ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಪ್ಲಾಸ್ಟಿಕ್ ಬಳಕೆಯಿಂದ ಸಕಲ ಜೀವರಾಶಿಗೆ ಅಪಾಯ ತಪ್ಪಿದಲ್ಲ. ಇಷ್ಟೆಲ್ಲಾ ಸಮಸ್ಯೆಯಿದ್ದರೂ ಇದನ್ನ ಏಕೆ ಉಪಯೋಗಿಸುತ್ತೇದ್ದೇವೆ. ಇದನ್ನ ಕಾಲಕ್ರಮೇಣ ಕಡಿಮೆ ಮಾಡುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡುವಂತೆ ಸರ್ಕಾರಿ ಕಲಾ ಕಾಲೇಜು ವಿಶ್ರಾಂತ ಪ್ರಾಂಶುಪಾಲ ಡಿ.ಜಿ. ಕೃಷ್ಣೇಗೌಡ ಸಲಹೆ ನೀಡಿದರು. ನಗರದ ಸಾಲಗಾಮೆ ರಸ್ತೆ ಬಳಿ ಇರುವ ಸರ್ಕಾರಿ ವಿಜ್ಞಾನ ಕಾಲೇಜು ಸ್ವಾಯತ್ತ ಸಭಾಂಗಣದಲ್ಲಿ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಹಾಗೂ ಸರ್ಕಾರಿ ಗೃಹ ವಿಜ್ಞಾನ ಕಾಲೇಜು ಗೃಹವಿಜ್ಞಾನ ವಿಭಾಗ ಇವುಗಳ ಸಹಯೋಗದಲ್ಲಿ ಶುಕ್ರವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಕನ್ನಡದಲ್ಲಿ ವಿಜ್ಞಾನ ಸಂವಹನ ಮಾಲಿಕೆಯಡಿ ಜೀವ ಸಂಕುಲ ಮತ್ತು ಪ್ಲಾಸ್ಟಿಕ್ ಸಂಕಟ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.ಈ ಭೂಮಿ ಮೇಲೆ ಅತೀ ಹೆಚ್ಚು ಮಾಲಿನ್ಯ ಉಂಟು ಮಾಡಿರುವುದು ಈ ಪ್ಲಾಸ್ಟಿಕ್. ೧೯೭೩ರ ವರೆಗೆ ಈ ಪ್ಲಾಸ್ಟಿಕ್ ನಿಂದ ಸಮಸ್ಯೆ ಆಗಿರಲಿಲ್ಲ. ನಂತರದಲ್ಲಿ ಸಮಸ್ಯೆ ಆಗಲು ಪ್ರಾರಂಭಿಸಿತು. ಕೆಲ ಹೊರ ದೇಶಗಳಲ್ಲಿ ಅನೇಕ ಸಮಸ್ಯೆಗಳು ಹೆಚ್ಚು ಕಂಡು ಬಂದಿತು. ಪ್ಲಾಸ್ಟಿಕ್ ನಿಂದ ಸಕಲ ಜೀವ ರಾಶಿಗೆ ಅಪಾಯ ತಪ್ಪಿದಲ್ಲ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಇದನ್ನ ಏಕೆ ಉಪಯೋಗಿಸುತ್ತೇದ್ದೇವೆ ಎಂದು ಪ್ರಶ್ನೆ ಮಾಡಿದರು. ಪ್ಲಾಸ್ಟಿಕ್ ಎಂಬುದು ಜೀವ ಸಂಕುಲಕ್ಕೆ ಮಾರಕ. ನಾಳೆ ಎಲ್ಲವೂ ಕೂಡ ರೋಗಗಸ್ತವಾಗಿ ಸತ್ತು ಹೋಗುತ್ತದೆ. ಒಂದು ದಿನ, ಭೂಮಿಯೂ ಕೂಡ ಮುಳುಗುತ್ತದೆ. ಪ್ರಸ್ತುತ ಪ್ಲಾಸ್ಟಿಕ್ ಎಂದರೇ ಇದೊಂದು ಜೀವನದ ಅವಿಭಾಜ್ಯ ಅಂಗವಾಗಿದೆ. ಪ್ಲಾಸ್ಟಿಕ್ ಎಂಬುದನ್ನು ಮನುಷ್ಯ ಮಾಡಿರುವ ದೈತ್ಯ ರಾಕ್ಷಸ. ಇದರಿಂದ ದೇವರು ಸೃಷ್ಠಿ ಮಾಡಿದ ವಸ್ತುಗಳೆಲ್ಲಾ ಅಂತ್ಯವಾಗಿದೆ. ಆದರೇ ತಾನೆ ಸೃಷ್ಠಿ ಮಾಡಿದ ಪ್ಲಾಸ್ಟಿಕ್ ಗೆ ಅಂತ್ಯವೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಲ್ಲಾ ಕಡೆಯಿಂದ ಕೊನೆಗೆ ಸಮುದ್ರಕ್ಕೆ ಪ್ಲಾಸ್ಟಿಕ್ ಸೇರುತ್ತದೆ ಎಂದು ಕಿವಿಮಾತು ಹೇಳಿದರು. ಪ್ಲಾಸ್ಟಿಕ್ ಮಾಲಿನ್ಯವು ಪರಿಸರ ವ್ಯವಸ್ಥೆ, ಜಲ ಹಾಗೂ ಜಲಚರಜೀವಿಗಳು, ವನ್ಯಜೀವಿಗಳು, ಮಾನವನ ಆರೋಗ್ಯ ಸೇರಿದಂತೆ ಹಲವು ವಿಚಾರಗಳಲ್ಲಿ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಅಲ್ಲದೆ ಇದು ಇಂದು ಜಾಗತಿಕ ಸಮಸ್ಯೆಯಾಗಿದೆ. ಪ್ಲೇಟ್‌ನಿಂದ, ಬಾಟಲ್ ವರೆಗೆ ಎಲ್ಲವೂ ಪ್ಲಾಸ್ಟಿಕ್ ಆಗಿದೆ:ಜಗತ್ತಿನಾದ್ಯಂತ ಹಲವು ರಾಷ್ಟ್ರಗಳು ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಜಾಗೃತಿ, ಹೋರಾಟ, ಅಭಿಯಾನಗಳನ್ನು ನಡೆಸುತ್ತಿವೆ. ಏಕ ಬಳಕೆಯ ಪ್ಲಾಸ್ಟಿಕ್ ನಿಷೇದಕ್ಕೂ ಒತ್ತು ನೀಡಿವೆ. ಆದರೂ ಪ್ಲಾಸ್ಟಿಕ್ ಬಳಕೆಯ ಪ್ರಮಾಣ ಕಡಿಮೆಯಾಗಿಲ್ಲ. ಇಂದು ಪ್ಲಾಸ್ಟಿಕ್ ನಮ್ಮ ಜೀವನಸಂಗಾತಿಯಾಗಿದೆ ಎಂದರೇ ತಪ್ಪಾಗಲಿಕ್ಕಿಲ್ಲ. ತಿನ್ನುವ ಪ್ಲೇಟ್‌ನಿಂದ ಕುಡಿಯುವ ನೀರಿನವರೆಗೆ ಎಲ್ಲವೂ ಪ್ಲಾಸ್ಟಿಕ್ ಆಗಿದ್ದು, ಇವುಗಳಿಂದ ದೂರ ಉಳಿಯವುದು ಕಷ್ಟಸಾಧ್ಯವಾಗಿದೆ. ಆದರೂ ನಮ್ಮ ಜಗತ್ತಿನ ಭವಿಷ್ಯಕ್ಕಾಗಿ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವುದು ಅವಶ್ಯವಾಗಿದೆ. ಪ್ಲಾಸ್ಟಿಕ್ ನಿರ್ಮೂಲನೆ ಮಾಡಿ ಪರಿಸರ ಉಳಿಸಲು ನಾವು ನೀಡಬಹುದಾದ ಕೊಡುಗೆ ಏನು? ಪ್ಲಾಸ್ಟಿಕ್ ಮಾಲಿನ್ಯ ತಡೆಯಲು ನಾವು ಅನುಸರಿಸುಬಹುದಾದ ಮಾರ್ಗಗಳೇನು ಕಂಡುಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು. ಪ್ಲಾಸ್ಟಿಕ್ ಚೀಲಗಳು, ನೀರಿನ ಬಾಟಲಿಗಳು, ಕಾಫಿ ಕಪ್, ಸ್ಟ್ರಾ ಮುಂತಾದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆ ಕಡಿಮೆ ಮಾಡಿ. ಅದರ ಬದಲು ಮಣ್ಣು, ಗಾಜು, ಸ್ಟೀಲ್, ಬಟ್ಟೆ ಕವರ್ ಬಳಸಿ. ಶಾಂಪಿಂಗ್ ಹೋಗುವಾಗ ಮರೆಯದೇ ಬಟ್ಟೆಯ ಬ್ಯಾಗ್ ತೆಗೆದುಕೊಂಡು ಹೋಗಲು ಮರೆಯಬಾರದು. ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡುವ ಮೂಲಕ ಮತ್ತು ಇತರ ತ್ಯಾಜ್ಯಗಳಿಂದ ಪ್ರತ್ಯೇಕಿಸುವ ಮೂಲಕ ಸರಿಯಾದ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಿ. ನಿಮ್ಮ ಮನೆ ಹಾಗೂ ಕಚೇರಿ, ಕಾರ್ಯಕ್ರಮಗಳಲ್ಲಿ ಮರುಬಳಕೆಯ ವಸ್ತುಗಳಿಗೆ ಹೆಚ್ಚು ಆದ್ಯತೆ ಕೊಡಬೇಕು ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟನೆಯ ನಂತರ ಪ್ಲಾಸ್ಟಿಕ್ ಅನಿವಾರ್ಯ ಪರ್ಯಾಯ ಕುರಿತು ಗೋಷ್ಠಿಯಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಂಪನ್ಮೂಲ ವ್ಯಕ್ತಿ ಹೆಚ್.ಎಸ್. ಚಂದ್ರಶೇಖರ್ ಸವಿಸ್ತಾರವಾಗಿ ತಿಳಿಸಿಕೊಟ್ಟರು. ಕಾರ್ಯಕ್ರಮದ ನಿರ್ವಹಣೆಯನ್ನು ಕನ್ನಡ ಉಪನ್ಯಾಸಕ ಕೆ.ವಿ. ನಿರಂಜನ್ ನಡೆಸಿದರು.
ಮಧ್ಯಾಹ್ನದ ಗೋಷ್ಠಿಯಲ್ಲಿ ಪ್ಲಾಸ್ಟಿಕ್ ನಿಂದಾಗುವ ದುಷ್ಪಾರಿಣಾಮಗಳು ವಿಚಾರವಾಗಿ ಐಡಿಎಸ್‌ಜಿ ಸರ್ಕಾರಿ ಕಾಲೇಜು ಚಿಕ್ಕಮಗಳೂರು ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಹೆಚ್.ಕೆ. ಮಕರಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು. ಕನ್ನಡ ಉಪನ್ಯಾಸಕ ಟಿ. ದುಮ್ಮೇಗೌಡ ನಿರ್ವಹಿಸಿದರು. ಮೂರನೇ ಮತ್ತು ನಾಲ್ಕನೇ ಗೋಷ್ಠಿಯಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ ನಡೆಸಲಾಯಿತು. ಸಂಜೆ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯವಾಯಿತು.ಕಾರ್ಯಕ್ರಮದಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ಪ್ರಾಂಶುಪಾಲ ಎಸ್.ಹೆಚ್. ಗಂಗೇಗೌಡ, ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಹೆಚ್. ಪ್ರತಾಪ್ ಕುಮಾರ್ ಶೆಟ್ಟಿ, ಸರಕಾರಿ ಗೃಹ ವಿಜ್ಞಾನ ಕಾಲೇಜು ಪ್ರಾಂಶುಪಾಲ ಎನ್.ಕೆ. ಲೀಲಾವತಿ,ಕನ್ನಡ ವಿಭಾಗದ ಮುಖ್ಯಸ್ಥ ಎಸ್. ಸುಂದರೇಶ್, ಕಾಲೇಜಿನ ಸಂಚಾಲಕ ಪಿ.ಎನ್. ವಿನಯ್ ಕುಮಾರ್, ಕನ್ನಡ ಸಹಾಯಕ ಪ್ರಾಧ್ಯಾಪಕ ಎನ್.ಸಿ. ರವಿ, ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕಿ ಮಧುಶ್ರೀ, ಕೆ.ಬಿ. ಪೂರ್ಣಿಮಾ, ಹೆಚ್.ಎಸ್. ಚಂದ್ರೇಖರ್ ಭಾಗವಹಿಸಿದ್ದರು.