ಸಾರಾಂಶ
ರಾಜಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಾಸೋತ್ಸವದ ಅಂಗವಾಗಿ ನೃತ್ಯ ಉತ್ಸವ ನಡೆಯಿತು. ಪರ್‍ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿಯ ಕೃಷ್ಣ ಮಠದ ಸಾವಿರಾರು ವರ್ಷಗಳ ಇತಿಹಾಸ, ಮಾಹಿತಿಗಳನ್ನು ಪ್ರವಾಸಿಗರಿಗೆ ನೀಡುವುದಕ್ಕಾಗಿ ಗೀತಾ ಮಂದಿರದಲ್ಲಿ ಪ್ಲಾನಿಟೋರಿಯಂ ಪ್ರಾರಂಭಿಸಲಾಗಿದೆ ಎಂದು ಪರ್‍ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.ಶ್ರೀಗಳು ಭಾನುವಾರ ರಾಜಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಾಸೋತ್ಸವದ ಅಂಗವಾಗಿ ನೃತ್ಯ ಉತ್ಸವವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.ಉಡುಪಿಯಲ್ಲಿ ಬಾಲಕೃಷ್ಣ ನೆಲೆಸಿದ್ದು, ಆತ ಉತ್ಸವ ಪ್ರಿಯನಾಗಿದ್ದಾನೆ. ಹೀಗಾಗಿ ಮಕ್ಕಳಿಗೆ ಆಟಿಕೆಗಳನ್ನು ನೀಡುವಂತೆ ಪರ್ಯಾಯ ಕಾಲದಲ್ಲಿ ಆತನಿಗೆ ಚಿನ್ನ ಮತ್ತು ಬೆಳ್ಳಿಯ ರಥ, ಪಲ್ಲಕಿಗಳನ್ನು ಸ್ವಾಮೀಜಿಗಳು ಸಮರ್ಪಣೆ ಮಾಡುವ ಪದ್ಧತಿ ಇದೆ. ಈ ಬಾರಿ ಚಿನ್ನದ ಪಾರ್ಥಸಾರಥಿ ರಥವನ್ನು ಸಮರ್ಪಿಸುವ ಸಂಕಲ್ಪ ಮಾಡಿದ್ದೇವೆ ಎಂದರು.ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಮತ್ತು ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.ಶಾಸಕರಾದ ಯಶ್ಪಾಲ್ ಸುವರ್ಣ ಮತ್ತು ಗುರ್ಮೆ ಸುರೇಶ್ ಶೆಟ್ಟಿ, ಉದ್ಯಮಿಗಳಾದ ಬಂಜಾರ ಪ್ರಕಾಶ್ ಶೆಟ್ಟಿ, ಮನೋಹರ ಶೆಟ್ಟಿ ಮತ್ತು ವಾಸುದೇವ ಶೆಟ್ಟಿ ಕಾಪು, ಹಿರಿಯ ವಕೀಲ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಶಾಸಕ ರಘುಪತಿ ಭಟ್, ಆಹಾರ ತಜ್ಞೆ ಪ್ರೇಮಾ ಎಚ್.ಎಸ್., ರತ್ನಾಕರ ಇಂದ್ರಾಳಿ, ಉದಯ ಕುಮಾರ್ ಶೆಟ್ಟಿ, ಹರೀಶ್ ಮಧ್ಯಸ್ಥ, ಶ್ರೀವತ್ಸ ಆಚಾರ್, ಶಶಿಕುಮಾರ್ ತಮ್ಮಯ್ಯ, ಕ್ರಿಕೆಟಿಗ ವಿಜಯ್ ಭಾರಧ್ವಾಜ್, ಕೆ. ಎನ್. ರಾವೇಂದ್ರ ರಾವ್ ಮೊದಲಾದವರಿದ್ದರು.ರಮೇಶ್ ಭಟ್ ಸ್ವಾಗತಿಸಿ, ಗೋಪಾಲಾಚಾರ್ಯ ನಿರೂಪಿಸಿದರು.