒಡಲು ಸೇರುತ್ತಿದೆ.ಗೇಟ್ ಅಳವಡಿಕೆಗೆ ಸಿದ್ಧತೆ

ದೇವರ ಮೇಲೆ ಭಾರ ಹಾಕಿ ಜಲಾಶಯದಲ್ಲಿ ಸ್ಟಾಪ್‌ ಲಾಗ್ ಗೇಟ್ ಅಳವಡಿಕೆ ಮಾಡಲಾಗುವುದು. ಇದರಿಂದ 65 ಟಿಎಂಸಿ ನೀರು ಜಲಾಶಯದಲ್ಲಿ ಉಳಿಸಲು ಪ್ರಯತ್ನಿಸಲಾಗುವುದು. ನೀರಿನ ಹರಿವು, ಅಂದರೆ ಪ್ರವಾಹದಲ್ಲೇ ಗೇಟ್‌ ಅಳವಡಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಪ್ಲಾನ್‌ ಈಗಾಗಲೇ ನೀಡಿರುವೆ. ಮೂರು ಕಡೆ ಚರ್ಚೆಯಾಗಿ ಒಪ್ಪಿಗೆ ದೊರೆಯಲಿದೆ. ಆಗ ನಾವು ಕೆಲಸ ಶುರು ಮಾಡುತ್ತೇವೆ.

ಕನ್ನಯ್ಯ ನಾಯ್ಡು, ಗೇಟ್‌ ಅಳವಡಿಕೆ ತಜ್ಞ.